ವಿಜಯನಗರ ಸಾಮ್ರಾಜ್ಯದ ದೊರೆ ಎರಡನೇ ಹರಿಹರನ ಆಳ್ವಿಕೆಯ ಕಾಲದ ದಾನ ಶಾಸನ ಇದಾಗಿದೆ.

ಸಂಡೂರು: ವಿಜಯನಗರ ತಿರುಗಾಟ ಸಂಶೋಧನಾ ತಂಡದ ಸದಸ್ಯರು ಭಾನುವಾರ ತಾಲೂಕಿನ ಡಿ.ಅಂತಾಪುರ (ದೊಡ್ಡ ಅಂತಾಪುರ) ಗ್ರಾಮದ ಗ್ಯಾನಪ್ಪ ಎಂಬ ರೈತನ ಹೊಲದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇರಿದ ಅಪ್ರಕಟಿತ, ಅಪರೂಪದ ಜೈನ ದಾನ ಶಾಸನವೊಂದನ್ನು ಪತ್ತೆ ಹಚ್ಚಿದ್ದಾರೆ.

ಈ ಸಂಶೋಧನೆಯು ವಿಜಯನಗರ ಅರಸರ ಕಾಲದ ಜೈನ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಲಿದೆ. ವಿಜಯನಗರ ತಿರುಗಾಟ ಸಂಶೋಧನಾ ತಂಡದ ಪ್ರೊ. ಎಚ್.ತಿಪ್ಪೇಸ್ವಾಮಿ, ಡಾ. ಗೋವಿಂದ, ಡಾ. ಕೃಷ್ಣೇಗೌಡ, ಸಂಶೋಧಕರಾದ ಎಚ್.ರವಿ, ಇಸ್ಮಾಯಿಲ್ ಸಿದ್ದಿಕಿ, ಅಶೋಕ್ ನಾಯಕ್ ದಿದ್ದಿಗಿ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಇತಿಹಾಸ ವಿಭಾಗದ ವಿದ್ಯಾರ್ಥಿಗಳಾದ ಮಾರುತಿ, ಶ್ರೀಕಾಂತ, ಸ್ಥಳೀಯರಾದ ರಾಗಿ ಶಿವರಾಮಪ್ಪ, ಪಾಪಯ್ಯ, ತಾಯಪ್ಪ ಅವರ ಸಹಕಾರದೊಂದಿಗೆ ಈ ಶಾಸನವನ್ನು ಪತ್ತೆ ಹಚ್ಚಿದ್ದಾರೆ.

ದಾನ ಶಾಸನ:

ವಿಜಯನಗರ ಸಾಮ್ರಾಜ್ಯದ ದೊರೆ ಎರಡನೇ ಹರಿಹರನ ಆಳ್ವಿಕೆಯ ಕಾಲದ ದಾನ ಶಾಸನ ಇದಾಗಿದೆ. ಈ ಶಾಸನವು ಕ್ರಿ.ಶ. ೧೩೯೫ (ಶಕ ೧೩೧೭, ಕ್ರೋಧ ಸಂವತ್ಸರ)ಕ್ಕೆ ಸೇರಿದ್ದಾಗಿದೆ. ಶಾಸನದ ಪ್ರಕಾರ ವಿಜಯನಗರದ ಚಿಕ್ಕೋಡೆಯರಂಗಡಿ ಬಸದಿಯಲ್ಲಿದ್ದ ೧೭ನೇ ಜೈನ ತೀರ್ಥಂಕರರಾದ ಕುಂಥುನಾಥರ ಹೆಸರಿನಲ್ಲಿ ಆವಿನಮಡುವಿನ ಅಂತಾಪುರದಲ್ಲಿನ ಹನ್ನೆರಡು ಕೊಳಗ ಬೀಜ ಬಿತ್ತಬಹುದಾದಷ್ಟು ಭೂಮಿಯನ್ನು ತೆರಿಗೆ ವಿನಾಯಿತಿಯೊಂದಿಗೆ ಜೈನ ಬಸದಿಗೆ ದಾನವಾಗಿ ನೀಡಲಾಗಿದೆ.

ಶಾಸನದ ಎಡ ಭಾಗದಲ್ಲಿ ಸೂರ್ಯ, ಬಲ ಭಾಗದಲ್ಲಿ ಚಂದ್ರ, ಮಧ್ಯದಲ್ಲಿ ಮುಕ್ಕೊಡೆಯ ಕೆಳಗೆ ಪದ್ಮಾಸನದಲ್ಲಿ ಆಸೀನರಾಗಿರುವ ಜೀನಮೂರ್ತಿಯ ಶಿಲ್ಪವಿದೆ. ಸುಮಾರು ಐದು ಅಡಿ ಎತ್ತರ ಹಾಗೂ ಒಂದೂವರೆ ಅಡಿ ಅಗಲವಿರುವ ಈ ಶಾಸನದಲ್ಲಿ ಒಟ್ಟು ೧೩ ಸಾಲುಗಳಿದ್ದು, ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿ ಕೆತ್ತಲಾಗಿದೆ.

ಹಂಪಿಯ ಜೈನ ಪರಂಪರೆಗೆ ನಂಟು:

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ, ಶಾಸನದಲ್ಲಿ ಉಲ್ಲೇಖಿಸಿರುವ ಕುಂಥುನಾಥರು ೧೭ನೇ ತೀರ್ಥಂಕರರಾಗಿದ್ದು, ಹಂಪಿಯಲ್ಲಿರುವ ದ್ರಾವಿಡ ಶೈಲಿಯ ಗಾಣಿಗಿತ್ತಿ ಜಿನಾಲಯಕ್ಕೂ ಇವರ ಹೆಸರಿನ ನಂಟಿದೆ. ವಿಜಯನಗರದ ದಂಡನಾಯಕ ಇರುಗಪ್ಪನು ಆ ಜಿನಾಲಯವನ್ನು ನಿರ್ಮಿಸಿ, ಅಭಯಾರಣ್ಯವನ್ನು ಕುಂಥುನಾಥರಿಗೆ ದಾನವಾಗಿ ನೀಡಿದ್ದಾನೆ ಎಂಬುದನ್ನು ಅಲ್ಲಿಯ ಶಾಸನಗಳು ದೃಢಪಡಿಸುತ್ತಿವೆ ಎಂದು ತಿಳಿಸಿದರು.

ಕುಂಥುನಾಥ ತೀರ್ಥಂಕರರ ಹೆಸರಿನ ಇನ್ನೆರಡು ಶಾಸನ ಪತ್ತೆ:

ವಿಜಯನಗರ ತಿರುಗಾಟ ಸಂಶೋಧನಾ ತಂಡವು ಇದೇ ಸ್ಥಳದಲ್ಲಿ ಕುಂಥುನಾಥ ತೀರ್ಥಂಕರರ ಹೆಸರಿನ ಇನ್ನೂ ಎರಡು ಶಾಸನಗಳನ್ನು ಪತ್ತೆ ಹಚ್ಚಿದೆ.

ದೃಶ್ಯಕಲಾ ವಿಭಾಗದ ಡಾ.ಕೃಷ್ಣೇಗೌಡ ಅವರ ಪ್ರಕಾರ ಇಂತಹ ಅಪರೂಪದ ಶಾಸನಗಳನ್ನು ಪುರಾತತ್ವ ಇಲಾಖೆ ವೈಜ್ಞಾನಿಕವಾಗಿ ಸಂರಕ್ಷಿಸಿ, ಮಳೆ, ಗಾಳಿ ಮತ್ತು ಬಿಸಿಲಿನಿಂದ ರಕ್ಷಿಸಿ, ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಮತ್ತಷ್ಟು ಸಂಶೋಧನೆಗೆ ಅವಕಾಶ:

ಪ್ರಸ್ತುತ ಗ್ರಾಮದಲ್ಲಿ ಯಾವುದೇ ಜೈನ ಬಸದಿ ಕಾಣಿಸದಿದ್ದರೂ ಇಲ್ಲಿನ ಮಲ್ಲಿಕಾರ್ಜುನ ದೇವಾಲಯದಲ್ಲಿರುವ ಪ್ರಕಟಿತ ಶಾಸನದಲ್ಲಿ ಅನಂತಾಪುರ ಎಂದು ಉಲ್ಲೇಖವಾಗಿರುವ ಗ್ರಾಮವನ್ನು ಹೊಸದಾಗಿ ಪತ್ತೆ ಹಚ್ಚಲಾಗಿರುವ ಶಾಸನದಲ್ಲಿ ಅಂತಾಪುರ ಎಂದು ದಾಖಲಿಸಿರುವುದು ಗಮನಾರ್ಹವಾಗಿದೆ. ಈ ವ್ಯತ್ಯಾಸ ಹಾಗೂ ಹೊಸ ಶಾಸನಗಳ ಅಧ್ಯಯನದಿಂದ ಗ್ರಾಮದ ಇತಿಹಾಸದ ಕುರಿತು ಇನ್ನಷ್ಟು ಮಹತ್ವದ ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.