ಬೆಳಗಾವಿಯಲ್ಲಿ 27ರಿಂದ ಎರಡು ದಿನ ಜೈನ ಉತ್ಸವ

| Published : Aug 21 2024, 12:37 AM IST

ಸಾರಾಂಶ

ಜೈನ ಇಂಟರ್‌ನ್ಯಾಶನಲ್ ಟ್ರೇಡ್‌ ಆರ್ಗನೈಜೇಶನ್‌ (ಜಿತೊ) ಸಂಸ್ಥೆ ಬೆಳಗಾವಿ ವಲಯದ ವತಿಯಿಂದ ಆ.27 ಮತ್ತು 28ರಂದು 3ನೇ ಆವೃತ್ತಿಯ ಎರಡು ದಿನಗಳ ಜೈನ ಉತ್ಸವವನ್ನು ನಗರದ ಕೆಎಲ್‌ಇ ಡಾ.ಬಿ.ಎಸ್‌. ಜೀರಗೆ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜೈನ ಇಂಟರ್‌ನ್ಯಾಶನಲ್ ಟ್ರೇಡ್‌ ಆರ್ಗನೈಜೇಶನ್‌ (ಜಿತೊ) ಸಂಸ್ಥೆ ಬೆಳಗಾವಿ ವಲಯದ ವತಿಯಿಂದ ಆ.27 ಮತ್ತು 28ರಂದು 3ನೇ ಆವೃತ್ತಿಯ ಎರಡು ದಿನಗಳ ಜೈನ ಉತ್ಸವವನ್ನು ನಗರದ ಕೆಎಲ್‌ಇ ಡಾ.ಬಿ.ಎಸ್‌. ಜೀರಗೆ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿತೊ ಸಂಸ್ಥೆಯ ಬೆಳಗಾವಿ ವಿಭಾಗದ ಮುಖ್ಯ ಕಾರ್ಯದರ್ಶಿ ಅಶೋಕ ಕಟಾರಿಯಾ, ಜಿತೊ ಸಂಸ್ಥೆ ವತಿಯಿಂದ ಈಗಾಗಲೇ ಎರಡು ಉತ್ಸವವನ್ನು ಬೆಳಗಾವಿಯಲ್ಲಿ ನಡೆಸಲಾಗಿದೆ. ಇದೀಗ ಜಿತೊ ಕೆಕೆಜಿ ವಲಯ ಮತ್ತು ಮಹಾರಾಷ್ಟ್ರ ವಲಯಗಳ ಸಹಯೋಗದಲ್ಲಿ 3ನೇ ಆವೃತ್ತಿ ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ಎಲ್ಲ ಸಮಾಜಕ್ಕೆ ಅನುಕೂಲವಾಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಆ.27ರಂದು ಬೆಳಗ್ಗೆ 11 ಗಂಟೆಗೆ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಜಿತೊ ಅಪೆಕ್ಸ್‌ ಜೆಬಿಎನ್ ಮುಖ್ಯಸ್ಥ ರಾಜೇಶ ಚಂದನ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದು, ಉದ್ಯಮಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಬಳಿಕ ಪ್ರೇರಕ ಕಥಾಗಾರ ಶಾಂತಿಲಾಲ ಗುಲೆಛಾ ಅವರು ಜೀವನದಲ್ಲಿ ಅತ್ಯುತ್ತಮ ನಡವಳಿಕೆ ಕುರಿತು ಮಾತನಾಡಲಿದ್ದಾರೆ. ಇಂದಿನ ವ್ಯಾಪಾರೀಕರಣದಲ್ಲಿ ಯಾಂತ್ರಿಕತೆಯ ಬಗ್ಗೆ ಕೇವಲ್‌ ಕಿಶನ್‌ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ ಜಿತೊ ಜಾಬ್ಸ್‌ ಯೋಜನೆಯಡಿ ಬೃಹತ್‌ ಉದ್ಯೋಗ ಮೇಳ ನಡೆಯಲಿದೆ. ನಾಡಿನ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ ಎಂದು ಹೇಳಿದರು.

ಆ.28ರಂದು ಬೆಳಗ್ಗೆ ಶಾರ್ಕ್‌ ಟ್ಯಾಂಕ್‌ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಡಿ ಹೊಸದಾಗಿ ಪ್ರಾರಂಭಿಸಿದ ಉದ್ಯಮಗಳಲ್ಲಿ ಹಣ ಹೂಡುವ ಮೂಲಕ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಾಗುವುದು. ಈ ರೀತಿಯ ಪ್ರಯತ್ನ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಳಗಾವಿಯಲ್ಲಿ ನಡೆಯುತ್ತಿದ್ದು, ಈಗಾಗಲೇ 20ಕ್ಕೂ ಹೆಚ್ಚು ಸ್ಟಾರ್ಟಅಪ್ ಕಂಪನಿಗಳು ಹೆಸರು ನೋಂದಾಯಿಸಿಕೊಂಡಿವೆ. ಓಂ ಜೈನ್‌, ಯಶ್‌ ರಾಜೇಂದ್ರ, ಅರುಣ ಲಾಲವಾಣಿ, ವಿನೋದ ಜೈನ, ಶಿಖಾ ಹರಣ, ಸೇರಿದಂತೆ ಹೂಡಿಕೆದಾರರು ಭಾಗವಹಿಸಲಿದ್ದಾರೆ. ತದನಂತರ ಯುನಿಕಾರ್ನ್‌ ಸ್ಪೀಕರ್ ಸೌರಭ ಜೈನ ಅವರಿಂದ ಪ್ರೇರಣಾ ಭಾಷಣ ನಡೆಯಲಿದೆ. ಸಂಜೆ ರಿಶ್ತೆ ಜೈನ ವಧುವರರ ಸಮಾವೇಶ ಮತ್ತು ಜೈನ್ ಟ್ಯಾಲೆಂಟ್‌ ಕಾರ್ಯಕ್ರಮ ನಡೆಯಲಿವೆ.

ಎರಡು ದಿನಗಳರೀ ಕಾರ್ಯಕ್ರಮಗಳಲ್ಲಿ ಎಲ್ಲ ಸಮಾಜದವರು ಭಾಗವಹಿಸಬಹುದಾಗಿದೆ. ನೋಂದಣಿ ಕಡ್ಡಾಯವಾಗಿದ್ದು, ನೋದಣಿಗಾಗಿ ಜಿತೊ ಸಂಸ್ಥೆಯ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜೈನ ಉತ್ಸವ ಕಾರ್ಯಕ್ರಮ ಸಂಯೋಜಕ ಅಮಿತ ದೋಷಿ, ಸಹ ಸಂಯೋಜಕ ಪುಷ್ಪಕ ಹನುಮಣ್ಣವರ, ಜಿತೊ ಮಹಿಳಾ ಅಧ್ಯಕ್ಷೆ ಮಾಯಾ ಜೈನ್‌, ಜಿತೊ ಯೂತ್‌ ವಿಂಗ್‌ ಅಧ್ಯಕ್ಷ ದೀಪಕ ಸುಬೇದಾರ, ರಾಹುಲ್‌ ಹಜಾರೆ, ಅಭಯ ಆದಿಮನಿ, ಕುಂತಿನಾಥ ಕಲಮನಿ, ರಾಜ ದೊಡ್ಡಣ್ಣವರ, ನವರತ್ನ ಜೈನ ಇತರರು ಇದ್ದರು.