ಜೈನ ಧರ್ಮ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ: ಸಚಿವ ಸತೀಶ ಜಾರಕಿಹೊಳಿ

| Published : Aug 26 2025, 02:00 AM IST

ಜೈನ ಧರ್ಮ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ: ಸಚಿವ ಸತೀಶ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಜಮಖಂಡಿ: ಜೈನ ಧರ್ಮ, ವ್ಯಾಪಾರ, ಉದ್ಯೋಗ, ಕೃಷಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದೆ ಎಂದು ಲೋಕೊಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಜೈನ ಧರ್ಮ, ವ್ಯಾಪಾರ, ಉದ್ಯೋಗ, ಕೃಷಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದೆ ಎಂದು ಲೋಕೊಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದ ಪೊಲೊ ಮೈದಾನದಲ್ಲಿ ದಕ್ಷಿಣ ಭಾರತ ಜೈನ ಸಭಾ ವೀರಸೇವಾದಳ, ಮಧ್ಯವರ್ತಿ ಸಮಿತಿ ವತಿಯಿಂದ ಸೋಮವಾರ ದಿ.ರಾವಸಾಹೇಬ ಅ.ಪಾಟೀಲ ಬೋರಗಾಂವಕರ ವೇದಿಕೆಯಲ್ಲಿ ಆಯೋಜಿಸಿದ್ದ ಪ್ರಥಮಾಚಾರ್ಯ ಶಾಂತಿಸಾಗರ ಮಹಾರಾಜರ 70ನೇ ಪುಣ್ಯತಿಥಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೈನ ಧರ್ಮ ವಿಶ್ವಕ್ಕೆ ಶಾಂತಿ, ಅಹಿಂಸೆಯನ್ನು ಸಾರುತ್ತ ಸಮಾಜದ ಒಳಿತಿಗೆ ಕಾರ್ಯನಿರ್ವಹಿಸುತ್ತ ಬಂದಿದೆ. ಹೊರರಾಜ್ಯಗಳಲ್ಲಿ ಕನ್ನಡ ಉಳಿಸಿ ಬೆಳೆಸುತ್ತಾ ಬಂದಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಯೋಜನಾ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ ಮಾತನಾಡಿ, ಜೈನ ಧರ್ಮ ಅಹಿಂಸೆಯನ್ನು ಸಾರಿ ಅದರಂತೆ ನಡೆದುಕೊಂಡಿದೆ. ಮಹತ್ಮಾ ಗಾಂಧೀಜಿ ಅವರು ಅಹಿಂಸಾ ಮಾರ್ಗದಿಂದ ಸ್ವತಂತ್ರ ಪಡೆಯಲು ಪ್ರೇರಣೆ ನೀಡಿದೆ ಎಂದು ಅಭಿಪ್ರಾಯಪಟ್ಟರು.

ಸಕ್ಕರೆ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಜೋತಿ ಬೆಳಗಿಸಿ ಮಾತನಾಡಿ, ಜೈನಧರ್ಮದಿಂದ ಪ್ರಕೃತಿ ಉಳಿದಿದೆ. ಅಹಿಂಸೆಯ ಮಾರ್ಗದಿಂದ ಎಲ್ಲ ಪ್ರಾಣಿ ಪಕ್ಷಿಗಳಲ್ಲಿ ದಯೆಯನ್ನು ಧರ್ಮ ಹೇಳಿದೆ. ಜೈನ ಧರ್ಮದ ಐದು ತತ್ವಗಳನ್ನು ಅಳವಡಿಸಿಕೊಂಡರೇ ವಿಶ್ವವೇ ಸುಂದರ ತೋಟದಂತೆ ಕಂಗೊಳಿಸುತ್ತದೆ. ಸಾಮಾಜಿಕ ಮೌಲ್ಯಗಳನ್ನು ನೀಡಿದ್ದಲ್ಲದೆ, ಅದರಂತೆ ನಡೆದು ತೊರಿಸಿದೆ ಎಂದ ಅವರು, ಜೈನಧರ್ಮಕ್ಕೆ ಪ್ರತ್ಯೆಕ ನಿಗಮ ಮಂಡಲಿ ಸ್ಥಾಪಿಸಲು ಮನವಿ ಸಲ್ಲಿಸಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂಧು ಹೇಳಿದರು.

ಮಾಜಿ ಸಚಿವ, ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಜೈನ ಧರ್ಮ ನಶಿಸಿ ಹೋದ ಸಂದರ್ಭದಲ್ಲಿ ಶಾಂತಿಸಾಗರ ಮಹಾರಾಜರು ಪುನರುತ್ಥಾನ ಮಾಡಿದರು. ತತ್ವ ಸಿದ್ಧಾಂತಗಳನ್ನು ಅವುಗಳ ಹಿರಿಮೆಯನ್ನು ಸಾರಿದರು. ಕಠಿಣ ತಪಸ್ಸು ಪರಿಶ್ರಮದಿಂದ ಆತ್ಮೋದ್ಧಾರದ ಮಾರ್ಗ ತೋರಿಸಿಕೊಟ್ಟರು ಎಂದ ಅವರು, ಅಥಣಿ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ಜನಿಸಿದ ನಿತ್ಯಾನಂದ ಮುನಿ ಮಹಾರಾಜರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಹಸ್ತದ ಚಿನ್ಹೆ ಬಳಸಲು ತಿಳಿಸಿದ್ದರು. ಅಂದಿನಿಂದ ಕಾಂಗ್ರೆಸ್‌ನ ಗುರುತು ಹಸ್ತವಾಯಿತು ಎಂದು ನೆನಪಿಸಿಕೊಂಡರು.

ಧರ್ಮಸ್ಥಳದ ವಿಚಾರವಾಗಿ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಂಡು ಧಾರ್ಮಿಕ ಭಾವನೆಗೆ ಧಕ್ಕೆ ತರುವರ ವಿರುದ್ಧ ಕ್ರಮ ಜರುಗಿಸಲಿದೆ ಎಂದು ವಿಶ್ವಾಸವ್ಯಕ್ತ ಪಡಿಸಿದರು. ಜೈನ ಸಮಾಜದ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ,. ವಿಜಯ ಸೌಹಾರ್ದ ಬ್ಯಾಂಕನ್ನು ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದ್ದನ್ನು ನೆನಪಿಸಿಕೊಂಡರು. ಬೀಳಗಿ ಶಾಸಕ ಜೆ.ಟಿ.ಪಾಟೀಲ ಜಮಖಂಡಿ, ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿದರು. ಸ್ಥಳೀಯ ಓಲೆ ಮಠದ ಆನಂದ ದೇವರು ಆಶೀರ್ವಚನ ನೀಡಿದರು.

ನಾಂದಣಿ ಸಂಸ್ಥಾನ ಮಠದ ಜನಸೇನಾ ಭಟ್ಟಾರಕರು, ವರೂರು ನವಗ್ರಹತೀರ್ಥದ ಧರ್ಮಸೇನಾ ಭಟ್ಟಾರಕರು, ಸೋಂದಾ ಮಠದ ಭಟ್ಟಾರಕರು, ಕೊಲ್ಹಾಪುರದ ಲಕ್ಷ್ಮಿಸೇನಾ ಭಟ್ಟಾರಕರು, ಸದಲಗಾ ಶಾಸಕ ಗಣೇಶ ಹುಕ್ಕೇರಿ, ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಜಿ,ಎಸ್‌. ನ್ಯಾಮಗೌಡ, ಬೆಳಗಾವಿ ಶಾಸಕ ಅಭಯ ಪಾಟೀಲ, ಮಾಜಿ ಸಚಿವ ಎಸ್‌.ಆರ್‌. ಪಾಟೀಲ, ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ. ಸಹಕಾರ ರತ್ನ ಉತ್ತಮ .ರಾ. ಪಾಟೀಲ, ಬಿ.ಎಸ್‌. ಸಿಂದೂರ, ವೀರ ಸೇವಾದಳ ಸಮಿತಿಯ ಅಧ್ಯಕ್ಷ ಬಾಲಚಂದ್ರ ಪಾಟೀಲ, ವಿಜಯ ಪಾಟೀಲ, ಅಭಿನಂದನ ಪಾಟೀಲ, ರಾವಸಾಹೇಬ್ ಪಾಟೀಲ, ಜೈನ ಸಮಾಜದ ಮುಖಂಡರು ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಭಾವನಾ ಬೆಳಗಲಿ ಪ್ರಾರ್ಥಿಸಿದರು, ಬಾಹುಬಲಿ ಉಪಾಧ್ಯೆ ಶಾಂತಿ ಮಂತ್ರ ವಾಚಿಸಿದರು. ಅರುಣ ಕುಮಾರ ಶಹಾ ಸ್ವಾಗತಿಸಿದರು. ಅಜೀತಕುಮಾರ ಭಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವರ್ಧಮಾನ ನ್ಯಾಮಗೌಡ ವಂದಿಸಿದರು.

ಭಾವಚಿತ್ರದ ಭವ್ಯ ಮೆರವಣಿಗೆ: ಕಾರ್ಯಕ್ರಮಕ್ಕೂ ಮುಂಚೆ ಹಳೇಯ ತಹಸೀಲ್ದಾರ ಕಚೇರಿಯಿಂದ ಶಾಂತಿಸಾಗರ ಮಹಾರಾಜರ ಭಾವಚಿತ್ರದ ಭವ್ಯಮೆರವಣಿಗೆ ನಡೆಯಿತು. ನೂರಾರು ಜನ ಜೈನ ಸಮಾಜದ ಯುವಕರು ಬೈಕ್‌ ರ್‍ಯಾಲಿ ನಡೆಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪೊಲೊ ಮೈದಾನ ತಲುಪಿತು. ಮೈದಾನದಲ್ಲಿ ಧರ್ಮಧ್ವಜ ಹಾರಿಸಿ ನಮನ ಸಲ್ಲಿಸಲಾಯಿತು.

ಧರ್ಮಸ್ಥಳದ ವಿರುದ್ಧ ಸಂಚು ರೂಪಿಸಿ, ಧರ್ಮಾಧಿಕಾರಿಗಳ ಹೆಸರು ಕೆಡಿಸಲು ಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ನಕಲಿ ಯುಟ್ಯೂಬರ್‌ ನನ್ನು ಬಂಧಿಸಬೇಕು. ಅಲ್ಪಸಂಖ್ಯಾತರ ನಿಗಮದಲ್ಲಿ ಮುಸ್ಲಿಂ, ಸಿಖ್‌, ಪಾರ್ಸಿ, ಜೈನ ಸೇರಿ ಐದು ಸಮುದಾಯಗಳಿದ್ದು, ಜೈನಧರ್ಮಕ್ಕೆ ಹೆಚ್ಚಿನ ಅನುದಾನ ಬರುವುದಿಲ್ಲ. ಆದ್ದರಿಂದ ಪ್ರತ್ಯೇಕ ನಿಗಮ ರಚಿಸಲು ಸರ್ಕಾರ ಮುಂದಾಗಬೇಕು.. ಸಮಾಜ ಒಗ್ಗಟ್ಟಾಗಿ ಸಮಾಜದ ವಿರುದ್ಧ ಷಡ್ಯಂತ್ರಗಳು ನಡೆದಾಗ ಧ್ವನಿ ಎತ್ತುವ ಕೆಲಸವಾಬೇಕು. ತುಷ್ಟೀಕರಣ ರಾಜಕಾರಣ ಇರಬಾರದು.

- ಸಿದ್ದು ಸವದಿ ಶಾಸಕರು ತೇರದಾಳ