ಉತ್ತರ ಕನ್ನಡದಾದ್ಯಂತ ಮೊಳಗಿದ ಜೈಶ್ರೀರಾಮ

| Published : Jan 22 2024, 02:16 AM IST

ಸಾರಾಂಶ

ಅಯೋಧ್ಯೆಯಲ್ಲಿ ಸೋಮವಾರ ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಉತ್ತರ ಕನ್ನಡದಲ್ಲಿ ಸಂಭ್ರಮ ಮನೆಮಾಡಿದೆ. ಎಲ್ಲೆಲ್ಲೂ ಹಬ್ಬದ ವಾತಾವರಣ ಉಂಟಾಗಿದೆ. ದೇವಸ್ಥಾನ, ಮಠಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ವಸಂತಕುಮಾರ್ ಕತಗಾಲ

ಕಾರವಾರ: ಅಯೋಧ್ಯೆಯಲ್ಲಿ ಸೋಮವಾರ ರಾಮ ಮಂದಿರ ಲೋಕಾರ್ಪಣೆ ಉತ್ತರ ಕನ್ನಡದಾದ್ಯಂತ ಸಂಭ್ರಮ, ಸಡಗರಕ್ಕೆ ಕಾರಣವಾಗಿದೆ. ಜಿಲ್ಲೆಯ ಹಲವಡೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಗೆ ಜಿಲ್ಲೆಯೆ ರಾಮನಾಮ ಜಪಿಸಲಿದೆ.

ಹಲವು ದೇಗುಲಗಳನ್ನು ಸಿಂಗರಿಸಲಾಗಿದೆ. ರಸ್ತೆಗಳ ಇಕ್ಕೆಲಗಳಲ್ಲಿ ಬ್ಯಾನರ್, ಪೋಸ್ಟರ್ ಅಳವಡಿಸಲಾಗಿದೆ. ಆಟೋಗಳಲ್ಲಿ ಕೇಸರಿ ಬಾವುಟ ಹಾರಾಡುತ್ತಿದೆ. ಕೆಲವೆಡೆ ಮೆರವಣಿಗೆ ನಡೆದಿದೆ. ಜೈಶ್ರೀರಾಮ್ ಎಂಬ ಘೋಷ ಎಲ್ಲೆಡೆ ಕೇಳಿಬರುತ್ತಿದೆ. ಎಲ್ಲೆಲ್ಲೂ ಹಬ್ಬದ ವಾತಾವರಣ ಉಂಟಾಗಿದೆ.

ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಸಿದ್ಧಾಪುರ ತಾಲೂಕಿನ ಭಾನ್ಕುಳಿಯ ಶ್ರೀರಾಮದೇವಮಠದಲ್ಲಿ ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರಭಾರತೀ ಶ್ರೀಗಳವರ ಮಾರ್ಗದರ್ಶನ ಪಡೆದು ಸೋಮವಾರ ಅಕ್ಷರ ಸಹಸ್ರ ಶ್ರೀ ರಾಮತಾರಕ ಹವನ ಆಯೋಜಿಸಲಾಗಿದೆ. ಚತುರ್‌ದ್ರವ್ಯದಿಂದ ವೈದಿಕರು ಮತ್ತು ಗ್ರಹಸ್ಥರ ಸಹಕಾರದಿಂದ ಕಾರ್ಯಕ್ರಮ ಸಂಪನ್ನಗೊಳ್ಳಲಿದ್ದು, ಬೆಳಗ್ಗೆ 9.30ರಿಂದ ಗುರುಗಣಪತಿ ಪ್ರಾರ್ಥನೆಯೊಂದಿಗೆ ಹವನ ಪ್ರಾರಂಭವಾಗಲಿದೆ. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ನಡೆಯಲಿದೆ. 1.30ಕ್ಕೆ ಪ್ರಸಾದ ಭೋಜನ ವ್ಯವಸ್ಥೆಯಿದೆ. ಸಂಜೆ 6.30ರಿಂದ ಭಜನಾ ಕಾರ್ಯಕ್ರಮ, 7.30ರಿಂದ ತುಪ್ಪದಿಂದ ಸಹಸ್ರ ದೀಪೋತ್ಸವ ಏರ್ಪಡಿಸಲಾಗಿದೆ.

ಸ್ವರ್ಣವಲ್ಲೀ ಮಠದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಶ್ರೀಗಳ ಮಾರ್ಗದರ್ಶನದಲ್ಲಿ ಸೋಮವಾರ ಮುಂಜಾನೆ 6 ಗಂಟೆಯಿಂದ 23ರ ಮುಂಜಾನೆ 6 ಗಂಟೆ ತನಕ ರಾಮಭಕ್ತಿ ಜಾಗರಣ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಕ್ತಿ ಸಂಗೀತ, ರಾಮ ಭಜನೆ, ತಾಳಮದ್ದಳೆ ಏರ್ಪಡಿಸಲಾಗಿದೆ. 24 ಗಂಟೆ ಜಾಗರಣೆ ನಡೆಯಲಿದೆ. ನೂರಾರು ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಅಯೋಧ್ಯಾ ರಾಮಮಂದಿರದಲ್ಲಿ ಪ್ರತಿಷ್ಠಾಮಹೋತ್ಸವದ ಪ್ರಯುಕ್ತ ಗೋಕರ್ಣ ಮುಖ್ಯ ಕಡಲತೀರದಲ್ಲಿರುವ ರಾಮ ಮಂದಿರದಲ್ಲಿ ಶಾಕಲ್ ಋಕ್ ಸಂಹಿತಾ ಮಹಾಯಾಗ ಈಗಾಗಲೆ ಪ್ರಾರಂಭವಾಗಿದೆ. ಹಿರಿಯ ವೇದ ವಿದ್ವಾಂಸರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದೆ. ಮಂದಿರದ ಅರ್ಚಕ ವೇ. ಪ್ರಕಾಶ ಅಂಬೇಕರ, ವೇ. ಗಂಗಾರಾಮ ಜೋಗಳೇಕರ ವೇ. ಕೃಷ್ಣ ಜೋಗಭಟ್, ಮತ್ತಿತರ ವೈದಿಕರು ಪಾಲ್ಗೊಂಡಿದ್ದು, ಹರಿಹರೇಶ್ವರ ವೇದ ವಿದ್ಯಾಪೀಠದ ಪ್ರಾಚಾರ್ಯ ಉದಯ ಮಯ್ಯರ ಮತ್ತು ಪಾಠಶಾಲೆಯ ವಿದ್ಯಾರ್ಥಿಗಳು ಸಹಕಾರ ನೀಡುತ್ತಿದ್ದಾರೆ. ಜ. 23ರಂದು ಯಾಗ ಸುಸಂಪನ್ನಗೊಳ್ಳಲಿದೆ.

ಜ. 22ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಶ್ರೀಕುಮಾರ ಸಂಸ್ಥೆಯ ವತಿಯಿಂದ ಹೊನ್ನಾವರದ ಕರ್ಕಿ ಕೋಣಕಾರದಲ್ಲಿ ರಾಮಭಜನೆ, ಮಹಾಪೂಜೆ ಹಾಗೂ ಪ್ರಸಾದಭೋಜನ ಹಮ್ಮಿಕೊಳ್ಳಲಾಗಿದೆ. ಶ್ರೀಕುಮಾರ ಸಾರಿಗೆ ಸಂಸ್ಥೆಯ ಕಚೇರಿಯಲ್ಲಿ 3ಡಿ ಮಾದರಿಯಲ್ಲಿ 5.5 ಅಡಿ ಎತ್ತರದ ಪ್ರಭು ಶ್ರೀ ರಾಮನ ಪೋಟೋ ಅಳವಡಿಸಲಾಗಿದೆ. ಸೋಮವಾರ ಮುಂಜಾನೆ 10.30ಕ್ಕೆ ಕೂಜಳ್ಳಿಯ ಮಾರುತಿ ನಾಯ್ಕ ಇವರ ಮಹಾಸತಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಆನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಲಿದೆ.

ಕಾರವಾರದ ಮಾರುತಿ ದೇವಾಲಯದಲ್ಲಿ ಜ. 22ರಂದು ವಿಶೇಷ ಪೂಜೆ ಏರ್ಪಡಿಸಲಾಗಿದೆ.

ಜಿಲ್ಲೆಯ ಹಲವೆಡೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನತೆ ಸಂಭ್ರಮಿಸುತ್ತಿದ್ದಾರೆ. ಜಿಲ್ಲೆಯುದ್ದಕ್ಕೂ ಹಬ್ಬದ ಸಡಗರ, ಸಂಭ್ರಮ ಮನೆಮಾಡಿದೆ.