ಜಾಜೂರು ಗ್ರಾಪಂ ಶೀಘ್ರ ನಗರಸಭೆಯಾಗಲಿದೆ

| Published : Feb 23 2025, 12:30 AM IST

ಸಾರಾಂಶ

ಜಾಜೂರು ಗ್ರಾಮ ಪಂಚಾಯಿತಿಯನ್ನು ಮುಂದಿನ ಬಾರಿ ನಗರಸಭೆಯಾಗಿ ಪರಿವರ್ತಿಸಲಾಗುವುದು. ಈ ನಿಟ್ಟಿನಲ್ಲಿ ಸಿದ್ಧತೆ ನಡೆಯುತ್ತಿದೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶಾಸಕ ಕೆ. ಎಂ. ಶಿವಲಿಂಗೇಗೌಡ ತಿಳಿಸಿದರು. ನಗರ ಹೊರವಲಯದ ಜಾಜೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಲೀಲಾಬಾಯಿ ಚಂದ್ರಶೇಖರನಾಯ್ಕ್ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರಕ್ಕೆ ಹೊಂದಿಕೊಂಡಿರುವ ಜಾಜೂರು ಗ್ರಾಮ ಪಂಚಾಯಿತಿಯನ್ನು ಮುಂದಿನ ಬಾರಿ ನಗರಸಭೆಯಾಗಿ ಪರಿವರ್ತಿಸಲಾಗುವುದು. ಈ ನಿಟ್ಟಿನಲ್ಲಿ ಸಿದ್ಧತೆ ನಡೆಯುತ್ತಿದೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶಾಸಕ ಕೆ. ಎಂ. ಶಿವಲಿಂಗೇಗೌಡ ತಿಳಿಸಿದರು.

ನಗರ ಹೊರವಲಯದ ಜಾಜೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಲೀಲಾಬಾಯಿ ಚಂದ್ರಶೇಖರನಾಯ್ಕ್ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

ನಗರಸಭೆಗೆ ಸೇರ್ಪಡೆ ಮಾಡಲು ಅಗತ್ಯವಿರುವ ಎಲ್ಲಾ ಲಕ್ಷಣಗಳು ಕಂಡು ಬಂದಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಈ ಹಿಂದೆಯೇ ಇದಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆ ನಡೆದಿತ್ತು, ಹಲವಾರು ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿತ್ತು. ಜಾಜೂರು ಗ್ರಾಮ ಪಂಚಾಯಿತಿಯು ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಿಗಿಂತಲೂ ಭಿನ್ನವಾಗಿದೆ. ನಗರ ಪ್ರದೇಶದ ವ್ಯಾಪ್ತಿಯ ವಿಸ್ತೀರ್ಣವು ದೊಡ್ಡದಿದೆ, ನೂತನವಾಗಿ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಪರಿಶಿಷ್ಟ ಜಾತಿ ಲಂಬಾಣಿ ಸಮುದಾಯದ ಲೀಲಾಬಾಯಿ ಅವರನ್ನು ಅಧ್ಯಕ್ಷೆಯಾಗಿ ಮಾಡುವಲ್ಲಿ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರ ಆದರ್ಶ ಮೆಚ್ಚುಗೆ ಆಗುತ್ತಿದೆ, ನೂತನ ಅಧ್ಯಕ್ಷೆಯು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ನಿಟ್ಟಿನಲ್ಲಿ ಚಿಂತಿಸಬೇಕು ಎಂದರು.

ಇದಕ್ಕೂ ಮುನ್ನ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ತಹಸೀಲ್ದಾರ್ ಸಂತೋಷ್ ಕುಮಾರ್ ಅವರು, 17 ಸದಸ್ಯರು ಬಲವಿರುವ ಈ ಗ್ರಾಮ ಪಂಚಾಯಿತಿಯಲ್ಲಿ ನಿಕಟಪೂರ್ವ ಅಧ್ಯಕ್ಷೆಯಾಗಿದ್ದ ವನಿತಾಬಾಯಿ ಶೇಖರನಾಯ್ಕ್ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಲೀಲಾಬಾಯಿ ಚಂದ್ರಶೇಖರನಾಯ್ಕ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಲೀಲಾಬಾಯಿ ಚಂದ್ರಶೇಖರನಾಯ್ಕ್ ಅವರು ಜಾಜೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ತಾಲೂಕಿನ ಕಾಂಗ್ರೆಸ್ ಪಕ್ಷದ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು ನೂತನ ಅಧ್ಯಕ್ಷೆಗೆ ಅಭಿನಂದಿಸಿ ಶುಭಕೋರಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಓಂಕಾರಮೂರ್ತಿ, ಉಪಾಧ್ಯಕ್ಷ ಸಿದ್ದೇಶ್, ನಿಕಟಪೂರ್ವ ಅಧ್ಯಕ್ಷೆ ವನಿತಾಬಾಯಿ ಶೇಖರನಾಯ್ಕ್, ಮುಖಂಡರಾದ ಶಶಿಧರ್, ಅಡವಿಸ್ವಾಮಿ, ಧರ್ಮಣ್ಣ, ರಘು ಕೋಡಿಹಳ್ಳಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಶೇಖರ್ ಗೀಜಿಹಳ್ಳಿ, ಅಂಬರೀಷ್ ಸಂಕೋಡನಹಳ್ಳಿ, ಕೆಸಿಡಿ ಕುಮಾರ್‌, ಆನಂದನಾಯ್ಕ್ ಶಂಕರನಹಳ್ಳಿ, ಸಾಕಿ ಮಂಜುನಾಥ್, ಸಿದ್ದೇಶ್, ರಮೇಶ್, ಉಮೇಶ್ ನಾಗತಿಹಳ್ಳಿ, ಸದಸ್ಯ ಶ್ರೀನಿವಾಸ್ ಕಾಟಿಕೆರೆ, ಅನಿಲ್, ಸ್ವಾಮಿ, ಗ್ರಾಮ ಪಂಚಾಯಿತಿ ಕೆಲವು ಸದಸ್ಯರು, ಜಾಜೂರು, ಕಾಟಿಕೆರೆ, ಜಾಜೂರು ಬಣಜಾರ ತಾಂಡಾ, ಮುದ್ದನಹಳ್ಳಿ ತಾಂಡಾ ಗ್ರಾಮಗಳ ಹಲವರು ಸೇರಿದಂತೆ ಇತರರು ಉಪಸ್ಥಿತರಿದ್ದರು.