ಭಾರತೀಯ ಶಿಲ್ಪಕಲಾ ಕೌಶಲ್ಯಕ್ಕೆ ಅಪಾರವಾದ ಕೊಡುಗೆ ನೀಡಿ, ಕಲೆಯನ್ನು ಜೀವಂತವಾಗಿರಿಸಿದವರು ಅಮರಶಿಲ್ಪಿ ಜಕಣಾಚಾರಿ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಭಾರತೀಯ ಶಿಲ್ಪಕಲಾ ಕೌಶಲ್ಯಕ್ಕೆ ಅಪಾರವಾದ ಕೊಡುಗೆ ನೀಡಿ, ಕಲೆಯನ್ನು ಜೀವಂತವಾಗಿರಿಸಿದವರು ಅಮರಶಿಲ್ಪಿ ಜಕಣಾಚಾರಿ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಸೇರಿದಂತೆ ವಿಶ್ವದ ವಿವಿಧ ಕಡೆಗಳಲ್ಲಿ ಜಕಣಾಚಾರಿಗಳ ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿವೆ. ತಮ್ಮ ಜೀವನ ಮುಡುಪಾಗಿಟ್ಟು ಶಿಲ್ಪಕಲೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಬೇಲೂರು ಹಳೆಬೀಡು, ಸೋಮನಾಥಪುರ ದೇವಾಲಯಗಳಲ್ಲಿನ ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿವೆ. ಅಂತಹ ಶಿಲ್ಪಕಲೆ ನೋಡುವ ಭಾಗ್ಯ ದೊರೆತಿದೆ. ಇಂತಹ ವೈವಿದ್ಯಮಯ ಕಲೆಯಿಂದ ಕೂಡಿದ ಶಿಲ್ಪಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮುದಾಯವರು ಅಭಿವೃದ್ದಿ ಹೊಂದಬೇಕು ಎಂದರು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ಸೃಷ್ಟಿಗೆ ಕಾರಣರಾದ ವಿಶ್ವಕರ್ಮರು ತಮ್ಮ ಶಿಲ್ಪಕಲೆಯ ಮೂಲಕ ನಾಡಿಗೆ ಪರಿಚಯಿಸಿದ್ದಾರೆ. ತಮ್ಮ ಕಲೆಯ ಮೂಲಕ ನಾಜೂಕಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ ಇರವರಾಗಿದ್ದಾರೆ. ಚಾಲುಕ್ಯರ ಹಾಗೂ ಯೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೆಬೀಡಿನಲ್ಲಿ ನಿರ್ಮಿಸಿದ್ದಾರೆ ಎಂದರು.
ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಜಕನಾಚಾರಿ ಎಂದರೆ ಕಲ್ಲಿನಲ್ಲಿ ಪ್ರಾಣ ತುಂಬಿದ ಅಮರಶಿಲ್ಪಿ, ಹೊಯ್ಸಳ ಯುಗದ ವೈಭವಶಾಲಿ ವಾಸ್ತುಶಿಲ್ಪದಲ್ಲಿ ಅವರ ಕೈಚಳಕ, ಅವರ ದೃಷ್ಟಿ, ಶಿಸ್ತು ಇಂದೂ ಕೂಡ ಕಲ್ಲಿನ ಗೋಡೆಗಳ ಮೇಲೆ ಜೀವಂತವಾಗಿ ಮಾತಾಡುತ್ತವೆ. ಇವೆಲ್ಲವೂ ಅಮರಶಿಲ್ಪಿ ಜಕಣಾಚಾರಿಯಂತಹ ಶಿಲ್ಪಿಗಳ ತಪಸ್ಸಿನ ಫಲವಾಗಿದೆ ಎಂದು ಅಭಿಪ್ರಾಯಪಟ್ಟರು.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ ಮಾತನಾಡಿ, 12-13ನೇ ಶತಮಾನದಲ್ಲಿ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ಇತ್ತು. ಇದರಿಂದಲೇ ಶಿಲ್ಪಕಲೆಯಲ್ಲಿ ಅಪಾರವಾದ ಕೊಡುಗೆ ನೀಡಲು ಜಕಣಾಚಾರಿಯವರಿಗೆ ಸಾಧ್ಯಯಿತು. ಅದನ್ನು ಉಳಿಸಿಕೊಂಡು ಹೋಗುವ ಹೊಣೆ ಇಂದಿನ ಯುವಕರ ಮೇಲಿದೆ. ಬದಲಾದ ಕಾಲಘಟ್ಟದಲ್ಲಿ ತಂತ್ರಜ್ಞಾನ ಬಳಕೆಯ ಮೂಲಕ ಮತ್ತು ಮೆರಗು ನೀಡಲಾಗುತ್ತಿದೆ. ಇದರ ಜೊತೆಗೆ ಹಳೆಯದನ್ನು ಮರೆಯಬಾರದು ಎಂದು ತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಸುತಗುಂಡಾರ ಎಸ್.ಕೆ.ಪ್ರೌಢಶಾಲೆಯ ಮುಖ್ಯಗುರು ಅಪ್ಪಾಸಾಬ ಬಡಿಗೇರ ಮಾತನಾಡಿ, ಪ್ರಪಂಚದ ಎಲ್ಲ ವಿದ್ಯೆಗಳ ಮೂಲವಾಗಿರುವ ಜಕಣಾಚಾರಿ ಅವರನ್ನು ಜಗತ್ತಿನ ಮೊದಲ ಅಭಿಯಂತರ ಎನ್ನಬಹುದಾಗಿದೆ. ಜಕಣಾಚಾರಿಯವರ ಶಿಲ್ಪಕಲೆ ಜಗತ್ತಿನ ಎಲ್ಲಡೆ ಪಸರಿಸಿರುವ ಮೂಲಕ ನಾಡನ್ನು ಶ್ರೀಮಂತವನ್ನಾಗಿ ಮಾಡಿದೆ. ಜಕಣಾಚಾರಿ ಅವರ ಹೆಸರಿನಲ್ಲಿ ಸರಕಾರ ಪ್ರಶಸ್ತಿ ಕೊಡುತ್ತಿದ್ದು, 2 ಪ್ರಶಸ್ತಿಗಳು ಜಿಲ್ಲೆಗೆ ದೊರೆತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.ಮಳೆಯರಾಜೇಂದ್ರ ಮಠದ ಜಗನ್ನಾಥ ಶ್ರೀ ಮತ್ತು ನಾಲತವಾಡದ ಸುಧೀಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಸಮುದಾಯ ಮುಖಂಡ ಮೌನೇಶ ಬಡಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಭಾವಚಿತ್ರ ಮೆರವಣಿಗೆ: ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಜಕಣಾಚಾರಿ ಭಾವಚಿತ್ರದ ಮೆರವಣಿಗೆಗೆ ವಿಧಾನ ಪರಿಷತ್ ಶಾಸಕ ಪಿ.ಎಚ್. ಪೂಜಾರ ಚಾಲನೆ ನೀಡಿದರು. ಮೆರವಣಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನಗರದ ನಾನಾ ಕಡೆ ಸಂಚರಿಸಿ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು.