ಹಳ್ಳ ಹಿಡಿದ ಜಲ ಜೀವನ ಮಿಷನ್ ಯೋಜನೆ

| Published : Oct 11 2025, 12:03 AM IST

ಸಾರಾಂಶ

ಅರೆಬರೆ, ಕಳಪೆ ಕಾಮಗಾರಿಯಿಂದ ಮತ್ತಷ್ಟು ಸಮಸ್ಯೆ

ಏಕನಾಥ ಮೆದಿಕೇರಿ ಹನುಮಸಾಗರ

ಕುಷ್ಟಗಿ ತಾಲೂಕಿನ ಹಳ್ಳಿಗಳ ಜನರಿಗೆ ಜಲಜೀವನ ಮಿಷನ್‌ ಯೋಜನೆಯಡಿಯಲ್ಲಿ 24x7 ಕುಡಿಯುವ ನೀರು ಸರಬರಾಜು ಮಾಡುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿದೆ.

ನಾಲ್ಕೂವರೆ ವರ್ಷಗಳ ಹಿಂದೆ ಪ್ರಾರಂಭವಾದ ಈ ಯೋಜನೆ ಈವರೆಗೂ ಪೂರ್ಣಗೊಂಡಿಲ್ಲ, ಇನ್ನೂ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಆಶಾಭಾವನೆ ಹೊತ್ತ ಜನರ ಆಸೆಗೆ ತಣ್ಣೀರೆರೆಚಿದಂತಾಗಿದೆ. ಅರೆಬರೆ, ಕಳಪೆ ಕಾಮಗಾರಿಯಿಂದ ಮತ್ತಷ್ಟು ಸಮಸ್ಯೆ ಉದ್ಭವವಾಗಿದೆ. ಕಿತ್ತು ಹೋದ ಪೈಪ್‌ಲೈನ್‌, ಪೈಪ್‌ ಹಾಕಲು ತೆಗೆದ ತಗ್ಗುಗಳನ್ನು ಮುಚ್ಚದೇ ಇರುವುದರಿಂದ ವಾಹನ ಹಾಗೂ ಜನರ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಜಿಲ್ಲೆಯ ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ ಹಳ್ಳಿಗಳಲ್ಲಿ ಬಹು ಗ್ರಾಮ ಕುಡಿವ ನೀರು ಹಾಗೂ ಜಲ ಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ಗಂಗೆಯ ಶುದ್ಧ ನೀರು ತರುವ ಪೈಪ್‌ಲೈನ್‌ ಕಾಮಗಾರಿ ಕೆಲವೊಂದು ವಾರ್ಡ್‌ಗಳಲ್ಲಿ ಪೂರ್ಣಗೊಂಡಿದೆ. ಇನ್ನೂ ಕೆಲ ವಾರ್ಡ್‌ಗಳಲ್ಲಿ ಪೈಪ್ ಲೈನ್ ಹಾಕಿದರೆ ಕೆಲವಡೆ ಅದಕ್ಕಾಗಿ ಅಗೆದಿರುವ ಗುಂಡಿ ಹಾಗೇ ಬಿಟ್ಟಿದ್ದಾರೆ. ಆರಂಭವಾಗಿ ನಾಲ್ಕುವರೆ ವರ್ಷ ಕಳೆಯುತ್ತಾ ಬಂದರೂ ನಲ್ಲಿಗಳಿಗೆ ಹನಿ ನೀರು ಮಾತ್ರ ಬಂದಿಲ್ಲ. ಕೆಲವೆಡೆ ನಲ್ಲಿಗಳು ಸ್ಮಾರಕವಾಗಿ ನಿಂತರೆ ಕೆಲವೆಡೆ ಅದಕ್ಕೆ ಅಳವಡಿಸಿರುವ ಮೀಟರ್‌ಗಳು ಒಡೆದು ಹೋಗಿವೆ.

ಅವೈಜ್ಞಾನಿಕ ಪೈಪ್‌ಲೈನ್‌ ಜೋಡಣೆ: ಹನುಮಸಾಗರದಲ್ಲಿ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಆರಂಭಿಸಿದ್ದ ಗುತ್ತಿಗೆದಾರರು ಎಲ್ಲ ಕಾಲನಿಗಳಲ್ಲಿ ಪೈಪ್‌ ಅಳವಡಿಕೆಗಾಗಿ ಸಿಸಿ ರಸ್ತೆ ಅಗೆದು ಹಾಗೆ ಬಿಟ್ಟಿದ್ದಾರೆ. ದ್ವಿಚಕ್ರ ವಾಹನ ಸವಾರರು, ಮಕ್ಕಳು, ವೃದ್ಧರು ಮನೆಯಿಂದ ಹೊರ ಹೋಗಲು ಸಂಕಷ್ಟ ಎದುರಿಸುವಂತಾಗಿದೆ. ಕಾಮಗಾರಿ ಆಮೆಗತಿಯಲ್ಲಿ ನಡೆದಿರುವುದರಿಂದ ಸರಿಯಾಗಿ ನಿರ್ವಹಣೆ ಕೂಡ ಆಗುತ್ತಿಲ್ಲ. ಕಳಪೆ ಕಾಮಗಾರಿಯಿಂದ ಕೊಟ್ಯಂತರ ರೂಪಾಯಿ ಯೋಜನೆ ಹಳ್ಳ ಹಿಡಿದಂತಾಗಿದೆ. ಹನುಮಸಾಗರದಲ್ಲಿ 2020-21 ರಲ್ಲಿ ₹3.82 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾದ ಈ ಯೋಜನೆಯಲ್ಲಿ ಗ್ರಾಮದ 3362 ಕುಟುಂಬಗಳಿಗೆ ನಿರಂತರ ನೀರು ಒದಗಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯ, ಅಧಿಕಾರಿ ಮತ್ತು ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಈ ವರೆಗೂ ಯೋಜನೆ ಪೂರ್ಣಗೊಂಡಿಲ್ಲ. ಶೇ. ೭೦ರಷ್ಟು ಕಾಮಗಾರಿಯಾಗಿದೆ ಎಂದು ಹೇಳಲಾಗುತ್ತಿದ್ದು, ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡಿದೆ, ಮನೆಗಳಿಗೆ ಕೊಡುವ ಪೈಪ್‌ಲೈನ್‌ ಕೆಲವೆಡೆ ಬಾಕಿ ಇವೆ.

ಗುತ್ತಿಗೆದಾರರು ಸರಿಯಾಗಿ ಕಾರ್ಯ ನಿರ್ವಹಿಸದಿರುವುದರಿಂದ ಇಬ್ಬರು ಗುತ್ತಿಗೆದಾರರನ್ನು ಬದಲಾವಣೆ ಮಾಡಲಾಗಿದೆ. ಆ ಗುತ್ತಿಗೆದಾರರು ಅನಧಿಕೃತವಾಗಿ ತುಂಡು ಗುತ್ತಿಗೆದಾರರಿಗೆ ನೀಡುತ್ತಾರೆ. ಗುತ್ತಿಗೆದಾರರ ಬದಲಾವಣೆಯಿಂದ ಎಲ್ಲಿ ಏನು ಕಾಮಗಾರಿಯಾಗಿದೆ ಎಂಬುದು ಅವರಿಗೂ ತಿಳಿಯದೇ ಎಲ್ಲೆಂದರಲ್ಲಿ ತಗ್ಗು ತೆಗೆಯುತ್ತಿದ್ದಾರೆ. ಈಗಾಗಲೇ ಗುತ್ತಿಗೆದಾರರು ಶೇ.೯೦ರಷ್ಟು ಹಣ ಎತ್ತುವಳಿ ಮಾಡಿದ್ದಾರೆ ಎಂದು ತಿಳಿದಿದೆ. ಕಾಮಗಾರಿ ಪೂರ್ಣಗೊಳ್ಳದೇ ಅವರಿಗೆ ಹಣ ಪಾವತಿ ಮಾಡಿದ್ದಾದರೂ ಏಕೆ? ಎಂಬ ಪ್ರಶ್ನೆ ಉದ್ಭವವಾಗಿದೆ.

ಪ್ರಧಾನಿ ಮೋದಿ ಮಹತ್ವಾಕಾಂಕ್ಷೆಯ ಕುಡಿಯುವ ನೀರಿನ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ. ನಾನು ವಿಧಾನಸಭೆಯಲ್ಲಿ ಈ ಕುರತು ಎರಡು ಬಾರಿ ಧ್ವನಿ ಎತ್ತಿದ್ದೇನೆ.ಎಲ್ ಅಂಡ್ ಟಿ ಸಂಸ್ಥೆಯ ಅಧಿಕಾರಿಗಳೊಂದಿಗೆ ಅನೇಕ ಬಾರಿ ಚರ್ಚೆ ನಡೆಸಿದ್ದೇನೆ. ಮುಖ್ಯ ಕಾರ್ಯದರ್ಶಿಯನ್ನು (CS) ಕರೆದು ಎರಡು ಸಲ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಈಗ ಕಾಮಗಾರಿಯ ಸಂಪೂರ್ಣ ಬಿಲ್ ತೆಗೆದುಕೊಂಡರೂ ಕಾಮಗಾರಿ ಇನ್ನೂ ನಡೆಯದೆ ನಿಂತಿದೆ. ಜನರಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಮುಂದುವರಿದಿದೆ, ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ತಿಳಿಸಿದ್ದಾರೆ.

ಸರಿಯಾಗಿದ್ದ ಸಿಸಿ ರಸ್ತೆ ಒಡೆದು ವರ್ಷಗಳೇ ಗತಿಸಿವೆ. ಪೈಪ್‌ ಜೋಡಣೆಯ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ, ಸಾಕಷ್ಟು ಮನೆಗಳಿಗೆ ನಲ್ಲಿ ಜೋಡಿಸಿಲ್ಲ, ಇದರಿಂದ ಸರ್ಕಾರದ ಹಣ ಪೋಲಾಗುತ್ತಿದೆ. ಇದನ್ನು ಅಧಿಕಾರಿಗಳು ಗಮನಿಸಬೇಕು ಎಂದು ಹನುಮಸಾಗರ ಜಿಪಂ ಮಾಜಿ ಸದಸ್ಯ ಭೀಮಣ್ಣ ಅಗಸಿಮುಂದಿನ ತಿಳಿಸಿದ್ದಾರೆ.