ಸಾರಾಂಶ
ಸೇತುವೆ ಮೇಲೆ ಸಿಕ್ಕಿ ಹಾಕಿಕೊಂಡ ಸಸ್ಯಗಳನ್ನು ಹಾಗೂ ಕಸ ಕಡ್ಡಿಯ ತೆರವು ಕಾರ್ಯವನ್ನು ನಡೆಸಲಾಗಿತ್ತು.
ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ಬುಧವಾರ ಅಧಿಕ ಪ್ರಮಾಣದಲ್ಲಿ ನದಿಗೆ ನೀರು ಹರಿಯ ಬಿಡಲಾಗಿದ್ದು, ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮತ್ತೆ ಮುಳುಗಡೆಯಾಗಿದೆ. ಸೇತುವೆ ಜಲ ಕಂಟಕ ತಪ್ಪುತ್ತಿಲ್ಲ. ರೈತರಿಗೆ ಹಾಗೂ ನದಿಪಾತ್ರದ ಜನರಿಗೆ ಪ್ರವಾಹದ ಆತಂಕ ಇನ್ನಷ್ಟು ಹೆಚ್ಚಾಗಿದೆ.ಜು.25ರಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದ್ದು, ಜು.26ರಿಂದರಂದು ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇನ್ನು ಜು.30ರಂದು ನದಿಯಲ್ಲಿನ ನೀರಿನ ಮಟ್ಟ ಕಡಿಮೆಯಾಗಿದ್ದು, ಸೇತುವೆ ಮೇಲೆ ಸಿಕ್ಕಿ ಹಾಕಿಕೊಂಡ ಸಸ್ಯಗಳನ್ನು ಹಾಗೂ ಕಸ ಕಡ್ಡಿಯ ತೆರವು ಕಾರ್ಯವನ್ನು ನಡೆಸಲಾಗಿತ್ತು.
ಸೇತುವೆಯ ರಕ್ಷಣಾ ಕಂಬಿಗಳಿಗೆ ಅಳವಡಿಸಿರುವ ಕರ್ನಾಟಕ- ಆಂಧ್ರ ಸಂಪರ್ಕಿಸುವ ಆಪ್ಟಿಕಲ್ ಫೈಬರ್ ಕೇಬಲ್‌ಗೆ ಹಾನಿಯಾಗಿದ್ದು, ಹೊಸಪೇಟೆ ಬಿಎಸ್‌ಎನ್‌ಎಲ್ ಕಚೇರಿ ಎಇ ಮತ್ತು ಸಿಬ್ಬಂದಿ ಪರೀಕ್ಷಿಸಿ ತಾತ್ಕಾಲಿಕ ದುರಸ್ತಿಗೊಳಿಸಿದ್ದರು.ಇನ್ನೇನು ಸೇತುವೆ ಮೇಲೆ ಹರಿಯುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿದ್ದು ಇಂದೋ ನಾಳೆಯೋ ಸೇತುವೆ ಮೇಲೆ ಸಂಚಾರಕ್ಕೆ ಅನುಕೂಲ ಕಲ್ಪಿಸಬಹುದೆಂದು ಪ್ರಯಾಣಿಕರು, ನೌಕರರು, ರೈತರು, ವಿದ್ಯಾರ್ಥಿಗಳು ಕಾಯುತ್ತಿದ್ದರು. ಇದೀಗ ಮತ್ತೆ ನೀರಿನ ಪ್ರಮಾಣದಲ್ಲಿ ಏರಿಕೆ ಹಿನ್ನೆಲೆ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಸ್ಥಗಿತಗೊಂಡಿದೆ.
ನದಿ ಪಾತ್ರದ ಜಮೀನುಗಳಿಗೆ ಮತ್ತೆ ನೀರು ನುಗ್ಗಿದ್ದು, ಕಬ್ಬು, ಬಾಳೆ, ಭತ್ತ ಹಾಗೂ ಸೊಪ್ಪು ಸೇರಿ ಬೆಳೆಗೆ ನೀರು ನುಗ್ಗಿದೆ. ಇನ್ನು ಉತ್ತರಾದಿ ಕ್ರಿಯೆಯ ಮಂಟಪ, ಹೊಳೆ ಅಂಜನೇಯ ಗುಡಿ, ಮಾಧವ ತೀರ್ಥರ ಬೃಂದಾವನ ಜಲಾವೃತಗೊಂಡಿದೆ. ಸೇತುವೆ ಮೇಲಿನ ಸಂಚಾರ ಸ್ಥಗಿತಗೊಂಡು ಈ ವರೆಗೆ 6 ದಿನಗಳು ಕಳೆದಿದ್ದು, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಉಲ್ಬಣವಾಗಿದೆ. ಎಲ್ಲೋ ಸುರಿದ ಮಳೆಗೆ ಇಲ್ಲಿನ ಜನ ಪ್ರವಾಹದ ಭೀಕರತೆ ಎದುರಿಸುತ್ತಿದ್ದಾರೆ.