ಸಾರಾಂಶ
ಶ್ರೀ ದೊಡ್ಡಮ್ಮ ಜಲದುರ್ಗಮ್ಮ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮ ಮೇ 17ರಂದು ನೆರವೇರಲಿದೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಶ್ರೀ ದೊಡ್ಡಮ್ಮ ಜಲದುರ್ಗಮ್ಮ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮ ಮೇ 17ರಂದು ನೆರವೇರಲಿದೆ.ಪುನರ್ ನಿರ್ಮಾಣಗೊಂಡಿರುವ ದೇಗುಲವನ್ನು ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಡಾ.ವಿದ್ಯಾಭಿನವ ವಿದ್ಯಾರಣ ಮಹಾಸ್ವಾಮಿಗಳ ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮೀಜಿ ನೆರವೇರಿಸಲಿದ್ದಾರೆ.
ಮೇ 22ರಂದು ಶ್ರೀದೊಡ್ಡಮ್ಮ ಜಲದುರ್ಗಮ್ಮ ದೇವಿ ಕೆಂಡದರ್ಚನಾ ಮಹೋತ್ಸವವನ್ನು ಬೆಳಗ್ಗೆ 11.50 ರಿಂದ 12.20 ಗಂಟೆಗೆ ನೆರವೇರಲಿದೆ. ಇದರ ಅಂಗವಾಗಿ ಮೇ 19ರಂದು ಬೆಳಗ್ಗೆ 5 ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಗಂಗೆ ಪೂಜೆ ಹಾಗೂ ಶ್ರೀ ವೀರಭದ್ರಸ್ವಾಮಿ ದೇವರ ಪೂಜೆ, ಶ್ರೀ ಕಟೀನ್ ಚೌಡೇಶ್ವರಿ ಪೂಜೆ ನಂತರ ಶ್ರೀ ದೇವಗಂಗೆಯನ್ನು ಕಾಲ್ನಡಿಗೆಯಲ್ಲಿ ಶಿವಮೊಗ್ಗಕ್ಕೆ ತರಲಾಗುವುದು. ಮೇ 20ರಂದು ಸಂಜೆ 5.30ಕ್ಕೆ ಗಂಗಾನದಿ ದಡದಲ್ಲಿ ಗಂಗೆ ಪೂಜೆ, ಗಂಗಾರತಿ, ಮಂಗಳವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ದೇವಗಂಗೆ ದೇವಾಲಯಕ್ಕೆ ತರಲಾಗುವುದು. ಮೇ 21 ರಂದು ಕಲಾಹೋಮ, ಕುಂಬಾಭಿಷೇಕ ಬೆಳಗ್ಗೆ 10ಗಂಟೆಗೆ ಸಾಮೂಹಿಕ ಚಂಡಿಕಾ ಹೋಮ ನೆರವೇರಿಸಲಾಗುವುದು. ಇದೇ ವೇಳೆ ಹೊಸಮನೆ ಬಡಾವಣೆಯಲ್ಲಿರುವ ಅಕ್ಕತಂಗಿಯರ ಶಕ್ತಿದೇವರುಗಳ ಸಮಾಗಮ ಏರ್ಪಡಿಸಲಾಗಿದೆ.ಮೇ 22 ರಂದು ಬೆಳಗ್ಗೆ 11.50ರಿಂದ 12.20ರ ಶುಭಮುಹೂರ್ತದಲ್ಲಿ ಕೆಂಡದಾರ್ಚನೆ ಏರ್ಪಡಿಸಲಾಗಿದೆ. ಸಂಜೆ 5 ಗಂಟೆಗೆ ಶಿವಮೊಗ್ಗ ನಗರದ ಸಾಧುಶೆಟ್ಟಿ ಸಮಾಜದ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚಿನ ಅಂಕಗಳಿಸಿ ಉತ್ತೀರ್ಣರಾದವರಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ಉಮಾಪತಿ, ಉಪಾಧ್ಯಕ್ಷ ಎಸ್.ಆರ್. ಸೋಮು, ಪ್ರಧಾನ ಕಾರ್ಯದರ್ಶಿ ಕಿಬ್ಬನಹಳ್ಳಿ ನರಸಿಂಹ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.