ಸಾರಾಂಶ
ದೊಡ್ಡಬಳ್ಳಾಪುರ: ಜಾಲಪ್ಪ ಅವರ ಒತ್ತಾಸೆಯಿಂದ ರಾಜ್ಯದಲ್ಲಿ ಜಾರಿಗೆ ಬಂದ ಹಲವು ಯೋಜನೆಗಳು ಇಂದಿಗೂ ಜನಸ್ನೇಹಿಯಾಗಿವೆ. ದೊಡ್ಡಬಳ್ಳಾಪುರದ ಅಪರೆಲ್ ಪಾರ್ಕ್ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ನೀಡಿದೆ. ಜಾಲಪ್ಪ ರಾಜಕಾರಣಿಗಳಿಗೆ ಮಾದರಿ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್ ಹೇಳಿದರು.
ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ನಡೆದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಕೇಂದ್ರದ ಮಾಜಿ ಸಚಿವ ದಿವಂಗತ ಆರ್.ಎಲ್.ಜಾಲಪ್ಪ ಅವರ 2ನೇ ವರ್ಷದ ಪುಣ್ಯಸ್ಮರಣೆ ಮತ್ತು ಆರ್.ಎಲ್.ಜಾಲಪ್ಪ ಸೇವಾ ಪುರಸ್ಕಾರ-2023 ಪ್ರದಾನ ಕಾರ್‍ಯಕ್ರಮದಲ್ಲಿ ಅವರು ಮಾತನಾಡಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ ಅವರು, ನೇರ, ನಿಷ್ಠುರ ನಡೆಯಿಂದ ಖ್ಯಾತಿ ಗಳಿಸಿದ್ದರು. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ೮೦ರ ದಶಕದಲ್ಲಿ ರೈತರ ಸಾಲಮನ್ನಾ ಯೋಜನೆಯನ್ನು ಅನುಷ್ಠಾನಕ್ಕೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಸ್ವಾಭಿಮಾನದ ರಾಜಕಾರಣಕ್ಕೆ ಅವರು ಅನ್ವರ್ಥವಾಗಿದ್ದರು ಎಂದು ಸ್ಮರಿಸಿದರು.
ಶ್ರೀ ದೇವರಾಜ ಅರಸು ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಶೈಕ್ಷಣಿಕವಾಗಿಯೂ ಸಮಾಜವನ್ನು ಸದೃಢವಾಗಿ ಕಟ್ಟುವ ಉದ್ದೇಶದಿಂದ ಅನೇಕ ವಿದ್ಯಾ ಸಂಸ್ಥೆಗಳನ್ನು ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಸ್ಥಾಪಿಸಿ ಗ್ರಾಮೀಣ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕ ವಾತಾವರಣ ನಿರ್ಮಿಸಿದ್ದಾರೆ. ಅವರ ಆಶಯಕ್ಕೆ ಪೂರಕವಾಗಿ ಸಂಸ್ಥೆಯನ್ನು ಮತ್ತಷ್ಟು ಸದೃಢಗೊಳಿಸುವ ಆಕಾಂಕ್ಷೆಯನ್ನು ಪ್ರಸಕ್ತ ಆಡಳಿತ ಮಂಡಲಿ ಹೊಂದಿದೆ ಎಂದರು.ನಗರಸಭೆ ಮಾಜಿ ಅಧ್ಯಕ್ಷ ಕೆ.ಪಿ.ಜಗನ್ನಾಥ್ ಮಾತನಾಡಿ, ಸತತ 4 ದಶಕಗಳ ಕಾಲ ವಿವಿಧ ಹಂತಗಳ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಜಾಲಪ್ಪ ಪರಿಸರ, ಶಿಕ್ಷಣ, ಗ್ರಾಮೀಣಾಭಿವೃದ್ದಿ, ಸಹಕಾರ ಸೇರಿದಂತೆ ವಿವಿಧ ವಲಯಗಳಲ್ಲಿ ಅನೇಕ ಸೇವಾ ಕಾರ್‍ಯಗಳನ್ನು ಜಾರಿಗೆ ತಂದ ಹೆಗ್ಗಳಿಕೆ ಹೊಂದಿದ್ದಾರೆ. ಅವರು ಸ್ಥಾಪಿಸಿರುವ ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಹಿಂದುಳಿದ ವರ್ಗದ, ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಮಹತ್ವದ ನೀಡುವ ಕೆಲಸ ಮಾಡುತ್ತಿದೆ ಎಂದರು.
ಶ್ರೀದೇವರಾಜ ಅರಸು ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎಚ್.ನಾಗರಾಜ್ ಮಾತನಾಡಿ, ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಸದಾ ತುಡಿಯುತ್ತಿದ್ದ ಜಾಲಪ್ಪ, ಶೈಕ್ಷಣಿಕವಾಗಿ ಪ್ರಗತಿ ಹೊಂದಿದಾಗ ಮಾತ್ರ ಪ್ರಗತಿ ಸಾಧ್ಯ ಎಂದು ನಂಬಿದ್ದರು ಎಂದು ತಿಳಿಸಿದರು.ಜಾಲಪ್ಪ ಸಾಧನಾ ಪುರಸ್ಕಾರ:
ಇದೇ ವೇಳೆ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ಶೈಕ್ಷಣಿಕ ಘಟಕಗಳನ್ನು ಸಾರ್ಥಕ ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತರಾಗಿರುವ 33 ಜನರಿಗೆ ಪ್ರಸಕ್ತ ಸಾಲಿನ ಸೇವಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.ಎಸ್‌ಡಿಯುಇಟಿ ಕಾರ್‍ಯದರ್ಶಿ ಕೆ.ಜಿ.ಹನುಮಂತರಾಜು, ಟ್ರಸ್ಟಿಗಳಾದ ಎಚ್.ಎಸ್.ಪ್ರಕಾಶ್, ಧರ್ಮವೀರ, ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್, ಅಕಾಡೆಮಿಕ್ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ, ಎಚ್‌ಆರ್ ಅಧಿಕಾರಿ ಬಾಬುರೆಡ್ಡಿ, ವಿವಿಧ ಶೈಕ್ಷಣಿಕ ಘಟಕಗಳ ಪ್ರಾಂಶುಪಾಲರು, ಮುಖ್ಯಸ್ಥರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಜಾಲಪ್ಪ ಪುಣ್ಯಸ್ಥಳದಲ್ಲಿ ಪೂಜೆ:ಬೆಳಗ್ಗೆ ಇಲ್ಲಿನ ಆರ್‌ಎಲ್‌ಜೆಐಟಿ ಆವರಣದಲ್ಲಿರುವ ಜಾಲಪ್ಪ ಅವರ ಪುಣ್ಯಸ್ಥಳದಲ್ಲಿ ಪೂಜಾ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಟ್ರಸ್ಟ್ ಪದಾಧಿಕಾರಿಗಳು, ಜಾಲಪ್ಪ ಕುಟುಂಬ ವರ್ಗ, ವಿವಿಧ ವಿದ್ಯಾ ಸಂಸ್ಥೆಗಳ ಪ್ರಮುಖರು ಭಾಗಿಯಾಗಿದ್ದರು.
17ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಮಾಜಿ ಕೇಂದ್ರ ಸಚಿವ ದಿವಂಗತ ಆರ್.ಎಲ್.ಜಾಲಪ್ಪ ಅವರ 2ನೇ ಪುಣ್ಯಸ್ಮರಣೆ ಅಂಗವಾಗಿ ಆರ್.ಎಲ್.ಜಾಲಪ್ಪ ಸಾಧನಾ ಪುರಸ್ಕಾರ ಪ್ರದಾನ ಕಾರ್‍ಯಕ್ರಮ ನಡೆಯಿತು.17ಕೆಡಿಬಿಪಿ2- ಮಾಜಿ ಕೇಂದ್ರ ಸಚಿವ ದಿವಂಗತ ಆರ್.ಎಲ್.ಜಾಲಪ್ಪ ಪುಣ್ಯಸ್ಮರಣೆ ಅಂಗವಾಗಿ ಜಾಲಪ್ಪ ಪುಣ್ಯಸ್ಥಳದಲ್ಲಿ ವಿಶೇಷ ಪೂಜಾ ಕಾರ್‍ಯಕ್ರಮ ನಡೆಯಿತು.