ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ''ಜಲ ಜೀವನ್ ಮಿಷನ್'' ಯೋಜನೆ (ಜೆಜೆಎಂ) ಸಾಗಲಗಟ್ಟೆಯಲ್ಲಿ ಕಳಪೆ ಕಾಮಗಾರಿಯಿಂದ ಸಂಪೂರ್ಣವಾಗಿ ವಿಫಲವಾಗಿದೆ. ಗುತ್ತಿದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಾಗಲಗಟ್ಟೆಯಲ್ಲಿ ಅಂದಾಜು ₹40 ಲಕ್ಷಕ್ಕೂ ಅನುದಾನ ವಿನಿಯೋಗಿಸಿ ೪ ವರ್ಷಗಳೇ ಕಳೆದರೂ, ಮನೆಗಳಿಗೆ ಅಳವಡಿಸಿರುವ ನಲ್ಲಿಗಳಲ್ಲಿ ಒಂದೇ ಒಂದು ಹನಿಯೂ ನೀರು ಹರಿದಿಲ್ಲ. ಗುತ್ತಿಗೆದಾರರು ಎರಡು ದಿವಸ ನಾಮಕಾವಸ್ಥೆಗೆ ನೀರು ಹರಿಸಿ ಕೈ ತೊಳೆದುಕೊಂಡಿದ್ದಾರೆ. ಅಂದಿನಿಂದ ಇಂದಿಗೆ ನಾಲ್ಕು ವರ್ಷವಾದರೂ ಜನರು ಜೆಜೆಎಂ ನೀರನ್ನೇ ಕಂಡಿಲ್ಲ!

- ಮಣ್ಣು ಪಾಲಾಗಿರುವ ₹40 ಲಕ್ಷಕ್ಕೂ ಅಧಿಕ ವೆಚ್ಚದ ಜೆಎಂಎಂ ಯೋಜನೆ । ಕುಡಿಯುವ ನೀರಿಗೆ ನಿತ್ಯ ಪರದಾಟ

- - -

ಕನ್ನಡಪ್ರಭ ವಾರ್ತೆ ಜಗಳೂರು

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ''''ಜಲ ಜೀವನ್ ಮಿಷನ್'''' ಯೋಜನೆ (ಜೆಜೆಎಂ) ಸಾಗಲಗಟ್ಟೆಯಲ್ಲಿ ಕಳಪೆ ಕಾಮಗಾರಿಯಿಂದ ಸಂಪೂರ್ಣವಾಗಿ ವಿಫಲವಾಗಿದೆ. ಗುತ್ತಿದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಾಗಲಗಟ್ಟೆಯಲ್ಲಿ ಅಂದಾಜು ₹40 ಲಕ್ಷಕ್ಕೂ ಅನುದಾನ ವಿನಿಯೋಗಿಸಿ ೪ ವರ್ಷಗಳೇ ಕಳೆದರೂ, ಮನೆಗಳಿಗೆ ಅಳವಡಿಸಿರುವ ನಲ್ಲಿಗಳಲ್ಲಿ ಒಂದೇ ಒಂದು ಹನಿಯೂ ನೀರು ಹರಿದಿಲ್ಲ. ಗುತ್ತಿಗೆದಾರರು ಎರಡು ದಿವಸ ನಾಮಕಾವಸ್ಥೆಗೆ ನೀರು ಹರಿಸಿ ಕೈ ತೊಳೆದುಕೊಂಡಿದ್ದಾರೆ. ಅಂದಿನಿಂದ ಇಂದಿಗೆ ನಾಲ್ಕು ವರ್ಷವಾದರೂ ಜನರು ಜೆಜೆಎಂ ನೀರನ್ನೇ ಕಂಡಿಲ್ಲ!

ಚಿತ್ರದುರ್ಗ ಮತ್ತು ಜಗಳೂರು ತಾಲೂಕಿನ ಗಡಿಭಾಗದಲ್ಲಿರುವ ಸಾಗಲಗಟ್ಟೆಯಲ್ಲಿ ಮೂಲಸೌಲಭ್ಯಗಳ ಕೊರತೆ ಎಂಬುದು ತಾಂಡವವಾಡುತ್ತಿದೆ. ಸರ್ಕಾರದ ಆಡಳಿತ ವೈಫಲ್ಯವೇ ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ತಾಲೂಕು ಕೇಂದ್ರದಿಂದ ಸುಮಾರು ೨೦ ಕಿ.ಮೀ. ದೂರವಿರುವ ಈ ಗಡಿಗ್ರಾಮದಲ್ಲಿ ಅಂದಾಜು ₹35 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ‘ಜಲಜೀವನ್ ಮಿಷನ್’ ಯೋಜನೆಯಡಿ ನೆಲದಿಂದ ಕೇವಲ ಮುಕ್ಕಾಲು ಅಡಿ ಆಳದಲ್ಲಿ ಪೈಪ್‌ಗಳನ್ನು ಅಳವಡಿಸಿ, ಸಂಪೂರ್ಣ ಕಳಪೆ ಕಾಮಗಾರಿ ನಡೆಸಿದ್ದಾರೆ.

ಇದರ ಪರಿಣಾಮವಾಗಿ ಹೆಚ್ಚಿನ ನಲ್ಲಿಗಳು ಈಗಾಗಲೇ ಮುರಿದುಬಿದ್ದಿವೆ. ಪೈಪ್‌ಲೈನ್‌ಗಾಗಿ ತೆಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚದೇ ಹಾಗೆಯೇ ಬಿಡಲಾಗಿದೆ. ಇದರಿಂದ ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಸುರಕ್ಷಿತವಾಗಿ ನಡೆದಾಡಲು ನಿತ್ಯ ಹರಸಾಹಸ ಪಡುವಂತಾಗಿದೆ. ರಸ್ತೆಗಳಲ್ಲಿ ಕೊಳಚೆ ನೀರು ನಿಂತು ದುರ್ನಾತ ಬೀರುತ್ತಿದ್ದು, ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಜನರು ಬದುಕುತ್ತಿದ್ದಾರೆ.

ಸಿಇಒ ಸೂಚನೆಗೆ ಕ್ಯಾರೇ ಎನ್ನದ ಸಿಬ್ಬಂದಿ:

2025ರ ಜೂನ್ ೧೦ರಂದು ‘ಬೆಳಗಿನ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಡಿ ದಾವಣಗೆಎ ಜಿಲ್ಲಾ ಪಂಚಾಯಿತಿ ಸಿಇಒ ಮಾಧವ ವಿಠ್ಠಲ ರಾವ್ ಸಾಗಲಗಟ್ಟೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಪಂ ಸದಸ್ಯರಾದ ಅನುಸೂಯಮ್ಮ, ಗ್ರಾಮಸ್ಥ ಜಿ.ಸಿ.ಸೋಮಶೇಖರ್‌ ಇತರರು ನಾಲ್ಕೈದು ತಿಂಗಳಿಂದ ಕುಡಿಯುವ ನೀರಿನ ಎಇಇ ಸಾದಿಕ್‌ ವುಲ್ಲಾ ಅವರಿಗೆ ಏನೂ ಮಾಡದ ಹಿನ್ನಲೆ ಕಳಪೆ ಕಾಮಗಾರಿಯ ಬಗ್ಗೆ ಮನವಿ ಸಲ್ಲಿಸಿದ್ದರು. ತಕ್ಷಣವೇ ಸ್ಪಂದಿಸಿದ್ದ ಸಿಇಒ, ಸ್ಥಳದಲ್ಲಿದ್ದ ಎಇಇ ಸಾದಿಕ್‌ ಉಲ್ಲಾ ಅವರಿಗೆ ಯೋಜನೆಯಡಿ ಗ್ರಾಮಕ್ಕೆ "ಒಂದು ವಾರದೊಳಗೆ ನೀರು ಹರಿಸಿ " ಎಂದು ಖಡಕ್ ಸೂಚನೆ ನೀಡಿದ್ದರು. ಆದರೆ, ಸಿಇಒ ಆದೇಶ ನೀಡಿ ವರ್ಷವೇ ಕಳೆದರೂ ನಳಗಳಲ್ಲಿ ನೀರು ಮಾತ್ರ ಬರಲಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮರುಳಸಿದ್ದಪ್ಪ, ಎಇಇ ಸಾದಿಕ್‌ ಉಲ್ಲಾ ಇತರರ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಸಂಕಟ ಪಡುವಂತಾಗಿದೆ ಎಂದು ಗ್ರಾಮಸ್ಥ ನಾಗನಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುದ್ಧ ಕುಡಿಯುವ ನೀರಿನ ಘಟಕ ಬಂದ್:

ಸಾಗಲಗಟ್ಟೆಯಲ್ಲಿ ಲಕ್ಷಾಂತರ ರು. ವೆಚ್ಚದಲ್ಲಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕ **(RO Plant)** ಸೂಕ್ತ ನಿರ್ವಹಣೆಯಿಲ್ಲದೆ ಹಾಳಾಗಿದೆ. ಸರ್ಕಾರದ ಹಣ ‘ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತೆ’ ವ್ಯರ್ಥವಾಗಿದೆ. ಅನಿವಾರ್ಯವಾಗಿ ಗ್ರಾಮಸ್ಥರು ಫ್ಲೋರೈಡ್‌ಯುಕ್ತ ಕಲುಷಿತ ನೀರನ್ನೇ ಕುಡಿಯುತ್ತಿದ್ದು, ಹದಿಹರೆಯದ ಯುವಕರು ಹಾಗೂ ವೃದ್ಧರಲ್ಲಿ ಮೊಣಕಾಲು ಮತ್ತು ಕೀಲು ನೋವಿನ ಸಮಸ್ಯೆಗಳು ತೀವ್ರವಾಗಿ ಕಾಣಿಸಿಕೊಳ್ಳುತ್ತಿವೆ.

- - -

(ಕೋಟ್ಸ್)

"ಕಳೆದ ನಾಲ್ಕು ತಿಂಗಳಿನಿಂದ ಎಂಜಿನಿಯರ್‌ಗಳ ಕಚೇರಿಗೆ ಅಲೆದು ಮನವಿ ನೀಡಿದರೂ ಅಧಿಕಾರಿಗಳ ಕಣ್ಣು ತೆರೆದಿಲ್ಲ. ಸಾರ್ವಜನಿಕರ ತೆರಿಗೆ ಹಣ ಲೂಟಿ ಹೊಡೆದು, ಜನರಿಗೆ ಅನ್ಯಾಯ ಮಾಡುತ್ತಿರುವ ಬೇಜವಾಬ್ದಾರಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಉನ್ನತಮಟ್ಟದ ತನಿಖೆಯಾಗಬೇಕು. ತಕ್ಷಣವೇ ಜಲಜೀವನ ಮಿಷನ್‌ ಯೋಜನೆಯ ಕುಡಿಯುವ ನೀರು ಪೂರೈಸದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು.

- ನಾಗನಗೌಡ, ಗ್ರಾಮ ಮುಖಂಡ, ಸಾಗಲಗಟ್ಟೆ. ಸಾಗಲಗಟ್ಟೆಯಲ್ಲಿ ''''ಜಲ ಜೀವನ್ ಮಿಷನ್'''' ಯೋಜನೆಯಡಿ ನಡೆಸಿರುವ ಕಾಮಗಾರಿಯನ್ನು ಗುತ್ತಿದುರ್ಗ ಗ್ರಾಮ ಪಂಚಾಯಿತಿಯವರು ಹಸ್ತಾಂತರ ಮಾಡಿಲ್ಲ. ಗ್ರಾಪಂ ಆಡಳಿತ ಯೋಜನೆ ನಿರ್ವಹಣೆಯನ್ನು ಇಲಾಖೆಗೆ ಹಸ್ತಾಂತರ ಮಾಡಿದ ಬಳಿಕ ನೀರು ಪೂರೈಕೆಗೆ ಅಗತ್ಯ ಕ್ರಮ ವಹಿಸಲು ಸಾಧ್ಯವಾಗುವುದು.

- ಸಾದಿಕ್‌ ಉಲ್ಲಾ, ಎಇಇ, ಗ್ರಾಮೀಣ ಕುಡಿಯುವ ನೀರು- ನೈರ್ಮಲ್ಯ ಇಲಾಖೆ.

- - -

-19ಜೆ.ಜಿ.ಎಲ್.1: ಪೈಪ್‌ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವುದು.

-19ಜೆ.ಜಿ.ಎಲ್2: ಬಂದ್ ಆಗಿರುವ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಪರಿಶೀಲಿಸುತ್ತಿರುವ ಎಇಇ ಸಾದಿಕ್‌ಉಲ್ಲಾ ಇತರರು.