ಸಾರಾಂಶ
- ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಲ್. ನಾರಾಯಣಸ್ವಾಮಿ
ಕನ್ನಡಪ್ರಭ ವಾರ್ತೆ ಮೈಸೂರುಒಂದು ತಿಂಗಳ ಅವಧಿಯಲ್ಲಿ 1,230 ಪ್ರಕರಣ ಇತ್ಯರ್ಥಪಡಿಸಿರುವುದಾಗಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಲ್. ನಾರಾಯಣಸ್ವಾಮಿ ಹೇಳಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೂರು ಬಂದ ಕೂಡಲೇ ಅಲ್ಲಿಯೇ ಪರಿಹರಿಸಲಾಗುತ್ತಿದೆ. ವಿಳಂಬ ಮಾಡುವ ಪ್ರಶ್ನೆಯೇ ಇಲ್ಲ. ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಕೆಯಾಗಿ ಬಾಕಿ ಉಳಿದಿದ್ದ ಸುಮಾರು 6 ಸಾವಿರ ಪ್ರಕರಣಗಳಲ್ಲಿ 1,230 ಪ್ರಕರಣವನ್ನು ಒಂದು ತಿಂಗಳ ಅವಧಿಯಲ್ಲಿ ಇತ್ಯರ್ಥಪಡಿಸಲಾಗಿದೆ ಎಂದರು.ಎನ್ ಕೌಂಟರ್ ಮಾಡಿದ ಪೊಲೀಸ್ ವಿರುದ್ಧ 302 ಕೇಸ್ ದಾಖಲಿಸಲಾಗಿದೆ. ಲಾಕಪ್ ಡೆತ್ ಗೆ ಸಂಬಂಧಪಟ್ಟ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ದಾಖಲಾಗಿದ್ದ 300 ಪ್ರಕರಣಗಳ ಪೈಕಿ 200 ದೂರು ವಿಲೇವಾರಿ ಆಗಿದೆ. ಎನ್ ಕೌಂಟರ್, ಲಾಕಪ್ ಡೆತ್ ಮುಂತಾದ ಗಂಭೀರವಾದ 36 ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದು ಅವರು ಹೇಳಿದರು.
ಮಾನವ ಹಕ್ಕುಗಳ ಉಲ್ಲಂಘನೆ ಸಂಬಂಧ 24 ಗಂಟೆಯೂ ದೂರು ನೀಡಬಹುದು. ದೂರು ಸಲ್ಲಿಕೆಗೆ ಆ್ಯಪ್ ಇದೆ. ದೃಶ್ಯ ಮಾಧ್ಯಮ, ಪತ್ರಿಕೆಗಳಲ್ಲಿ ಬಂದ ವರದಿ ಆಧಾರದ ಮೇಲೆ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.ಮಾನವ ಹಕ್ಕುಗಳ ಕುರಿತು ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಮೂರು ಸ್ವಯಂ ಸೇವಾ ಸಂಸ್ಥೆಗಳು ತಮನ್ನು ಸಂಪರ್ಕಿಸಿರುವುದಾಗಿ ಅವರು ಹೇಳಿದರು.
ಬೆಂಗಳೂರು ಕೇಂದ್ರ ಸ್ಥಾನದಲ್ಲಿ ಕುಳಿತು ದೂರಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯೋದು, ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸುವುದು ತಡವಾಗುತ್ತಿತ್ತು. ಹಾಗಾಗಿ ಜಿಲ್ಲಾ ಕೇಂದ್ರಗಳಲ್ಲಿ ದೂರು ವಿಲೇವಾರಿ ಮಾಡುತ್ತಿದ್ದೇವೆ. ಉತ್ತರ ಕರ್ನಾಟಕದ ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳ ನಂತರ ಮೈಸೂರು ಭಾಗದ ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ದೂರು ವಿಲೇವಾರಿ ಮಾಡುತ್ತೇವೆ ಎಂದು ಅವರು ವಿವರಿಸಿದರು.ತುಳಿತಕ್ಕೆ ಒಳಪಟ್ಟ ವ್ಯಕ್ತಿಗೆ ತನ್ನ ಹಕ್ಕು ಉಲ್ಲಂಘನೆ ಆಗಿರುವ ಬಗ್ಗೆ ಅರಿವೇ ಇರುವುದಿಲ್ಲ. ಸರ್ಕಾರದೊಡನೆ ಸಂಬಂಧ ಇಲ್ಲ: ಆಯೋಗ ಮತ್ತು ಸರ್ಕಾರದ ನಡುವೆ ಸಂಬಂಧ ಇಲ್ಲ. ನಮಗೇ ಇರುವ ಪರಿಮಿತಿಯಲ್ಲಿ ಕೆಲಸ ಮಾಡಬೇಕು. ಅವಕಾಶ ಸಿಕ್ಕಾಗ ಏನು ಕೆಲಸ ಮಾಡಿದ್ದೇವೆ ಎಂಬುದು ಮುಖ್ಯ. ಅಧಿಕಾರ ವಹಿಸಿಕೊಂಡ ಒಂದೂವರೆ ತಿಂಗಳಲ್ಲಿ ತೃಪ್ತಿಯಾಗುವ ಕೆಲಸ ಮಾಡಿದ್ದೇವೆ ಎಂದು ಅವರು ನುಡಿದರು.
ಬುಡಕಟ್ಟು ಜನರಿಗೆ ಪರಿಹಾರವಿರಾಜಪೇಟೆ ತಾಲೂಕಿನ ಬಡುಕಟ್ಟು ವ್ಯಕ್ತಿಯೊಬ್ಬರಿಂದ ದೂರು ಬಂದಿತು. ಕೊಡಗು ಜಿಲ್ಲಾಧಿಕಾರಿ ಸಂಪರ್ಕಿಸಿದ ಅರ್ಧಗಂಟೆಯಲ್ಲಿ ನಿವೇಶನ ಕೊಡುವುದಾಗಿ ಒಪ್ಪಿಕೊಂಡರು. ತಹಸೀಲ್ದಾರ್ ವ್ಯಾಟ್ಸಾಪ್ ಮೂಲಕ 41 ಬುಡಕಟ್ಟು ಕುಟುಂಬಗಳಿಗೆ ನಿವೇಶನ ಹಂಚಿಕೆಯ ಪತ್ರ ಕಳುಹಿಸಿದರು. ಜ. 31 ರಂದು ವಿರಾಜಪೇಟೆ ತಾಲೂಕಿನ ಹಾಡಿ ಗ್ರಾಮಗಳಿಗೆ ಭೇಟಿ ನೀಡಿ ದೂರು ಆಲಿಸುತ್ತೇವೆ ಎಂದರು.
ಅಂತೆಯೇ ಯಾದಗಿರಿ ಜಿಲ್ಲೆಯ ಸೈನಿಕರೊಬ್ಬರು 2001 ರಲ್ಲಿ ನಿವೃತ್ತರಾದರು. 2004 ರಲ್ಲಿ ಅವರು ತಮಗೆ 3 ಎಕರೆ ಜಮೀನು ಕೊಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದರು. ಮೊದಲು ಕಲ್ಲುಗುಡ್ಡ ನೀಡಲಾಯಿತು. ಅದರಲ್ಲಿ ವ್ಯವಸಾಯ ಮಾಡಲಾಗುತ್ತದೆಯೇ? ಬಳಿಕ ಸಂಘರ್ಷವಿರುವ ಜಮೀನು ನೀಡಿದರು. ಅದನ್ನು ನಿರಾಕರಿಸಿದ ಬಳಿಕ ಗೋಮಾಳದ ಜಮೀನು ಕೊಡಲು ಸರ್ಕಾರಕ್ಕೆ ಪತ್ರ ಬರೆದು ಜಿಲ್ಲಾಡಳಿತ ಸುಮ್ಮನಾಯಿತು. ಆಯೋಗಕ್ಕೆ ದೂರು ಬಂದ ಬಳಿಕ 2024ರ ಜ. 19ರಂದು ಪ್ರಕರಣ ಇತ್ಯರ್ಥಪಡಿಸಲಾಗಿದೆ. ಅಧಿಕಾರಿಗಳು ಉತ್ತಮ ಜಮೀನು ಕೊಡುವ ಪ್ರಯತ್ನದಲ್ಲಿದ್ದಾರೆ ಅವರು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಆಯೋಗದ ಸದಸ್ಯರಾದ ಶ್ಯಾಮ್ ಭಟ್, ಎಸ್.ಕೆ. ವಂಟಿಗೋಡಿ ಇದ್ದರು.