ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಗಿರಿ
ದಾರ್ಶನಿಕರು, ಶರಣರು, ಸಂತರು, ವೀರರು ಕೇವಲ ಒಂದೇ ಜಾತಿಗೆ ಸೀಮಿತರಲ್ಲ ಇವರು ದೇಶ, ರಾಜ್ಯದ ಪ್ರಗತಿಗೆ ತಮ್ಮದೇ ಆದ ಕೊಡುಗೆಗಳ ನೀಡಿದ್ದು ಇವರ ಜಯಂತಿಗಳ ಸಮಾಜದ ಪ್ರತಿಯೊಬ್ಬರು ಆಚರಿಸಬೇಕು. ಆದ್ದರಿಂದ ಫೆಬ್ರವರಿಯಲ್ಲಿ ಆರು ಜಯಂತಿಗಳ ಒಂದೇ ದಿನ ಆಚರಿಸುವುದು ಸೂಕ್ತ ಎಂದು ತಾಲೂಕು ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಶಿವಾಜಿರಾವ್ ಜಾಧವ್ ಸಲಹೆ ನೀಡಿದರು.ತಾಲೂಕು ಕಚೇರಿ ಸಭಾಂಗಣದಲ್ಲಿ ಫೆಬ್ರವರಿಯಲ್ಲಿ ವಿವಿಧ ಶರಣರ, ಸಂತರ, ದಾರ್ಶನಿಕರ ಜಯಂತಿಗಳ ಆಚರಿಸುವ ಕುರಿತು ತಹಸೀಲ್ದಾರ್ ಎರ್ರಿಸ್ವಾಮಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಫೆಬ್ರವರಿಯಲ್ಲಿ ಮಡಿವಾಳ ಮಾಚಿದೇವರ, ಕಾಯಕ ಶರಣ, ಸವಿತ ಮಹರ್ಷಿ, ಛತ್ರಪತಿ ಶಿವಾಜಿ, ಸಂತ ಸೇವಾಲಾಲ್, ಸರ್ವಜ್ಞ ಜಯಂತಿ ಸೇರಿ ಒಟ್ಟು 6 ಜಯಂತಿಗಳ ಆಚರಿಸಲಿದ್ದು ಈ ಜಯಂತಿಗಳನ್ನು ಆಯಾ ದಿನಾಂಕದಂದು ಆಚರಿಸಿದರೆ ಕಚೇರಿಗೆ ಬರುವ ಸಾರ್ವಜನಿಕರ ಕೆಲಸಕ್ಕೆ ತೊಂದರೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಗುಡ್ಡಪ್ಪ ಮಾತನಾಡಿ ಸರ್ಕಾರದ ವತಿಯಿಂದ ಆಚರಿಸುವ ಪ್ರತಿ ಜಯಂತಿಗಳ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಆಚರಿಸಬೇಕಾಗಿದೆ. ಆದರೆ ಸರ್ಕಾರಿ ಇಲಾಖೆಗಳಲ್ಲಿ ಕೆಲ ಜಯಂತಿಗಳ ಆಚರಿಸಿದರೆ ಇನ್ನು ಕೆಲ ಜಯಂತಿಗಳ ಆಚರಿಸುವುದಿಲ್ಲ ಈ ಧೋರಣೆ ಏಕೆ ಎಂದು ಪ್ರಶ್ನಿಸಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರರು ಎಲ್ಲಾ ಇಲಾಖೆಗಳಲ್ಲಿ ಮತ್ತು ಗ್ರಾಪಂಗಳಲ್ಲಿ ಆಯಾ ಜಯಂತಿಗಳ ದಿನಾಂಕಗಳಂದು ದಾರ್ಶನಿಕರ, ಶಿವಶರಣರ, ಸಂತರ, ಕವಿಗಳ, ಭಾವಚಿತ್ರಗಳವಿಟ್ಟು ಪುಷ್ಪನಮನ ಸಲ್ಲಿಸಿ ಗೌರವಿಸಲು ಆದೇಶ ಮಾಡಬೇಕು ಎಂದರು.ಫೆಬ್ರವರಿ 20ರಂದು ಅದ್ಧೂರಿ ಕಾರ್ಯಕ್ರಮ:
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎರ್ರಿಸ್ವಾಮಿ ಮಾತನಾಡಿ ವಿವಿಧ ಸಮಾಜಗಳ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಒಪ್ಪಿಗೆ ಮೇರೆಗೆ ಫೆಬ್ರವರಿಯಲ್ಲಿ ಬರುವ 6 ಜಯಂತಿಗಳ ಫೆ.20ರಂದು ಅದ್ಧೂರಿಯಾಗಿ ಆಚರಿಸೋಣ ಇದರಿಂದ ಈ ಆರು ಸಮಾಜದ ಜನರು ಒಟ್ಟಿಗೆ ಸೇರಿ ಆಚರಿಸುವುದರಿಂದ ಹಬ್ಬದ ವಾತಾವರಣ ನಿರ್ಮಾಣವಾಗಲಿದ್ದು ಇದು ಸಾಮರಸ್ಯದ ಸಂಕೇತವಾಗಿದೆ ಎಂದರು. ಫೆಬ್ರವರಿಯಲ್ಲಿ ಆರು ಜಯಂತಿಗಳ ಆಯಾ ದಿನಾಂಕದಂದು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರವಿಟ್ಟು ಪೂಜಿಸಿ ಕಟ್ಟುಟ್ಟಿನ ಸೂಚನೆ ನೀಡಲಿದ್ದು ಫೆಬ್ರವರಿ 20ರಂದು ಅದ್ಧೂರಿ ಕಾರ್ಯಕ್ರಮ ಮಾಡೋಣ ಎಂದರು.ಸಭೆಯಲ್ಲಿ ಸವಿತ ಸಮಾಜದ ಅಧ್ಯಕ್ಷ ಬೀರಲಿಂಗಪ್ಪ, ರಂಗನಾಥ್, ವೆಂಕಟೇಶ್, ಮರಾಠ ಸಮಾಜದ ಮುಖಂಡ ಕುಬೇಂದ್ರೋಜಿರಾವ್, ಶಿವಾಜಿರಾವ್, ಮಡಿವಾಳ ಸಮಾಜದ ಮುಖಂಡ ದತ್ತಪ್ಪ, ಜಯಣ್ಣ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ್, ತಾಲೂಕು ಆರೋಗ್ಯಾಧಿಕಾರಿ ಶಿವಕುಮಾರ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಅಭಿಯಂತರ ಲೋಹಿತ್, ಸಿಡಿಪಿಒ ಎಸ್.ಎಸ್.ಸದಾನಂದ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅರುಣ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಕಾಂತ್ ಸೇರಿತಾಲೂಕು ಮಟ್ಟದ ಅಧಿಕಾರಿಗಳು ವಿವಿಧ ಸಮಾಜದ ಪ್ರಮುಖರು ಹಾಜರಿದ್ದರು.