ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕುವೆಂಪು ಬರಹಗಳಲ್ಲಿ ಸಾಮಾಜಿಕ ವಾಸ್ತವಗಳು ಪ್ರಸ್ತಾಪವಾಗುತ್ತಲೇ ಇವೆ ಮತ್ತು ಸಾಮಾಜಿಕ ವೈರುಧ್ಯವನ್ನು ಅವರ ಜಲಗಾರ ಕೃತಿಯಲ್ಲಿ ಕಾಣಬಹುದು ಎಂದು ಡಿವಿಎಸ್ ಕಾಲೇಜಿನ ನಿವೃತ್ತ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಟಿ.ಕೃಷ್ಣಮೂರ್ತಿ ಹೇಳಿದರು.

ನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಇಂಗ್ಲೀಷ್ ವಿಭಾಗದಿಂದ ಮಂಗಳವಾರ ಆಯೋಜಿಸಿದ್ದ ಕುವೆಂಪು ವಿರಚಿತ ಜಲಗಾರ ನಾಟಕ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಬಹುಮುಖ್ಯ ಚಿಂತಕರಾದ ಕುವೆಂಪು ಅವರಿಗೆ ಚಿಂತನೆ, ಜಾತಿ ನಿರ್ಮಿತ ಹಿಂಸೆ, ಹಾಗೂ ಸಾಮಾಜಿಕ ವಾಸ್ತವಗಳು ಅವರ ಸಾಹಿತ್ಯ ಕೃತಿಗಳಲ್ಲಿ ಪದೇ ಪದೇ ಪ್ರಸ್ತಾಪಿತವಾಗುತ್ತವೆ ಎಂದು ತಿಳಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಅವಿನಾಶ್, ಸಮಾಜದಲ್ಲಿ ಅಂಚಿಗೆ ಸರಿಸಲಾಗಿರುವ ಒಂದು ಸಮುದಾಯದ ವ್ಯಕ್ತಿಯನ್ನು ಕೇಂದ್ರಕ್ಕೆ ತಂದು ಕುವೆಂಪು ಅವರು ಸಮಕಾಲೀನ ಸಮಾಜವನ್ನು ತೀಕ್ಷ್ಣವಾಗಿ ವಿಮರ್ಶಿಸುತ್ತಾರೆ, ಜಲಗಾರ ನಾಟಕವು ಅಸ್ಪೃಶ್ಯತೆ, ಪುರೋಹಿತಶಾಹಿ ದಬ್ಬಾಳಿಕೆ ಮತ್ತು ಕೆಳವರ್ಗದ ಜನರ ಶೋಷಣೆಯನ್ನು ಬಿಂಬಿಸುತ್ತದೆ. ಶಿವನ ಪಾತ್ರದ ಮೂಲಕ ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸುತ್ತದೆ. ಸಮಾಜದ ಕಪಟತನವನ್ನು ಬಯಲು ಮಾಡುತ್ತದೆ. ಜಾತಿಗಿಂತ ಮಾನವೀಯತೆಯೇ ಮುಖ್ಯ ಎಂಬ ಸಂದೇಶವನ್ನು ಸಾರುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ವಿ.ನವೀನ್, ನಾಟಕದಲ್ಲಿ ಸಣ್ಣ ಪುಟ್ಟ ಪಾತ್ರಗಳು ಕೂಡ ಮುಖ್ಯ, ಜಲಗಾರ ನಾಟಕವು ಕೇವಲ ಒಂದು ಕಥೆಯಲ್ಲ, ಅದು ಸಮಾಜದ ಕನ್ನಡಿಯಾಗಿದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಲು ಕೂಡ ಪ್ರೇರೇಪಣೆ ನೀಡುತ್ತದೆ. ಜಲಗಾರ ನಾಟಕವು ಕುವೆಂಪುರವರು ಬರೆದ ಅನೇಕ ನಾಟಕಗಳಲ್ಲಿ ತುಂಬಾ ವೈಶಿಷ್ಟ್ಯತೆಯನ್ನು ಪಡೆದಿದೆ. ಸಾಮಾಜಿಕ ಸ್ಥಿತಿಯ ಜೊತೆಗೆ ಕಾಯಕದ ಮಹತ್ವವನ್ನು ಇದು ತಿಳಿಸುತ್ತದೆ. ಈ ನಾಟಕವನ್ನು ವರ್ತಮಾನಕ್ಕೆ ತಂದು ನೋಡುವ ಅವಶ್ಯಕತೆಯಿದೆ ಎಂದರು.


ಕಾರ್ಯಾಗಾರದಲ್ಲಿ ಪ್ರಾಧ್ಯಾಪಕರಾದ ಮರ್ಗನಹಳ್ಳಿ ಪ್ರಕಾಶ್, ಕೆ.ವಿ.ಪರಶುರಾಮ್, ಎಸ್.ರಮ್ಯಾ, ಸಲ್ಮಾ ತಬಸುಮ್, ಅಸ್ಮಾ ಮೇಲಿನಮನಿ, ಡಾ.ಕೆ.ಎಸ್.ಸರಳ, ಡಾ.ಗಿರಿಧರ್, ಧರ್ಮೇಗೌಡ ಮೊದಲಾದವರು ಭಾಗವಹಿಸಿದ್ದರು. ರಮ್ಯಾ ನಿರೂಪಿಸಿದರೆ, ಪರಶುರಾಮ್ ಸ್ವಾಗತಿಸಿ, ಸಲ್ಮಾ ವಂದಿಸಿದರು.