ಮಾಜಿ ಸಚಿವ ಜಮೀರ್ ಅಹಮ್ಮದ್‌ ಹಾಗೂ ದಾವಣಗೆರೆ ಕಾಂಗ್ರೆಸ್ ಮುಖಂಡ ಮಹಮ್ಮದ್ ಸಿರಾಜ್ ಆಡಿಯೋ ವೈರಲ್ ಆದ ಬೆನ್ನಲ್ಲೇ ಮಹಮ್ಮದ್ ಸಿರಾಜ್ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- ವೈರಲ್ ಆಡಿಯೋ, ಸಂಭಾಷಣೆಯೂ ನಮ್ದಲ್ಲ, ಸೂಕ್ತ ತನಿಖೆಯಾಗಲಿ: ಮಹಮ್ಮದ್ ಸಿರಾಜ್ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಜಿ ಸಚಿವ ಜಮೀರ್ ಅಹಮ್ಮದ್‌ ಹಾಗೂ ದಾವಣಗೆರೆ ಕಾಂಗ್ರೆಸ್ ಮುಖಂಡ ಮಹಮ್ಮದ್ ಸಿರಾಜ್ ಆಡಿಯೋ ವೈರಲ್ ಆದ ಬೆನ್ನಲ್ಲೇ ಮಹಮ್ಮದ್ ಸಿರಾಜ್ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇಲ್ಲಿನ ವಿದ್ಯಾನಗರ ಪೊಲೀಸ್ ಠಾಣೆ ಕಟ್ಟಡದಲ್ಲಿರುವ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ಸೋಮವಾರ ರಾತ್ರಿ ಧಾವಿಸಿದ ಮುಸ್ಲಿಂ ಸಮಾಜ ಹಾಗೂ ಕಾಂಗ್ರೆಸ್ ಮುಖಂಡರೂ ಆದ ಮಹಮ್ಮದ್ ಸಿರಾಜ್‌ ತಮ್ಮ ಹಾಗೂ ಜಮೀರ್ ಅಹಮ್ಮದ್ ಆಡಿಯೋ ಅಲ್ಲವೆಂದೇ ಸ್ಪಷ್ಟಪಡಿಸಿದ್ದು, ವೈರಲ್ ಆದ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿ, ತನಿಖೆಗೆ ಒತ್ತಾಯಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಮಹಮ್ಮದ್ ಸಿರಾಜ್, ಸುಳ್ಳು ಸುದ್ದಿ ಹರಿ ಬಿಟ್ಟವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದ್ದೇನೆ. ನಾನು ಕೆಎಂಡಿಸಿ ನಾಮ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೇನೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿಯೇ ಕೆಲಸ ಮಾಡಿದ್ದೇನೆ. ಆದರೂ, ಯಾರೋ ದೂರವಾಣಿ ಮೂಲಕ ಚರ್ಚಿಸಿದ ವಿಷಯವೆಂದು ಸುಳ್ಳುಧ್ವನಿ ಸೃಷ್ಟಿಸಿ, ಹರಿಯಬಿಟ್ಟಿದ್ದಾರೆ ಎಂದು ಆರೋಪಿಸಿದರು.

ನನ್ನ ಹಾಗೂ ಜಮೀರ್ ಅಹಮ್ಮದ್‌ ಖಾನ್‌ರ ತೇಜೋವಧೆಗೆ ಹುನ್ನಾರ ನಡೆಸಿದ್ದಾರೆ. ರಾಜಕೀಯ ದುರುದ್ದೇಶದಿಂದ ಹೀಗೆಲ್ಲಾ ಮಾಡಿದ್ದಾರೆ. ನನ್ನ ಹಾಗೂ ಜಮೀರ್ ಅಹಮದ್ ಖಾನ್‌ರ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸಿದವರ ವಿರುದ್ಧ ಪೊಲೀಸ್ ಇಲಾಖೆ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಡಿವೈಎಸ್ಪಿಗೆ ದೂರು ನೀಡಿದ್ದೇನೆ. ಡಿವೈಎಸ್ಪಿ ಸಾಹೇಬರು ಸ್ವೀಕೃತಿ ಪತ್ರ ಸಹ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಮಂಗಳ‍ವಾರ ಭೇಟಿ ಮಾಡಿ, ಎಫ್ಐಆರ್ ಪ್ರತಿ ನೀಡುವುದಾಗಿ ಡಿವೈಎಸ್ಪಿ ಸಾಹೇಬರು ಹೇಳಿದ್ದಾರೆ. ಜಮೀರ್ ಅಹಮ್ಮದ್ ಸಾಹೇಬ್ರು ಹಾಗೂ ನನ್ನ ಫೋಟೋ ಬಳಸಿ, ಸುಳ್ಳು ಸುದ್ದಿ ಹರಡಲಾಗಿದೆ. ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದೇನೆ. ನಾವು ಮಾತನಾಡುವುದನ್ನು ಮಾತನಾಡಿದ್ದೇವೆ ಅಂತಾ ಸೃಷ್ಟಿ ಮಾಡಿದ್ದಾರೆ. ಇದು ಯಾರು ವೈರಲ್ ಮಾಡಿದ್ದಾರೆಂಬ ಬಗ್ಗೆ, ಇದರ ಹಿಂದೆ ಯಾರಿದ್ದಾರೆಂಬ ಬಗ್ಗೆಯೂ ತನಿಖೆ ಮಾಡಲಿ ಎಂದು ಹೇಳಿದರು.

ಯಾರಿಂದ ಆಡಿಯೋ ಬಹಿರಂಗವಾಗಿದೆ ಎಂಬುದೂ ತನಿಖೆಯಾಗಿ, ಸತ್ಯಾಸತ್ಯತೆ ಬೆಳಕಿಗೆ ಬರಬೇಕು. ವಕ್ಫ್ ಭ್ರಷ್ಟಾಚಾರದ ಹಣವನ್ನು ಚುನಾವಣೆಯಲ್ಲಿ ಬಳಸಿದ್ದಾರೆಂಬ ಆರೋಪ ಮಾಡಿದ್ದಾರೆ. ನನ್ನ ವಿರುದ್ಧ ಆರೋಪ ಮಾಡಿದವರು ನಾನು ಭ್ರಷ್ಟಾಚಾರ ಮಾಡಿದ್ದರೆ ಅದನ್ನು ಸಾಕ್ಷ್ಯಾಧಾರ ಸಮೇತ ಬಹಿರಂಗಪಡಿಸಿ, ಸಾಬೀತುಪಡಿಸಬೇಕು. ಇಲ್ಲವಾದರೆ ಸುಳ್ಳು ಆರೋಪ ಮಾಡಿದವರ ವಿರುದ್ಧವೂ ಕಾನೂನು ಹೋರಾಟ ಮಾಡುತ್ತೇನೆ ಎಂದು ಮಹಮ್ಮದ್ ಸಿರಾಜ್ ಎಚ್ಚರಿಸಿದರು.