ಬಳ್ಳಾರಿ ಜೈಲಲ್ಲಿ ಜಾಮರ್ ಅಳವಡಿಕೆ; ನೆಟ್‌ವರ್ಕ್ ಸಿಗದೆ ಜನರ ಪರದಾಟ

| Published : May 18 2025, 01:48 AM IST

ಬಳ್ಳಾರಿ ಜೈಲಲ್ಲಿ ಜಾಮರ್ ಅಳವಡಿಕೆ; ನೆಟ್‌ವರ್ಕ್ ಸಿಗದೆ ಜನರ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಕೇಂದ್ರ ಕಾರಾಗೃಹದ ಕೈದಿಗಳ ಮೊಬೈಲ್ ಬಳಕೆ ನಿಯಂತ್ರಿಸಲು ಅಳವಡಿಸಿರುವ ಜಾಮರ್‌ನಿಂದ ಸುತ್ತಮುತ್ತಲ ನಿವಾಸಿಗಳು, ವ್ಯಾಪಾರಿಗಳು, ಉದ್ಯೋಗಿಗಳು ಪರದಾಡುವಂತಾಗಿದೆ.

ವ್ಯಾಪಾರ ವಹಿವಾಟಿಗೆ ಕುತ್ತು ತಂದ ಜೈಲ್ ಜಾಮರ್

ಸುತ್ತಮುತ್ತ ಪ್ರದೇಶಗಳ ಜನರಿಗೆ ತಪ್ಪದ ಸಂಕಷ್ಟ

ಬಳ್ಳಾರಿ ಕಾರಾಗೃಹದಲ್ಲಿವೆ 10 ಜಾಮರ್

ಪ್ರಿಕ್ವೆನ್ಸಿ ಕಡಿಮೆ ಮಾಡಿದರೂ ಪ್ರಯೋಜನವಾಗಿಲ್ಲ

ಕೆ.ಎಂ.ಮಂಜುನಾಥ್

ಕನ್ನಡಪ್ರಭ ವಾರ್ತೆ ಬಳ್ಳಾರಿ

ಇಲ್ಲಿನ ಕೇಂದ್ರ ಕಾರಾಗೃಹದ ಕೈದಿಗಳ ಮೊಬೈಲ್ ಬಳಕೆ ನಿಯಂತ್ರಿಸಲು ಅಳವಡಿಸಿರುವ ಜಾಮರ್‌ನಿಂದ ಸುತ್ತಮುತ್ತಲ ನಿವಾಸಿಗಳು, ವ್ಯಾಪಾರಿಗಳು, ಉದ್ಯೋಗಿಗಳು ಪರದಾಡುವಂತಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಜಾಮರ್ ಸಮಸ್ಯೆ ತೀವ್ರವಾಗಿದ್ದು ಜೈಲು ಸುತ್ತಮುತ್ತಲಿನ ಪ್ರದೇಶದಲ್ಲಿ ನಿತ್ಯದ ವಾಣಿಜ್ಯ ಚಟುವಟಿಕೆಗಳಿಗೆ ತೀವ್ರ ಅಡ್ಡಿಯಾಗಿದೆ.

ಈ ಬಗ್ಗೆ ಜೈಲು ಅಧಿಕಾರಿಗಳ ಪೂರಕ ಕ್ರಮಗಳ ನಡುವೆಯೂ ಜಾಮರ್ ಸಮಸ್ಯೆ ಮುಂದುವರಿದಿದ್ದು ಜೈಲು ಸುತ್ತಮುತ್ತಲ ನಿವಾಸಿಗಳಿಗೆ ನುಂಗದ ತುತ್ತಾಗಿ ಪರಿಣಮಿಸಿದೆ. ಏರ್‌ಟೆಲ್, ಬಿಎಸ್‌ಎನ್‌ಎಲ್, ಜಿಯೋ ಸೇರಿದಂತೆ ವಿವಿಧ ಕಂಪನಿಗಳ ನೆಟ್‌ವರ್ಕ್ ಅಡಚಣೆ ನಿರಂತವಾಗಿದ್ದು ಮೊಬೈಲ್ ಸಂಭಾಷಣೆ ವೇಳೆ ಪದೇ ಪದೇ ಸಂಭಾಷಣೆ ಸ್ಥಗಿತಗೊಳ್ಳುವುದರಿಂದ ಬಳಕೆದಾರರು ರೋಸಿ ಹೋಗಿದ್ದಾರೆ.

ಜೈಲಿನಲ್ಲಿದ್ದೇ ಅಪರಾಧ ಕೃತ್ಯ:

ರಾಜ್ಯದ ಪ್ರಮುಖ ಜೈಲುಗಳಲ್ಲಿ ಒಂದಾದ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನಟೋರಿಯಸ್ ರೌಡಿಗಳು, ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಖ್ಯಾತರು ಬಳ್ಳಾರಿ ಜೈಲಿನಲ್ಲಿದ್ದಾರೆ. ಜೈಲು ಸಿಬ್ಬಂದಿ ಕಟ್ಟುನಿಟ್ಟಿನ ತಪಾಸಣೆ ನಡುವೆಯೂ ಮೊಬೈಲ್‌ಗಳು ಜೈಲಿನೊಳಗೆ ಸೇರಿಕೊಳ್ಳುತ್ತವೆ. ಕೆಲವು ಕುಖ್ಯಾತ ರೌಡಿಗಳು ಜೈಲಿನಲ್ಲಿದ್ದೇ ಸಂವಹನ ಸಾಧನ ಬಳಸಿ ಅಪರಾಧ ಕೃತ್ಯ ಮುಂದುವರಿಸುತ್ತಾರೆ. ಈ ಹಿಂದೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಜೈಲಿಗೆ ದಾಳಿ ನಡೆಸಿ, ಪರಿಶೀಲಿಸಿದಾಗ ದುಬಾರಿ ಬೆಲೆಯ ಹತ್ತಾರು ಮೊಬೈಲ್‌ ಸಿಕ್ಕಿದ್ದವು. ಇದರಿಂದ ಎಚ್ಚೆತ್ತ ಬಂಧಿಖಾನೆ ಇಲಾಖೆ ಬಳ್ಳಾರಿ ಜೈಲಿನಲ್ಲಿ ಹೆಚ್ಚಿನ ಜಾಮರ್ ಅಳವಡಿಸಿ ಮತ್ತಷ್ಟೂ ಬಿಗಿಗೊಳಿಸಿತು. ಸದ್ಯ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ 10 ಜಾಮರ್‌ ಅಳವಡಿಸಲಾಗಿದ್ದು ಜೈಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಟ್‌ವರ್ಕ್‌ ಗೆ ತೀವ್ರ ಸಮಸ್ಯೆಯಾಗಿದೆ. ಜೈಲ್ ಬಳಿಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಇದ್ದು ಕಾರ್ಯನಿರ್ವಹಣೆ ಸಮಸ್ಯೆ ಹಿನ್ನೆಲೆ ಎಸ್ಪಿ ಡಾ. ಶೋಭಾರಾಣಿ ಸೂಚನೆಯಂತೆ ಜಾಮರ್‌ ನ ಪ್ರಿಕ್ವೆನ್ಸಿ ಕಡಿಮೆಗೊಳಿಸಲಾಗಿದೆಯಾದರೂ ಜಾಮರ್ ನಿಂದಾಗಿರುವ ತೊಂದರೆಯಂತೂ ನಿವಾರಣೆಗೊಂಡಿಲ್ಲ. ನೆಟ್‌ವರ್ಕ್‌ಗಾಗಿ ನಿತ್ಯ ಒದ್ದಾಟ:

ಬಳ್ಳಾರಿ ಕೇಂದ್ರ ಕಾರಾಗೃಹದ ಸುತ್ತಮುತ್ತ ನೂರಾರು ವ್ಯಾಪಾರ ಮಳಿಗೆಗಳಿವೆ. ಜೈಲು ಸನಿಹದಲ್ಲಿಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಇದೆ. ನಾಲ್ಕೈದು ಬ್ಯಾಂಕುಗಳು ಕಾರ್ಯನಿರ್ವಹಿಸುತ್ತವೆ. ಶಾಲಾ-ಕಾಲೇಜುಗಳು, ಹೋಟೆಲ್‌ಗಳು, ಆಸ್ಪತ್ರೆಗಳಿವೆ. ಇತ್ತೀಚೆಗೆ ಬಹುತೇಕ ಜನರ ವ್ಯಾಪಾರ ವಹಿವಾಟು ಆನ್‌ಲೈನ್‌ನಲ್ಲಿಯೇ ನಡೆಯುತ್ತಿದ್ದು ಜಾಮರ್ ಅಳವಡಿಕೆಯಿಂದಾಗಿರುವ ಸಮಸ್ಯೆಗೆ ಜನರು ತತ್ತರಿಸಿ ಹೋಗಿದ್ದಾರಲ್ಲದೆ, ಸಾರ್ವಜನಿಕರ ಹಿತ ಕಾಯದ ಜೈಲು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕುತ್ತಿದ್ದಾರೆ. ವೈಫೈ ಸಮಸ್ಯೆಯಾಗುತ್ತಿದೆ. ಆನ್‌ಲೈನ್ ಬ್ಯಾಂಕಿಂಗ್‌ಗೆ ತೊಂದರೆಯಾಗಿದೆ. ಒಟಿಪಿಗಳು ಸ್ವೀಕಾರವಾಗುತ್ತಿಲ್ಲ. ತುರ್ತು ಸೇವೆಗಳು, ಯುಪಿಐ ಪಾವತಿಗೆ ತೊಂದರೆಯಾಗಿದ್ದು, ಜಾಮರ್ ಅಳವಡಿಕೆಯಿಂದಾಗಿ ದೈನಂದಿನ ಜನಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಾಮರ್ ಅಳವಡಿಕೆಯಿಂದ ಜೈಲು ಸುತ್ತಮುತ್ತಲ 200 ಮೀಟರ್ ಪ್ರದೇಶದವರೆಗೆ ಅದರ ಪರಿಣಾಮ ಇರಲಿದ್ದು, ನಿತ್ಯದ ವ್ಯಾಪಾರ ವಹಿವಾಟು ಸೇರಿದಂತೆ ಆನ್‌ಲೈನ್ ಚಟುವಟಿಕೆಗಳಿಗೆ ತೀವ್ರ ಅಡ್ಡಿಯಾಗಿದೆ.