ಚಿಕ್ಕಮಗಳೂರುಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಉದ್ಯಾನ ಕಲಾ ಸಂಘ, ಕೆಫೆಕ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜ.26 ರಿಂದ 28 ರವರೆಗೆ ಜಿಲ್ಲಾ ಆಟದ ಮೈದಾನದಲ್ಲಿ ಚೈತ್ರೋತ್ಸವ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎನ್‌.ಎಂ. ನಾಗರಾಜ್‌ ಹೇಳಿದರು.

- ಜಿಲ್ಲಾ ಆಟದ ಮೈದಾನದಲ್ಲಿ 3 ದಿನ ಕಾರ್ಯಕ್ರಮ । ಹಲವು ಕಲಾಕೃತಿಗಳು, ನಾಣ್ಯಗಳ ಪ್ರದರ್ಶನ, ಡಿಸಿ ನಾಗರಾಜ್‌ ಮಾಹಿತಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಉದ್ಯಾನ ಕಲಾ ಸಂಘ, ಕೆಫೆಕ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜ.26 ರಿಂದ 28 ರವರೆಗೆ ಜಿಲ್ಲಾ ಆಟದ ಮೈದಾನದಲ್ಲಿ ಚೈತ್ರೋತ್ಸವ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎನ್‌.ಎಂ. ನಾಗರಾಜ್‌ ಹೇಳಿದರು.

ಜನವರಿ 26 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.

ಫಲಪುಷ್ಪ ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆಯಾಗಿ ಭದ್ರ ಬಾಲ್ಯ, ನಾದಲೋಕ ಹಾಗೂ ಇನ್ನಿತರೆ ನೂತನ ಪುಷ್ಪ ಕಲಾಕೃತಿಗಳ ಪ್ರದರ್ಶನ. ಹೂವುಗಳಿಂದ ಅಲಂಕರಿಸಿದ ಐಸಿಸಿ ಮಹಿಳಾ ವಿಶ್ವ ಕಪ್‌ ಕ್ರಿಕೆಟ್‌ ತಂಡದ ಕಲಾಕೃತಿ ನಿರ್ಮಾಣ , ಸಿರಿಧಾನ್ಯಗಳಿಂದ ಅಲಂಕೃತಗೊಂಡ ಶಾರದಾಂಬೆ ಮೂರ್ತಿ, ಸಾಲುಮರದ ತಿಮ್ಮಕ್ಕ ಅವರ ಹಾಗೂ ಕರ್ನಾಟಕ ನಕ್ಷೆ ಕಲಾಕೃತಿಗಳನ್ನು ನಿರ್ಮಾಣ ಮಾಡ ಲಾಗುವುದು ಎಂದು ಹೇಳಿದರು.

ಮಲೆನಾಡು ಹಾಗೂ ಕರಾವಳಿ ಭಾಗದ ಪುರಾತನ ಕಾಲದಲ್ಲಿ ಬಳಸಿದ ಸಾಮಾಗ್ರಿ ಮತ್ತು ನಾಣ್ಯಗಳ ಪ್ರದರ್ಶನ. ಸುಮಾರು 8 ಸಾವಿರಕ್ಕೂ ಹೆಚ್ಚು ಸಂಖ್ಯೆಯ ವಿವಿಧ ಬಣ್ಣ ಬಣ್ಣದ ಹೂಕುಂಡಗಳ ಜೋಡಣೆ, ಇಕೇಬಾನ ಮಾದರಿ ಹೂವಿನ ಜೋಡಣೆ, ಪ್ರಾಣಿ ಮತ್ತು ಪಕ್ಷಿಗಳ ಹಾಗೂ ಪ್ರಸಿದ್ಧ ಕಲಾವಿದರ ತರಕಾರಿ ಕೆತ್ತನೆ ಪ್ರದರ್ಶಿಕೆಗಳು, ತೆಂಗಿನ ಗರಿಗಳಿಂದ ಅಲಂಕೃತಗೊಂಡ ಜಾನೂರು ಆರ್ಟ್‌ನಿಂದ ಆರ್ಚ್‌ ನಿರ್ಮಾಣ ಮಾಡಲಾಗುವುದು ಎಂದರು.

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಕಾಫಿ ಬೆಳೆ ಆಕರ್ಷಕ ಆರ್ಚ್‌ ನಿರ್ಮಾಣ, ಜಿಲ್ಲೆಯ ರೈತರು ಬೆಳೆದಿ ರುವಂತಹ ತೋಟಗಾರಿಕೆ ಬೆಳೆಗಳ ಪ್ರದರ್ಶನ, ಅಪರೂಪದ ವಿದೇಶಿ ಹಾಗೂ ಅಪ್ರಧಾನ ಹಣ್ಣುಗಳು ಮತ್ತು ತರಕಾರಿ ಪ್ರದರ್ಶನ. ಇದರ ಜತೆಗೆ ವಿವಿಧ ಖಾದ್ಯಗಳ ಆಹಾರ, ವಾಣಿಜ್ಯ, ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದ್ದು, ಸುಮಾರು 100ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುವುದು ಎಂದು ಹೇಳಿದರು.

ನೇರವಾಗಿ ನೇಕಾರರಿಂದ ನೇಯ್ದ ಇಳಕಲ್‌, ಮೊಳಕಾಲ್ಮೂರು, ಕಂಚಿ, ಕೆಎಸ್‌ಐಸಿ ಹಾಗೂ ವಿವಿಧ ರೀತಿಯ ಸೀರೆ ಹಾಗೂ ಇತರೆ ವಸ್ತ್ರಗಳ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಎಸ್ಟೇಟ್‌ ಗಾರ್ಡನ್‌ ಮತ್ತು ನಗರ ವಾಸಿಗಳಿಗೆ ಉತ್ತಮ ಉದ್ಯಾನವನ ನಿರ್ವಹಣೆಗೆ ಸ್ಪರ್ಧೆ ಏರ್ಪಡಿಸ ಲಾಗಿದೆ ಎಂದ ಜಿಲ್ಲಾಧಿಕಾರಿ ಜನವರಿ 28 ರಂದು ಬೆಳಿಗ್ಗೆ 11.30ಕ್ಕೆ ಸಾರ್ವಜನಿಕರಿಗೆ ಹಣ್ಣುಗಳಿಂದ ತಯಾರಿಸಿದ ಖಾದ್ಯಗಳ ಫಲಪಾಕ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ಮೀನುಗಾರಿಕೆ ಇಲಾಖೆಯಿಂದ ಅಕ್ಷೇರಿಯಂ ಹಾಗೂ ಅಲಂಕಾರಿಕ ಮೀನುಗಳ ಪ್ರದರ್ಶನ ಮತ್ತು ಮಾರಾಟ, ರೇಷ್ಮೆ ಇಲಾಖೆಯಿಂದ ರೇಷ್ಮೆ ಹುಳುವಿನ ಜೀವನ ಚಕ್ರದ ಪ್ರಾತ್ಯಕ್ಷಿಕೆ. ಜ.27 ರಂದು ಮಧ್ಯಾಹ್ನ 12.30ಕ್ಕೆ ಶ್ವಾನ ಮತ್ತು ಜಾನುವಾರು ಪ್ರದರ್ಶನ ಏರ್ಪಡಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ದೇವಿರಮ್ಮ ದೇವಾಲಯ ಮಂಟಪದ ಹೂವಿನ ಕಲಾಕೃತಿ ನಿರ್ಮಾಣ. ಜ.26 ರಿಂದ 28 ರವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜೀತೆಂದ್ರಕುಮಾರ್‌ ದಯಾಮ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಎಸ್‌. ಕೀರ್ತನಾ ಉಪಸ್ಥಿತರಿದ್ದರು.

-- ಬಾಕ್ಸ್‌ --ರಾಜ್ಯದ ವಿವಿಧ ಜಿಲ್ಲೆಗಳು ಯಾವುದರಲ್ಲಿ ಖ್ಯಾತಿ ಹೊಂದಿದಿಯೋ ಅವುಗಳನ್ನು ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಂತಹ ಜಿಲ್ಲೆಗಳಿಗೆ ಪ್ರತ್ಯೇಕ ಸ್ಟಾಲ್‌ ನಿರ್ಮಾಣ ಮಾಡಲಾಗುವುದು. ಕಳೆದ ವರ್ಷ ನಡೆದ ಚೈತ್ರೋತ್ಸವದಲ್ಲಿ ಸುಮಾರು 3 ಲಕ್ಷ ಜನರು ಭೇಟಿ ನೀಡಿದ್ದರು. ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ಸಾಧ್ಯತೆ ಹೆಚ್ಚಿದೆ.- ಎಚ್‌.ಎಸ್‌. ಕೀರ್ತನಾ

- ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಪಂ 22 ಕೆಸಿಕೆಎಂ 2ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಡಿಸಿ ನಾಗರಾಜ್ ಮಾತನಾಡಿದರು. ಎಸ್ಪಿ ಜಿತೇಂದ್ರ ಕುಮಾರ್‌ ದಯಾಮ, ಜಿಪಂ ಸಿಇಓ ಕೀರ್ತನಾ ಇದ್ದರು.