ಸಾರಾಂಶ
ಕಡೂರು, ಹುಲಿಕೆರೆ, ಇತರ ಗ್ರಾಪಂನಿಂದ ಆಯೋಜನೆ । ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸೂಚನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುರೈತರು, ಕೂಲಿ ಕಾರ್ಮಿಕರು, ಅನಕ್ಷರಸ್ಥರು ಮತ್ತು ವಿವಿಧ ವರ್ಗದ ಜನರ ಸಮಸ್ಯೆಗಳನ್ನು ಗ್ರಾಮ ಮಟ್ಟದಲ್ಲೇ ಪರಿಹರಿಸಿ ಜನಸ್ನೇಹಿ ಆಡಳಿತ ನೀಡುವುದೇ ಜನಸಂಪರ್ಕ ಸಭೆಯ ಮುಖ್ಯ ಉದ್ದೇಶ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು ತಾಲೂಕು ಪಂಚಾಯಿತಿ, ಕಡೂರು ಹಾಗೂ ಹುಲಿಕೆರೆ, ಪಿಳ್ಳೇನಹಳ್ಳಿ ಮತ್ತು ಎಸ್.ಬಿದರೆ ಗ್ರಾಮ ಪಂಚಾಯಿತಿ ವತಿಯಿಂದ ಹುಲಿಕೆರೆ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಜನಸಂಪರ್ಕ ಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಗೆಹರಿಸಬಹುದಾದ ಸಾರ್ವಜನಿಕರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳೆ ಸ್ವತಃ ಜನ ಸಾಮಾನ್ಯರ ಮನೆ ಅಂಗಳಗಳಲ್ಲಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಜನಸಂಪರ್ಕ ಸಭೆ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದರು.ಜನಸಂಪರ್ಕ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದು ಸಾರ್ವಜನಿಕರು ಯಾವುದೇ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೂ ಅವುಗಳನ್ನು ಬಿತ್ತರಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಗೆಹರಿಯಬಹುದಾದ ಎಲ್ಲಾ ಸಮಸ್ಯೆಗಳಿಗೆ ಸ್ಥಳದಲ್ಲೇ ಸೂಕ್ತ ಪರಿಹಾರ ನೀಡಿ ಬಗೆಹರಿಸಲಾಗುವುದು. ಅಧಿಕಾರಿಗಳು ಒಮ್ಮೆ ಸಾರ್ವಜನಿಕರು ಸಮಸ್ಯೆಗಳನ್ನು ತಂದರೆ ಶೀಘ್ರವಾಗಿ ಪರಿಹಾರ ಕ್ರಮ ಕೈಗೊಂಡು ಸಮಸ್ಯೆಗಳ ಅಹವಾಲುಗಳು ಪುನರಾವರ್ತನೆ ಆಗದಂತೆ ಕ್ರಮ ವಹಿಸಬೇಕು ಎಂದರು.
ಕಡೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಪ್ರವೀಣ್ ಪ್ರಾಸ್ತಾವಿಕವಾಗಿ ಮಾತನಾಡಿ, ಆಡಳಿತ ವ್ಯವಸ್ಥೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸುವಂತ ಕಾರ್ಯಕ್ರಮ ಜನಸಂಪರ್ಕ ಸಭೆ. ಕ್ಷೇತ್ರದಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಶಾಸಕರು ಹೆಚ್ಚಿನ ಕ್ರಮ ವಹಿಸುತಿದ್ದಾರೆ. ಈ ಸಭೆಯಲ್ಲಿ ನಿಮ್ಮ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಗುವುದು. ಈ ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದು ಯಾವುದೇ ಯೋಜನೆಗೆ ಸಂಬಂಧಿಸಿದ ಅಹವಾಲು, ಕುಂದುಕೊರತೆಗಳು ಇದ್ದಲ್ಲಿ ಅವುಗಳನ್ನು ಪರಿಹರಿಸಿಕೊಳ್ಳಿ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಹುಲಿಕೆರೆ ಗ್ರಾ.ಪಂ ಅಧ್ಯಕ್ಷೆ ರತ್ನಮ್ಮ, ಪಿಳ್ಳೇನಹಳ್ಳಿ ಗ್ರಾ.ಪಂ ಅಧ್ಯಕ್ಷ ಮಹೇಂದ್ರ ಆಚಾರ್, ಎಸ್.ಬಿದರೆ ಗ್ರಾಪಂ ಅಧ್ಯಕ್ಷ ಸತೀಶ್, ಕಡೂರು ತಾಲೂಕು ತಹಸೀಲ್ದಾರ್ ಮಂಜುನಾಥ್, ಕಡೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮೂರು ಗ್ರಾಮ ಪಂಚಾಯಿತಿಗಳ ಉಪಾಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.