ಮಂಗಳೂರು: ಹವ್ಯಕ ಭಾಷೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪ್ರತ್ಯೇಕ ಅಕಾಡೆಮಿ ಸ್ಥಾಪನೆಯ ಘೋಷಣೆ ಮಾಡಿದ್ದು, ಇದೇ ಮೊದಲ ಬಾರಿಗೆ ಹವ್ಯಕ ಸಮುದಾಯಕ್ಕೆ ಕಾಂಗ್ರೆಸ್‌ ಸರ್ಕಾರ ಪ್ರಾತಿನಿಧ್ಯ ನೀಡಿದೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಎಂ.ಜಿ. ಹೆಗಡೆ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ ಮಾಡಿದ ಸಿಎಂ ಸಿದ್ದರಾಮಯ್ಯ, ಸಂಬಂಧಿಸಿದ ಸಚಿವರಿಗೆ ಹವ್ಯಕ ಭಾಷಾ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸಿದರು.

ಇಂಥ ಅಕಾಡೆಮಿಯ ಅಗತ್ಯ ಇದೆಯೇ ಎಂಬ ಚರ್ಚೆ ಈಗ ಶುರುವಾಗಿದೆ. ಹವ್ಯಕ ಭಾಷೆಯಲ್ಲಿ ಸಂಶೋಧನೆಗಳು, ನಾಟಕಗಳು, ಪ್ರಸಂಗಗಳು ರಚನೆಯಾಗಿವೆ. ಅನೇಕ ಕಾದಂಬರಿಗಳಲ್ಲಿ ಹವ್ಯಕ ಭಾಷೆಯ ಸಂಭಾಷಣೆಗಳಿವೆ. ನೂರಾರು ವರ್ಷಗಳಿಂದ ಈ ಭಾಷೆ ಬೆಳೆದು ಬಂದಿದ್ದು, ಇಂಥ ಸಣ್ಣ ಭಾಷೆಗಳಿಗೆ ಉತ್ತೇಜನ ನೀಡುವುದರಿಂದ ಜನರನ್ನು ಸಾಮಾಜಿಕವಾಗಿ ತೊಡಗಿಕೊಳ್ಳುವಂತೆ ಮಾಡಲು ಸಾಧ್ಯವಾಗಲಿದೆ. ಭಾಷೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಹೊಸ ಚಿಂತನೆಗಳು ಹುಟ್ಟಲಿವೆ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಲಕ್ಷ್ಮೀಶ ಗಬ್ಲಡ್ಕ ಅವರು ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ ಮಾಡುವ ಸಂಕಲ್ಪ ಮಾಡಿ ಸಂಬಂಧಿಸಿದ ಸಚಿವರು, ಅಧಿಕಾರಿಗಳನ್ನು ಸಂಪರ್ಕಿಸಿ, ನಿರಂತರ ಓಡಾಟ ಮಾಡಿ ಸಾಕಾರಗೊಳಿಸಿದ್ದಾರೆ. ದೇಶದ ವೈವಿಧ್ಯತೆಗೆ ಹವ್ಯಕದಂಥ ಸಣ್ಣ ಭಾಷೆಗಳೂ ತನ್ನದೇ ಕೊಡುಗೆ ನೀಡುತ್ತಿರುವುದರಿಂದ ಅಕಾಡೆಮಿ ಸ್ಥಾಪನೆ ಅತ್ಯಂತ ಅಗತ್ಯವಾಗಿತ್ತು. ಎಂದು ಎಂ.ಜಿ. ಹೆಗಡೆ ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ಗೆ ಲಾಭ ನಿರೀಕ್ಷೆ ಇಲ್ಲ:


ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಹವ್ಯಕ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಯೂರಿದ್ದು, ಒಟ್ಟು 6.5 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದೆ. ಅಕಾಡೆಮಿ ಸ್ಥಾಪನೆ ಮಾಡಿದ್ದರಿಂದ ಕಾಂಗ್ರೆಸ್‌ಗೆ ರಾಜಕೀಯ ಲಾಭ ಬರುತ್ತದೆ ಎಂಬ ನಿರೀಕ್ಷೆ ಇಲ್ಲ. ಆದರೆ ಕಾಂಗ್ರೆಸ್‌ ಎಲ್ಲ ವರ್ಗಗಳನ್ನೂ ಸ್ಪರ್ಶ ಮಾಡುತ್ತಿರುವುದಕ್ಕೆ ಇದು ಸಾಕ್ಷಿ ಎಂದವರು ಹೇಳಿದರು.

ಕಾಂಗ್ರೆಸ್‌ ಮುಖಂಡರಾದ ಪ್ರಕಾಶ್‌ ಸಾಲ್ಯಾನ್‌, ಶುಭೋದಯ ಆಳ್ವ, ದುರ್ಗಾಪ್ರಸಾದ್‌, ಯೋಗೀಶ್‌ ನಾಯಕ್‌, ಚಂದ್ರಕಲಾ, ನಮಿತಾ ಡಿ.ರಾವ್‌ ಇದ್ದರು.