17ರಂದು ಮುದ್ದೇಬಿಹಾಳದಲ್ಲಿ ಜನಾಕ್ರೋಶ ಯಾತ್ರೆ

| Published : Apr 13 2025, 02:06 AM IST

ಸಾರಾಂಶ

ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಏ.17ರಂದು ನಗರದಲ್ಲಿನ ದರಬಾರ ಮೈದಾನದಲ್ಲಿ ಸಂಜೆ 4ಕ್ಕೆ ಜನಾಕ್ರೋಶ ಯಾತ್ರೆ ಹಮ್ಮಿಕೊಳ್ಳಲಾಗಿದೆ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ರಾಜ್ಯದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ಹಾಗೂ ಜನವಿರೋಧಿ ನೀತಿ ಖಂಡಿಸಿ, ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಏ.17ರಂದು ನಗರದಲ್ಲಿನ ದರಬಾರ ಮೈದಾನದಲ್ಲಿ ಸಂಜೆ 4ಕ್ಕೆ ಜನಾಕ್ರೋಶ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಹೇಳಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರಣ ಮತಕ್ಷೇತ್ರದ ಬಿಜೆಪಿ ಮುಖಂಡರು, ಭೂತಮಟ್ಟದ ಪದಾಧಿಕಾರಿಗಳು, ಎಲ್ಲ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಗತಿಸುತ್ತಿವೆ. ಜನಪರ ಆಡಳಿತ ಕಾಣುವುದು ಬರಿ ಕನಸಿನ ಮಾತಾಗಿದೆ. ಸದ್ಯ ಸರ್ಕಾರ ವ್ಯಾಪಕ ಭ್ರಷ್ಟಾಚಾರದಿಂದ ಕೂಡಿದೆ ಎಂದು ಸ್ವತಃ ಸಿಎಂ ಸಿದ್ದರಾಮಯ್ಯನವರ ಆಪ್ತವಲಯದ ಸಲಹಾ ಸಮಿತಿ ಸದಸ್ಯ ಬಸವರಾಜ ರಾಯರೆಡ್ಡಿ ಬಹಿರಂಗವಾಗಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ ಎಂದರು.

ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಹಲವಾರು ಜನಪರ ಯೋಜನೆಗಳ ಕುರಿತು ರಾಜ್ಯದ ಜನರಿಗೆ ಭರವಸೆ ನೀಡಿ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೃಷ್ಣಾಕೊಳ್ಳದ ನೀರಾವರಿ ಸೇರಿ ರಾಜ್ಯದ ಎಲ್ಲ ಭಾಗಗಳಲ್ಲಿ ನೀರಾವರಿಗೆ ಆದ್ಯತೆ ನೀಡುವುದಾಗಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಆಶಾ ಗೋಪುರ ಕಟ್ಟಿದರು. ಎಲ್ಲ ನಿಗಮದಲ್ಲಿ ಸರಕಾರಿ ನೌಕರರನ್ನು ತೆಗೆದುಕೊಳ್ಳಲಾಗುವುದೆಂದು ಸುಳ್ಳು ಹೇಳಿದರು. ವಿವಿಧ ನಿಗಮಗಳಿಗೆ ಅನುದಾನ ಕೊಡುವುದು ಮಾತ್ರವಲ್ಲದೇ ಇರುವ ಹಣವನ್ನು ಖಾಲಿ ಮಾಡಿದ್ದಾರೆಂದರು.

ಮಹಿಳೆಯರಿಗೆ ಗ್ಯಾರಂಟಿ ಯೋಜನೆಯಡಿ ತಿಂಗಳಿಗೆ ₹2 ಸಾವಿರ ನೀಡುವ ಮೂಲಕ ಬಿಪಿಎಲ್ ಕುಟುಂಬದಾರರ ಪಡಿತರ ಕಾರ್ಡ್‌ ರದ್ದು ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದೇ ಪ್ರತಿಯೊಂದು ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಿ ಜನಾಕ್ರೋಶ ಕಾರಣವಾಗಿದ್ದಾರೆ. ಹಾಗಾಗೀ ಬಿಜೆಪಿ ಜನಾಕ್ರೋಶ ಯಾತ್ರೆ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸರಕಾರಕ್ಕೆ ಬಿಸಿ ಮುಟ್ಟಿಸಲಿದೆಂದರು.

ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿದ್ದ ವೇಳೆ ರೈತ ಕಿಸಾನ್‌ ಸನ್ಮಾನ ಯೋಜನೆಯಡಿ ರಾಜ್ಯದ ಪ್ರತಿಯೊಬ್ಬ ರೈತರಿಗೆ ₹4 ಸಾವಿರ, ರೈತ ಮಕ್ಕಳಿಗೆ ವಿದ್ಯಾನಿಧಿಯಡಿ ₹2 ಸಾವಿರ ನೀಡಲಾಗುತ್ತಿತ್ತು. ನಮ್ಮ ಬಿಜೆಪಿ ಸರಕಾರದ ಜನಪರ ಯೋಜನೆ ನಿಲ್ಲಿಸಲಾಗಿದೆ. ಸಿಎಂ ಸಿದ್ದರಾಮಯ್ಯ ರವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಡಿಕೆ ಶಿವಕುಮಾರ ಪ್ರಯತ್ನಿಸುತ್ತಿದ್ರೆ, ಇನ್ನೊಂದೆಡೆ ಡಿಕೆ ಅವರಿಗೆ ಅಧಿಕಾರ ನೀಡಬಾರದೆಂದು ತಂತ್ರಗಾರಿಕೆ ಪ್ರಯತ್ನ ಈ ಸರಕಾರದಲ್ಲಿದೆ. ಕೇವಲ ಅಧಿಕಾರಕ್ಕಾಗಿ, ಕುರ್ಚಿಗಾಗಿ ಬಡಿದಾಡಿಕೊಳ್ಳುವಂತಾಗಿದೆ. ವಿನಃ ನಿಜವಾದ ಸಾಮಾಜಿಕ ಜವಾಬ್ದಾರಿ ಜನಪರ ಆಡಳಿತ ಕಾಣಲು ಈ ಸರಕಾರದಿಂದ ಸಾಧ್ಯವಿಲ್ಲ ಎಂದರು.

ಯತ್ನಾಳ ಬಗ್ಗೆ ಮಾತನಾಡಲ್ಲ ಸದ್ಯ ಅವರು ನಮ್ಮ ಪಕ್ಷದಲ್ಲಿಲ್ಲ. ಅವರ ಜೊತೆ ಬಹುತೇಕರು ಪಕ್ಷದಿಂದ ಉಚ್ಚಾಟನೆಗೊಂಡಿದ್ದಾರೆ. ಇದರಿಂದ ಬಿಜೆಪಿ ಸಂಪೂರ್ಣ ಸ್ವಚ್ಛವಾಗಿದೆ. ಅದರ ಬಗ್ಗೆ ಹೆಚ್ಚಿಗೆ ನಾನು ಮಾತನಾಡುವುದಿಲ್ಲ. ಯಾರೇ ಹೋರಾಟ ಮಾಡಲಿ, ನಾನೂ ಕೂಡ ಲಿಂಗಾಯತ ಹಿಂದೂ ಗೌಡನೇ ಇದ್ದೇನೆ. ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲು ಸಮಯಕ್ಕಾಗಿ ಕಾಯುತ್ತೇನೆ ಇದು ಎಚ್ಚರಿಕೆ ಅಲ್ಲ. ಪಂಚಮಸಾಲಿ ಸಮಾಜಕ್ಕೆ ನಾನ್ಯಾವತ್ತು ಅನ್ಯಾಯ ಮಾಡಿಲ್ಲ. ಮತಕ್ಷೇತ್ರದಲ್ಲಿ ಅತಿಹೆಚ್ಚು ಪಂಚಮಸಾಲಿ ಸಮಾಜ ಬಾಂಧವರು ನಮ್ಮ ಬಿಜೆಪಿಯಲ್ಲಿದ್ದಾರೆ. ಅವರ ಆಶೀರ್ವಾದ ನನ್ನ ಮೇಲಿದೆ ಎಂದರು.

ಈ ವೇಳೆ ತಾಲೂಕು ಮಂಡಲದ ಅಧ್ಯಕ್ಷ ಜಗಧೀಶ ಪಂಪಣ್ಣವರ, ಮುಖಂಡರಾದ ಎಂ.ಎಸ್.ಪಾಟೀಲ, ಗಂಗಾಧರ ನಾಡಗೌಡ, ಕೆಂಚಪ್ಪ ಬಿರಾದಾರ ಮಲಕೇಂದ್ರಾಯಗೌಡ ಪಾಟೀಲ, ಪ್ರಭು ಕಡಿ, ಚನ್ನಪ್ಪ ಕಮಠಿ, ಸೋಮನಗೌಡ ಬಿರಾದಾರ, ಮಲ್ಲಯ್ಯ ಸ್ವಾಮಿ ಚೊಂಡಿ, ರಾಜಶೇಖರ ಹೊಳಿ, ವಿಜಯಕುಮಾರ ಬಡಿಗೇರ, ಶ್ರೀಶೈಲ ದೊಡಮನಿ, ಸಂಗಮ ದೇವರಳ್ಳಿ, ಪ್ರೀತಿ ಕಂಬಾರ, ಗಿರಿಶಗೌಡ ಪಾಟೀಲ, ಗೌರಮ್ಮ ಹುನಗುಂದ, ರೇಖಾ ಕೊಂಡಗೂಳಿ, ಪ್ರೇಮಶಿಂಗ ಚವ್ಹಾಣ, ಸಂಜು ಬಾಗೇವಾಡಿ ಸೇರಿದಂತೆ ಅನೇಕರು ಇದ್ದರು.