ಸರ್ಕಾರದ ಅಭಿವೃದ್ದಿ ಸಹಿಸದೆ ಜನಾಕ್ರೋಶ ಯಾತ್ರೆ

| Published : May 23 2025, 11:46 PM IST

ಸರ್ಕಾರದ ಅಭಿವೃದ್ದಿ ಸಹಿಸದೆ ಜನಾಕ್ರೋಶ ಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ರಾಜ್ಯ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಸಹಿಸದೆ ಜನಾಕ್ರೋಶ ಯಾತ್ರೆ ಮಾಡುತ್ತಿದ್ದು ರಾಜ್ಯದ ಜನರು ಇದನ್ನು ಒಪ್ಪುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ರಾಜ್ಯ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಸಹಿಸದೆ ಜನಾಕ್ರೋಶ ಯಾತ್ರೆ ಮಾಡುತ್ತಿದ್ದು ರಾಜ್ಯದ ಜನರು ಇದನ್ನು ಒಪ್ಪುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಪುರಸಭೆ ಬಯಲು ರಂಗಮಂದಿರ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಜಿಪಂನಿಂದ ಶುಕ್ರವಾರ ನಡೆದ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 513 ಕೋಟಿ ರು. ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಬಳಿ ಹಣವಿಲ್ಲದೆ ಅಭಿವೃದ್ದಿ ಕೆಲಸಗಳು ಕುಂಠಿತಗೊಂಡಿವೆ ಎಂದು ಈ ಎರಡು ಪಕ್ಷಗಳವರು ಬೊಗಳೆ ಬಿಡುತ್ತಿದ್ದಾರೆ, ಆದರೆ ನಾವು ಕಳೆದ ಎರಡು ವರ್ಷದ ಅವಧಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ 90 ಸಾವಿರ ಕೋಟಿ ರು. ಖರ್ಚು ಮಾಡುವುದರ ಜತೆಗೆ ಇತರೆ ಯೋಜನೆಗಳಿಗೆ 60 ಸಾವಿರ ಕೋಟಿ ರು. ವ್ಯಯಿಸಿದ್ದು, ಹಣ ಇಲ್ಲದಿದ್ದರೆ ಈ ಕೆಲಸಗಳು ಸಾಧ್ಯವಾಗುತ್ತಿತ್ತೆ ಎಂದರು.

ನಮ್ಮ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸಿದೆ ಎಂದು ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ರಸಗೊಬ್ಬರ, ಔಷಧಿ ಮತ್ತು ಚಿನ್ನಬೆಳ್ಳಿ ಸೇರಿದಂತೆ ಇತರ ವಸ್ತುಗಳ ಬೆಲೆ ಏರಿಕೆ ಮಾಡಿದ್ದರೂ ಏಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಕೇಳಿದರು.

ಕಾಂಗ್ರೆಸ್‌ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಜನಪರ ಮತ್ತು ಬಡವರ ಪರವಾದ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಎರಡು ಪಕ್ಷಗಳಿಗೆ ಇಲ್ಲ, ಕಳೆದ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳನ್ನು ಮತದಾರರ ಆಶೀರ್ವಾದಿಂದ ಗೆದ್ದಿದ್ದು, ಚುನಾವಣಾ ಪೂರ್ವದಲ್ಲಿ ನಾವು ಜನತೆಗೆ ನೀಡಿದ 593 ಭರವಸೆಗಳ ಪೈಕಿ ಈಗಾಗಲೇ 242 ಪೂರೈಸಿದ್ದು, ಉಳಿದವುಗಳನ್ನು ಮುಂದಿನ ಮೂರು ವರ್ಷದೊಳಗೆ ಈಡೇರಿಸುವ ವಿಶ್ವಾಸವಿದೆ ಎಂದರು.

ಕೆ.ಆರ್‌. ನಗರ ಕ್ಷೇತ್ರ ಬಂದು ನೋಡಲು ಸವಾಲು: ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದವರು ಲೂಟಿ ಮಾಡುವ ದುರುದ್ದೇಶದಿಂದ 2.70 ಲಕ್ಷ ಕೋಟಿಗಳಿಗೆ ಖಜಾನೆಯಲ್ಲಿ ಹಣ ಇಲ್ಲದಿದ್ದರೂ ಆಡಳಿತಾತ್ಮಕ ಮಂಜೂರಾತಿ ನೀಡಿ, ಅದರೊಂದಿಗೆ 1.66 ಲಕ್ಷ ಕೋಟಿ ರೂಗಳನ್ನು ಶಾಸಕರಿಗೆ ಅಭಿವೃದ್ದಿಗೆ ಅನುದಾನ ನೀಡುತ್ತೇವೆಂದು ಮಂಜೂರಾತಿ ಕೊಟ್ಟಿದ್ದರು, ಆ ಹೊರೆಗಳನ್ನು ಹೊತ್ತುಕೊಂಡ ನಮ್ಮ ಸರ್ಕಾರ ಅಭಿವೃದ್ದಿ ಪಥದತ್ತ ಸಾಗುತ್ತಿದ್ದು, ರಾಜ್ಯ ಸರ್ಕಾರದ ಬಳಿ ಹಣ ಇಲ್ಲದೆ ಅಭಿವೃದ್ದಿ ಕೆಲಸಗಳು ನಿಂತು ಹೋಗಿವೆ ಎಂದು ಬೊಬ್ಬೆ ಹೊಡೆಯುವವರು ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಬಂದು ನೋಡಬೇಕೆಂದು ಅವರು ಸವಾಲು ಹಾಕಿದರು.

ಸುಳ್ಳು ಹೇಳುವುದನ್ನು ಬಿಡಬೇಕು: ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯ ಸರ್ಕಾರ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಮೊದಲನೇ ಸ್ಥಾನಕ್ಕೇರಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ ಸಿದ್ದರಾಮಯ್ಯನವರು ಹಣವಿಲ್ಲ ಎಂಬುವವರು ಈ ವಿಚಾರವನ್ನು ಮನಗಾಣಬೇಕೆಂದಲ್ಲದೆ ಸುಧೀರ್ಘ ಅವಧಿಯಿಂದ ರಾಜಕೀಯದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜೇಂದ್ರ ಸುಳ್ಳು ಹೇಳುವುದನ್ನು ಬಿಡಬೇಕು ಎಂದು ಸಲಹೆ ನೀಡಿದರು.

ಸರ್ಕಾರದ ವಿರುದ್ದ ಸುಳ್ಳು ಹೇಳಿಕೆ ನೀಡುವ ಬಿಜೆಪಿಯವರನ್ನು ಜನತೆ ಪ್ರಶ್ನಿಸಿಸಬೇಕಿದೆ ಎಂದ ಮುಖ್ಯಮಂತ್ರಿಗಳು ನಮ್ಮ ಮೇಲೆ ಜನರಿಗೆ ಆಕ್ರೋಶವಿದ್ದಿದ್ದರೆ ಉಪ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತಿತ್ತೆ ಎಂದು ನೆರೆದಿದ್ದ ಜನರನ್ನು ಕೇಳಿದರಲ್ಲದೆ, ತಮ್ಮ ಅಧಿಕಾರದ ಅವಧಿಯಲ್ಲಿ ಬಡವರಿಗೆ ಒಂದು ಮನೆಯನ್ನು ನೀಡದವರು ಈಗ ಬುರುಡೆ ಬಿಡುತ್ತಿದ್ದಾರೆಂದರು.

ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ: ಕಾಂಗ್ರೆಸ್ ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ನವರು ಒಂದಾಗಿದ್ದಾರೆ, ಆದರೆ ನಾನು ಜನರ ಆಶೀರ್ವಾದದಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಮತ್ತೆ ಸೋಲಿಸಿ ಎರಡನೇ ಬಾರಿಗೆ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸದ ಮಾತುಗಳನ್ನಾಡಿದರು.

ಸಚಿವರಾದ ಕೆ. ವೆಂಕಟೇಶ್, ಎನ್. ಚೆಲುವರಾಯಸ್ವಾಮಿ, ಭೈರತಿ ಸುರೇಶ್, ಬೋಸರಾಜು, ದಿನೇಶ್‌ಗುಂಡೂರಾವ್, ಶಾಸಕರಾದ ಅನಿಲ್‌ಚಿಕ್ಕಮಾದು, ಹರೀಶ್ ಗೌಡ, ಎಚ್.ಎಂ. ಗಣೇಶ್‌ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಡಾ.ಡಿ. ತಿಮ್ಮಯ್ಯ, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳದ ಅಧ್ಯಕ್ಷ ಎಂ. ರಮೇಶ್, ಪುರಸಭೆ ಅಧ್ಯಕ್ಷ ಶಿವುನಾಯಕ್, ಉಪಾಧ್ಯಕ್ಷೆ ವಸಂತಮ್ಮ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ತಾಪಂ ಮಾಜಿ ಅಧ್ಯಕ್ಷರಾದ ಮಹದೇವಸ್ವಾಮಿ, ಎಚ್.ಟಿ. ಮಂಜುನಾಥ್, ತಾಲೂಕು ಶರಣ ಸಾಹಿತ್ಯ ಪರಿಷತ ಅಧ್ಯಕ್ಷ ಸಿ.ಪಿ. ರಮೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಕಾರ್ಯದರ್ಶಿ ಜಿ.ಎಸ್. ವೆಂಕಟೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಘು, ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಉಪವಿಭಾಗಾಧಿಕಾರಿ ವಿಜಯಕುಮಾರ್, ತಹಸೀಲ್ದಾರರಾದ ಜಿ. ಸುರೇಂದ್ರಮೂರ್ತಿ, ಎಸ್. ನರಗುಂದ್ ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಮುಖಂಡರು ಇದ್ದರು.