ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಬಿಜೆಪಿ ಕೈಗೊಂಡಿರುವ ಜನಾಕ್ರೋಶ ಯಾತ್ರೆ ಮೇ.8ರಂದು ಸಂಜೆ ನಾಲ್ಕು ಗಂಟೆಗೆ ಚಿತ್ರದುರ್ಗಕ್ಕೆ ಆಗಮಿಸಲಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದ ಪ್ರಕರಣದ ಹಿನ್ನಲೆ ಚಿತ್ರದುರ್ಗಕ್ಕೆ ಆಗಮಿಸಬೇಕಾಗಿದ್ದ ಜನಾಕ್ರೋಶ ಯಾತ್ರೆ ಮುಂದೂಡಲ್ಪಟ್ಟಿತ್ತು. ಯಾತ್ರೆ ಸಂಗಡ ಮಾಜಿ ಸಚಿವ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಪಕ್ಷದ ಅನೇಕ ಮುಖಂಡರು ಆಗಮಿಸಲಿದ್ದಾರೆ ಎಂದರು. ಸಿಎಂ ಸಿದ್ದರಾಮಯ್ಯನವರು ಭಾವನಾತ್ಮಕ ಸಮಸ್ಯೆಗಳನ್ನು ಸೃಷ್ಟಿಸಿ ಮತ ಬ್ಯಾಂಕನ್ನಾಗಿ ಮಾಡಿಕೊಂಡಿದ್ದಾರೆ. 2ನೇ ಬಾರಿ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿದ್ದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಅಧಿಕಾರಿಗಳು, ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಅವರ ಕಿರುಕುಳಕ್ಕೆ ಅನೇಕರು ಬಲಿಯಾಗಿದ್ದಾರೆ. ಪದವೀಧರರಿಗೆ ತಿಂಗಳಿಗೆ 3 ಸಾವಿರ ರು. ಡಿಪ್ಲಮೋ ಪಡೆದವರಿಗೆ ಒಂದುವರೆ ಸಾವಿರ ರು. ನೀಡುವುದಾಗಿ ಆಸೆ ತೋರಿಸಿ ವಂಚಿಸಿದ್ದಾರೆ ಎಂದು ಆಪಾದಿಸಿದರು.
ಸುಪ್ರೀಂ ಕೋರ್ಟ್ ಆದೇಶವನ್ನು ಬಚ್ಚಿಟ್ಟು ಒಳ ಮೀಸಲಾತಿಗಾಗಿ ಮತ್ತೊಮ್ಮೆ ಜಾತಿ ಗಣತಿ ಆರಂಭಿಸಿರುವುದರಲ್ಲಿ ಅರ್ಥವಿಲ್ಲ. ಸರ್ವೇ ಕಾರ್ಯದ ಜೊತೆ ಕಮಿಟಿ ರಚಿಸಿರುವುದು ಏಕ ಪಕ್ಷೀಯವಾಗಿದೆ. ಕೇಂದ್ರ ಸರ್ಕಾರ ಜನಗಣತಿ ಜೊತೆ ಜಾತಿ ಗಣತಿ ಆರಂಭಿಸಿರುವುದನ್ನು ರಾಜ್ಯ ಸರ್ಕಾರಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ, ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ಒತ್ತಡಕ್ಕೆ ಮಣಿದು ಗಣತಿ ನಡೆಸುತ್ತಿದೆ ಎಂದು ಅಪ ಪ್ರಚಾರದಲ್ಲಿ ತೊಡಗಿದ್ದಾರೆ. ಅವಕಾಶ ವಂಚಿತ ಸಮುದಾಯಗಳನ್ನು ಗುರುತಿಸಿ ಸೌಲಭ್ಯ ಒದಗಿಸುವುದು ಕೇಂದ್ರದ ಜಾತಿ ಗಣತಿ ಉದ್ದೇಶ ಎಂದು ಹೇಳಿದರು.ಪಾಕಿಸ್ತಾನಿ ಪ್ರಜೆಗಳನ್ನು ಹುಡುಕಿ ಹೊರ ಹಾಕುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿರುವುದರಿಂದ ರಾಜ್ಯ ಸರ್ಕಾರ ದಿಟ್ಟ ಕ್ರಮ ಕೈಗೊಂಡು ಪಾಕಿಸ್ತಾನಿ ಪ್ರಜೆಗಳನ್ನು ಪತ್ತೆಹಚ್ಚುವ ಕೆಲಸ ಮಾಡಬೇಕು. ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ 26 ಮಂದಿ ಅಮಾಯಕರನ್ನು ಬಲಿ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಉಗ್ರಗಾಮಿಗಳನ್ನು ಮಟ್ಟ ಹಾಕಲು ದೇಶದ ಪ್ರಧಾನಿ ಕೈಗೊಂಡಿರುವ ಐದು ನಿರ್ಣಯಗಳಿಗೆ ನಮ್ಮ ಬೆಂಬಲವಿದೆ. ಭಯೋತ್ಪಾದನೆಯನ್ನು ತಡೆಯಲು ಭಾರತದೊಂದಿಗೆ ಬೇರೆ ದೇಶಗಳು ಕೈಜೋಡಿಸಿವೆ. ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಟ್ಟು ಎಲ್ಲಾ ಸಂಬಂಧಗಳನ್ನು ಕಡಿತಗೊಳಿಸುವ ಕೇಂದ್ರದ ತೀರ್ಮಾನಕ್ಕೆ ದೇಶದ ಪ್ರತಿಯೊಬ್ಬರ ಒಪ್ಪಿಗೆಯಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, 8ರಂದು ಸಂಜೆ 4 ಗಂಟೆಗೆ ಚಿತ್ರದುರ್ಗಕ್ಕೆ ಬರುವ ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ನಡೆಸಿ ಜನರನ್ನು ಜಾಗೃತಿಗೊಳಿಸಲಾಗುವುದು. ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕೊಲೆಯಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಬೆನ್ನ ಹಿಂದೆಯೆ ಇಬ್ಬರು ನಾಯಕರಿಗೆ ಕೊಲೆ ಬೆದರಿಕೆಯಿದೆ. ಕೊಲೆ ಮಾಡಿದವರ ಪರ ಅನುಕಂಪದ ರೀತಿಯಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳು ಮಾತನಾಡುತ್ತಿರುವುದು ಖಂಡನೀಯ ಎಂದು ಹೇಳಿದರು.ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಜಿ.ಟಿ.ಸುರೇಶ್ ಸಿದ್ದಾಪುರ, ಸಂಪತ್ ಕುಮಾರ್, ರಾಂದಾಸ್, ಜಯಪಾಲಯ್ಯ, ವಕ್ತಾರ ನಾಗರಾಜ್ ಬೇದ್ರೆ, ಯುವ ಮುಖಂಡ ಡಾ.ಸಿದ್ದಾರ್ಥ, ನಗರ ಮಂಡಲ ಅಧ್ಯಕ್ಷ ಲೋಕೇಶ್, ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗರಾಜ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ಕಾರ್ಯದರ್ಶಿ ಮೋಹನ್, ಭರಮಸಾಗರ ಮಂಡಲ ಅಧ್ಯಕ್ಷ ಶೈಲೇಶ್, ಕೆ.ಟಿ.ಕುಮಾರಸ್ವಾಮಿ ಇದ್ದರು.