ಜನನಿ ಯೋಗ, ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಜಾಗತಿಕ ಮನ್ನಣೆ ನಿಶ್ಚಿತ

| Published : Nov 03 2025, 02:30 AM IST

ಜನನಿ ಯೋಗ, ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಜಾಗತಿಕ ಮನ್ನಣೆ ನಿಶ್ಚಿತ
Share this Article
  • FB
  • TW
  • Linkdin
  • Email

ಸಾರಾಂಶ

ದೇಹ ಮತ್ತು ಮನಸ್ಸಿನ ಆರೋಗ್ಯ ಸರಿಯಾಗಿದ್ದರೆ ಅವರ ಬದುಕು ಸ್ವಸ್ಥ ಇದೆ.

ಹರಪನಹಳ್ಳಿ: ಜಗತ್ತಿಗೆ ಇಂದು ಬೇಕಾಗಿರುವುದು ಆರೋಗ್ಯ ಮತ್ತು ನೆಮ್ಮದಿ. ಕಲ್ಯಾಣ ಕರ್ನಾಟಕದ ಜನತೆಯ ಸ್ವಾಸ್ಥ್ಯ ಕಾಪಾಡುವ ಮಹಾಸಂಕಲ್ಪದೊಂದಿಗೆ ಆರಂಭವಾಗಿರುವ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಜಾಗತಿಕ ಮನ್ನಣೆ ಪಡೆಯುವುದು ನಿಶ್ಚಿತ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ಅವರು ಕಲ್ಯಾಣ ಕರ್ನಾಟಕದ ಮೊಟ್ಟ ಮೊದಲ 100 ಹಾಸಿಗೆ ಸೌಲಭ್ಯವಿರುವ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಲೋಕಾರ್ಪಣೆ ಸಮಾರಂಭದಲ್ಲಿ ಶ್ರೀಗಳು ಭಾನುವಾರ ಆರ್ಶೀವಚನ ನೀಡಿದರು.

ದೇಹ ಮತ್ತು ಮನಸ್ಸಿನ ಆರೋಗ್ಯ ಸರಿಯಾಗಿದ್ದರೆ ಅವರ ಬದುಕು ಸ್ವಸ್ಥವಾಗಿರುತ್ತದೆ. ಆರೋಗ್ಯವಂತ ಮತ್ತು ಧರ್ಮನಿಷ್ಠ ಪ್ರಜೆಗಳಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಸದ್ವಿಚಾರಗಳಿಂದ ಮನಸ್ಸು ಸ್ವಸ್ಥವಾಗಿರುತ್ತದೆ. ಮನಸ್ಸು ಸ್ವಸ್ಥವಾಗಿದ್ದರೆ ದೇಹಾರೋಗ್ಯ ಸರಿ ಇರುತ್ತದೆ ಎಂದು ವಿಶ್ಲೇಷಿಸಿದರು.

ಅರಿಷಡ್ವರ್ಗಗಳನ್ನು ಗೆದ್ದವನು ಜಗತ್ತು ಗೆಲ್ಲಬಹುದು. ಈ ಆರನ್ನು ಯೋಗ್ಯವಾಗಿ ಕಾಪಾಡಿಕೊಂಡರೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ನೇತೃತ್ವ ವಹಿಸಿದ್ದ ತೆಗ್ಗಿನಹಳ್ಳಿ ಮಠದ ವರಸದ್ಯೋಜಾತ ಶ್ರೀ ಆರ್ಶೀವಚನ ನೀಡಿ, ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಆರೋಗ್ಯವನ್ನು ನಾವು ಸಂರಕ್ಷಿಸಿದ್ದೇವೆ. ಆರೋಗ್ಯ ಎಲ್ಲ ಸಾಧನೆಗಳ ಮೂಲ. ಆರೋಗ್ಯವಂತ ಜನತೆ ದೇಶದ ಸಂಪತ್ತು. ಆರೋಗ್ಯದ ಜಾಗೃತಿ ಕಡಿಮೆ ಇರುವ ಈ ಭಾಗದಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತ ಪ್ರಕೃತಿ ಚಿಕಿತ್ಸಾ ಕೇಂದ್ರ ಆರಂಭವಾಗಿರುವುದು ಸಮಾಜಕ್ಕೆ ಅತ್ಯಮೂಲ್ಯ ಕೊಡುಗೆ ಎಂದು ಹೇಳಿದರು.

ಯೋಗ ಎಂದರೆ ಕೇವಲ ವ್ಯಾಯಾಮವಲ್ಲ. ಇದು ದೇಹ ಮತ್ತು ಆತ್ಮದ ಸಹಯೋಗ. ಯೋಗ- ಪ್ರಾಣಾಯಾಮದ ಮೂಲಕ ನಮ್ಮ ದೇಹ- ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವುದು ಸಾಧ್ಯ. ಜೀವನದಲ್ಲಿ ಯಾವುದೇ ಸಾಧನೆ ಮಾಡಬೇಕಾದರೂ ಆರೋಗ್ಯ ಅಗತ್ಯ. ಆರೋಗ್ಯವಂತರು ಮತ್ತಷ್ಟು ದೃಢ ಆರೋಗ್ಯವನ್ನು ಪಡೆದು ರೋಗಗಳಿಂದ ಮುಕ್ತರಾಗುವಲ್ಲಿ ಪ್ರಕೃತಿ ಚಿಕಿತ್ಸೆ ಕೊಡುಗೆ ನೀಡುತ್ತದೆ ಎಂದು ವಿಶ್ಲೇಷಿಸಿದರು.

ಪಂಚಭೂತಗಳಿಂದ ಮಾಡಲ್ಪಟ್ಟ ಶರೀರದ ಆರೋಗ್ಯ ಕಾಪಾಡಿಕೊಳ್ಳಲು ಇದನ್ನೇ ಆಧಾರವಾಗಿಟ್ಟುಕೊಂಡು ಚಿಕಿತ್ಸೆ ನೀಡುವ ಪ್ರಕೃತಿ ಚಿಕಿತ್ಸೆ ಸರ್ವಶ್ರೇಷ್ಠ. ಆಧುನಿಕ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಕೃತಿಯತ್ತ ವಾಲುವುದು ಅನಿವಾರ್ಯ ಎಂದು ಪ್ರತಿಪಾದಿಸಿದರು.

ಶಾಸಕಿ ಎಂ.ಪಿ. ಲತಾ ಮಾತನಾಡಿ, ಜೀವನಶೈಲಿ ರೋಗಗಳು ಇಂದು ದೇಶದ ಸಾಮಾಜಿಕ ಹಾಗೂ ಧಾರ್ಮಿಕ ಮುನ್ನಡೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಯುವಜನತೆಯಿಂದ ಹಿಡಿದು ಶ್ರಮಶಕ್ತಿಯ ಕ್ಷಮತೆಯನ್ನೇ ಜೀವನಶೈಲಿ ರೋಗಗಳು ಕ್ಷಯಿಸುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಅನಿವಾರ‍್ಯವಾಗಿದೆ. ಆಧುನಿಕ ವೈದ್ಯವಿಜ್ಞಾನ ರೋಗ ಚಿಕಿತ್ಸೆಗಿಂತ ರೋಗಗಳು ಬಾಧಿಸದಂತೆ ತಡೆಯುವ ಮುಂಜಾಗ್ರತಾ ಕ್ರಮಗಳಿಗೆ ಒತ್ತು ನೀಡಿದ್ದು, ಸಮಗ್ರ ಸುಕ್ಷೇಮಕ್ಕೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವರದಾನವಾಗಿದೆ ಎಂದರು.

ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪ್ರಶಾಂತ ಸಾಗರ ಶಿವಾಚಾರ‍್ಯ ಸ್ವಾಮೀಜಿ ಆರ್ಶೀವಚನ ನೀಡಿದರು. ಜಯ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷೆ ಜಯಶ್ರೀ ಪಾಟೀಲ ಅಧ್ಯಕ್ಷೀಯ ಭಾಷಣದಲ್ಲಿ, ಮಧ್ಯಕರ್ನಾಟಕದ ಜನತೆಗೆ ಸದಾ ಉಪಯೋಗಿಯಾಗುವ ದೊಡ್ಡ ಕೊಡುಗೆ ನೀಡಬೇಕು ಎಂಬ ನಮ್ಮ ಕನಸು ಇಂದು ನನಸಾಗುತ್ತಿದೆ. ಜನತಾ ಸೇವೆಯೇ ಜನಾರ್ದನನ ಸೇವೆ ಎಂಬ ಪರಮಪೂಜ್ಯರ ಅನ್ನದಾಸೋಹ, ಅಕ್ಷರ ದಾಸೋಹದಿಂದ ಪ್ರೇರಣೆ ಪಡೆದು ಸಮಸ್ತ ಮನುಕುಲದ ಸ್ವಾಸ್ಥ್ಯ ರಕ್ಷಣೆಗೆ ಕೈಲಾದ ಕೊಡುಗೆ ನೀಡಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಈ ಅತ್ಯಾಧುನಿಕ ಹಾಗೂ ಸುಸಜ್ಜಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಜನಸೇವೆಗೆ ಸರ‍್ಪಿಸಲು ಹೆಮ್ಮೆ ಎನಿಸುತ್ತಿದೆ ಎಂದರು.

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಹಾಗೂ ನಿರ್ದೇಶಕ ಡಾ.ರಾಜೇಶ್ ಪಾದೇಕಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಲ್ಯಾಣ ಕರ್ನಾಟಕದ ಜನತೆಗೆ ಕೈಗೆಟುಕುವ ದರದಲ್ಲಿ ಉತ್ತಮ ಆರೋಗ್ಯ ಸೌಲಭ್ಯ ಒದಗಿಸಲು ಸಂಸ್ಥೆ ಬದ್ಧವಾಗಿದೆ. ಅಪಾರ ಪರಿಶ್ರಮದಿಂದ ಈ ಸಂಸ್ಥೆ ತಲೆ ಎತ್ತಿದ್ದು, ಈ ಭಾಗದ ಸಾಮಾಜಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸಂಸ್ಥೆಯ ತಜ್ಞ ವೈದ್ಯರು ಹಾಗೂ ಚಿಕಿತ್ಸಕರು ಹಗಲಿರುಳು ದುಡಿಯಲು ಬದ್ಧರಾಗಿದ್ದಾರೆ ಎಂದು ಹೇಳಿದರು.

ಸಂಸ್ಥೆಯ ಮಾಧ್ಯಮ ಹಾಗೂ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಉದಯಶಂಕರ ಭಟ್ ಸ್ವಾಗತಿಸಿ, ಜಯ ಎಜ್ಯುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಡಾ.ಮಹೇಶ್ ಎಸ್.ಎನ್ ವಂದಿಸಿದರು. ಧಾರ್ಮಿಕ ವಿಧಿವಿಧಾನಗಳನ್ನು ಡಾ.ಜೀತಮಿತ್ರಾಚಾರ್ ಬಳಗದವರು ನೆರವೇರಿಸಿದರು. ಸಂಸ್ಥೆಯ ಅಭಿವೃದ್ಧಿಗೆ ನೆರವಾದ ಗಣ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಮುಖ್ಯಶಿಕ್ಷಕ ಸಿ.ಎಂ.ಕೊಟ್ರಯ್ಯ ಮತ್ತು ಭಾರತಿ ಕಾರ್ಯಕ್ರಮ ನಿರೂಪಿಸಿದರು.