ಸಾರಾಂಶ
ಜನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಜನಪದ ಸಿರಿ ತಂಡದ ಮುಖ್ಯಸ್ಥರಾದ ಜರಗನಹಳ್ಳಿ ಕಾಂತರಾಜು ನೇತೃತ್ವ ವಹಿಸಿದ್ದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕನ್ನಡದ ಪ್ರಖ್ಯಾತ ದೇಸಿ ವಾಹಿನಿ ಜನಪದ ಸಿರಿ ಕನ್ನಡ ತಂಡದ ಆಶ್ರಯದಲ್ಲಿ ಕುಶಾಲನಗರದ ಕೂಡ್ಲೂರು ವೀರ ಭೂಮಿ ಜನಪದ ಗ್ರಾಮದಲ್ಲಿ ಹಿ.ಚಿ ಹಬ್ಬ ಮತ್ತು ಜನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಲಾಯಿತು.ಜನಪದ ಸಿರಿ ತಂಡದ ಮುಖ್ಯಸ್ಥರಾದ ಜರಗನಹಳ್ಳಿ ಕಾಂತರಾಜು ನೇತೃತ್ವದಲ್ಲಿ ವೀರ ಭೂಮಿಯಲ್ಲಿ ಗಿರಿಜನ ಜಾನಪದ ಸಂಪತ್ತು ಎಂದು ಖ್ಯಾತರಾಗಿರುವ ಹಂಪೆ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರು ಆಗಿರುವ ಡಾ. ಹಿ.ಚಿ ಬೋರ ಲಿಂಗಯ್ಯ ಅವರಿಗೆ 70 ವರ್ಷ ಸಂದಿರುವ ಹಿನ್ನೆಲೆಯಲ್ಲಿ ಈ ವಿಶೇಷ ಹಬ್ಬ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಡಾ ಬೋರಲಿಂಗಯ್ಯ ಅವರು ನಗರಿ ಬಾರಿಸುವ ಮೂಲಕ ಚಾಲನೆ ನೀಡಿದರು.
ಶಾಸ್ತ್ರೀಯ ಕಲೆಗಾರರಿಗೆ ದೊರಕುವ ಎಲ್ಲ ರೀತಿಯ ಸೌಲಭ್ಯಗಳು ಜಾನಪದ ಕಲೆಗಾರರಿಗೆ ಕೂಡ ಲಭಿಸಬೇಕು ಎನ್ನುವ ಉದ್ದೇಶದೊಂದಿಗೆ ಕಳೆದ ನಾಲ್ಕು ದಶಕಗಳಿಂದ ಪಶ್ಚಿಮ ಘಟ್ಟಗಳ ಅರಣ್ಯಗಳ ನಡುವೆ ಅಲೆದು ಬುಡಕಟ್ಟು ಜನರ ಸಂಪರ್ಕ ಮಾಡುವ ಮೂಲಕ ನಾಡಿಗೆ ಪರಿಚಯಿಸಿದ ಡಾ ಬೋರಲಿಂಗಯ್ಯ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಈ ಸಂದರ್ಭ ತಿಳಿಸಿದ ಜರುಗನಹಳ್ಳಿ ಕಾಂತರಾಜು ಅವರುರಾಜ್ಯದ ಬುಡಕಟ್ಟು ಕಲಾವಿದರನ್ನು ಒಂದೆಡೆ ಸೇರಿಸುವ ಕಾರ್ಯಕ್ರಮ ಇದಾಗಿದೆ. ಸುಮಾರು 10 ಬುಡಕಟ್ಟು ಜನಾಂಗ ಒಂದೇ ಕಡೆ ಸೇರಿ ನಾನಾ ಪ್ರಕಾರಗಳ ಕಲೆಗಳ ಪ್ರದರ್ಶನ ನಡೆಸಲಿದೆ ಎಂದು ಹೇಳಿದರು.
ರಾಜ್ಯದ ಮತ್ತು ನೆರೆ ರಾಜ್ಯಗಳ ವಿವಿಧ ಕಲಾ ಪ್ರಕಾರ ತಂಡಗಳ ಕಲಾವಿದರ ತಂಡಗಳಿಂದ ಸೋಬಾನೆ ಪದ, ಡೊಳ್ಳು ಕುಣಿತ ಗಜ ನೃತ್ಯ ಪೂಜಾ ಕುಣಿತ ಸೇರಿದಂತೆ ವಿಶೇಷ ಜನಪದ ಕಾರ್ಯಕ್ರಮಗಳು ಜರಗಿದವು.ಈ ಸಂದರ್ಭ ವಿವಿಧ ಕಡೆಗಳ ಜನಪದ ವಿದ್ವಾಂಸರು, ಪದ್ಮಶ್ರೀ ಪ್ರಶಸ್ತಿ ಭಾಜನರಾದ ರಾಣಿ ಮಾಚಯ್ಯ, ಕೊಡಗು ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕೇಶವ ಕಾಮತ್ ಮತ್ತಿತರರು ಇದ್ದರು.