ಜನಪದೋತ್ಸವದ ಎರಡನೇ ಆವೃತ್ತಿಯು ವಿಶೇಷ ಮಕ್ಕಳ ಪ್ರತಿಭೆಯನ್ನು ಸಮಾಜದ ಮುಂದೆ ಅನಾವರಣಗೊಳಿಸುವ ಮಹತ್ವದ ವೇದಿಕೆಯಾಗಿದೆ. ಇದು ಕೇವಲ ಸ್ಪರ್ಧೆಯಲ್ಲ, ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ದೊರೆತಿರುವ ಅಮೂಲ್ಯ ಅವಕಾಶವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಅಂಗವಿಕಲರ ಒಕ್ಕೂಟ ಮೈಸೂರು ಘಟಕವು ಒರೆಕಲ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಬುದ್ಧಿವಿಕಲಚೇತನ ಮಕ್ಕಳಿಗಾಗಿ ಮೈಸೂರು ವಿಭಾಗ ಮಟ್ಟದ ಜನಪದ ನೃತ್ಯ ಸ್ಪರ್ಧೆ-ಜನಪದೋತ್ಸವ-2026 ಕಾರ್ಯಕ್ರಮವು ನಗರದ, ಕಲಾಮಂದಿರದ ಕಿರು ರಂಗಮಂದಿರ ಆವರಣದಲ್ಲಿ ಅತ್ಯಂತ ಸಂಭ್ರಮ, ಸಡಗರ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ನಡೆಯಿತು.

ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಮೈಸೂರು ವಿಭಾಗದ 12ಕ್ಕೂ ಹೆಚ್ಚು ವಿಶೇಷ ಶಾಲೆಗಳ ಬುದ್ಧಿವಿಕಲಚೇತನ ಮಕ್ಕಳು ತಮ್ಮ ವಿಶಿಷ್ಟ ಜನಪದ ನೃತ್ಯಗಳ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು.

ಇದು ಕೇವಲ ಸ್ಪರ್ಧೆಯಲ್ಲ, ಪ್ರತಿಭೆ ಪ್ರದರ್ಶಿಸುವ ಅವಕಾಶ:

ಮೈಸೂರು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಎಸ್. ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನಪದೋತ್ಸವದ ಎರಡನೇ ಆವೃತ್ತಿಯು ವಿಶೇಷ ಮಕ್ಕಳ ಪ್ರತಿಭೆಯನ್ನು ಸಮಾಜದ ಮುಂದೆ ಅನಾವರಣಗೊಳಿಸುವ ಮಹತ್ವದ ವೇದಿಕೆಯಾಗಿದೆ. ಇದು ಕೇವಲ ಸ್ಪರ್ಧೆಯಲ್ಲ, ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ದೊರೆತಿರುವ ಅಮೂಲ್ಯ ಅವಕಾಶವಾಗಿದೆ ಎಂದರು.

ಸಮರ್ಥನಂ ಅಂಗವಿಕಲರ ಸಂಸ್ಥೆಯ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಗುರುರಾಘವೇಂದ್ರ ಮಾತನಾಡಿ, ಸಮರ್ಥನಂ ಸಂಸ್ಥೆಯು ದೇಶಾದ್ಯಂತ ಸುಮಾರು 1,500ಕ್ಕೂ ಹೆಚ್ಚು ಶಾಲೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ವಿಶೇಷ ಮಕ್ಕಳ ಶಿಕ್ಷಣ ಮತ್ತು ಪುನರ್ವಸತಿಗೆ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ ಎಂದರು.

ಸಮರ್ಥನಂ ವಿಶೇಷ ಶಾಲೆಗಳ ವ್ಯವಸ್ಥಾಪಕಿ ಡಾ.ಕೆ. ಗೀತಾ ಮಾತನಾಡಿ, ನಾನು ಹಲವು ವರ್ಷಗಳಿಂದ ವಿವಿಧ ರೀತಿಯ ವಿಶೇಷಚೇತನ ಮಕ್ಕಳೊಂದಿಗೆ ಕೆಲಸ ಮಾಡಿದ್ದೇನೆ. ಪ್ರತಿಯೊಬ್ಬ ಮಗುವಿನಲ್ಲೂ ವಿಶಿಷ್ಟ ಪ್ರತಿಭೆ ಅಡಗಿದೆ. ಅವರಿಗೆ ಸೂಕ್ತ ವೇದಿಕೆ ಮತ್ತು ಪ್ರೋತ್ಸಾಹ ದೊರೆತಾಗ ಅವರ ಸಾಮರ್ಥ್ಯ ಹೊರಹೊಮ್ಮುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಅಂಗವಿಕಲರ ಒಕ್ಕೂಟ – ಮೈಸೂರು ಘಟಕದ ಅಧ್ಯಕ್ಷ ಎನ್. ಶ್ರೀಧರ್ ದೀಕ್ಷಿತ್ ಮಾತನಾಡಿದರು.

ಸಮರ್ಥನಂ ಅಂಗವಿಕಲರ ಸಂಸ್ಥೆಯ ಮೈಸೂರು ವಿಭಾಗದ ಮುಖ್ಯಸ್ಥ ಶಿವರಾಜು ಮಾತನಾಡಿದರು.

ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ವಿತರಿಸಲಾಯಿತು.

ಪ್ರಥಮ ಬಹುಮಾನ: ಪ್ರೇರಣಾ ವಿಶೇಷ ಶಾಲೆ, ಮಂಡ್ಯ-15 ಸಾವಿರ ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ: ಆಶಾ ಸದನ ವಿಶೇಷ ಶಾಲೆ, ಮಂಡ್ಯ- ರು. 8 ಸಾವಿರ ಹಾಗೂ ಆಕರ್ಷಕ ಟ್ರೋಫಿ.

ತೃತೀಯ ಬಹುಮಾನ: ಆಶಿಯಾನ ವಿಶೇಷ ಶಾಲೆ, ಮೈಸೂರು-ರು. 5 ಸಾವಿರ ಹಾಗೂ ಆಕರ್ಷಕ ಟ್ರೋಫಿ

ಡಾ. ಸೋಮಶೇಖರ್, ಶ್ರೀನಿವಾಸ ರೆಡ್ಡಿ, ಸಾಗರ ಗುಂಬಳ್ಳಿ, ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ-ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಸೌಮ್ಯ ಸೇರಿದಂತೆ ಹಲವಾರು ಗಣ್ಯರು, ವಿವಿಧ ವಿಶೇಷ ಶಾಲೆಗಳ ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.