ಶ್ರೀರಾಮನಂತೆ ವನವಾಸ ಮುಗಿಸಿ ಬಳ್ಳಾರಿಗೆ ಜನಾರ್ದನ ರೆಡ್ಡಿ ಆಗಮನ: ಶ್ರೀರಾಮುಲು

| Published : Oct 04 2024, 01:04 AM IST

ಶ್ರೀರಾಮನಂತೆ ವನವಾಸ ಮುಗಿಸಿ ಬಳ್ಳಾರಿಗೆ ಜನಾರ್ದನ ರೆಡ್ಡಿ ಆಗಮನ: ಶ್ರೀರಾಮುಲು
Share this Article
  • FB
  • TW
  • Linkdin
  • Email

ಸಾರಾಂಶ

ರೆಡ್ಡಿ ಬಳ್ಳಾರಿ ಜಿಲ್ಲೆಗೆ ಆಗಮಿಸುತ್ತಿರುವುದರಿಂದ ನಮಗೆಲ್ಲರಿಗೂ ಸಂತೋಷವಾಗಿದೆ.

ಹೊಸಪೇಟೆ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಶ್ರೀರಾಮಚಂದ್ರನಂತೆ ಹಲವು ವರ್ಷಗಳ ಕಾಲ ವನವಾಸ ಮುಗಿಸಿ ಬಳ್ಳಾರಿಗೆ ಆಗಮಿಸುತ್ತಿದ್ದಾರೆ. ಬಳ್ಳಾರಿ, ವಿಜಯನಗರ ಜಿಲ್ಲೆಗಳ ಜನರಿಗೆ ಇನ್ಮುಂದೆ ರಾಮರಾಜ್ಯ ಆರಂಭವಾಗಬೇಕಿದೆ. ರಾಜಕೀಯ ಚಾಣಕ್ಯನ ಬುದ್ಧಿಶಕ್ತಿ ಬಳಸಿಕೊಂಡು ಬಿಜೆಪಿಯನ್ನು ಬಲಿಷ್ಠಗೊಳಿಸಲಿದ್ದೇವೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದಲ್ಲಿ ಗುರುವಾರ ಜೋಗಿ ಕಾಮನ್‌ಮ್ಯಾನ್‌ ಚಿತ್ರದ ಮುಹೂರ್ತಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರೀರಾಮ ವನವಾಸ ಅನುಭವಿಸಿ ಪುನಃ ರಾಮರಾಜ್ಯಕ್ಕೆ ಬಂದು ಪಟ್ಟಾಭಿಷೇಕ ಮಾಡಿಕೊಡಂತೆ, ನನ್ನ ಸ್ನೇಹಿತ ಜನಾರ್ದನ ರೆಡ್ಡಿ ಕೂಡ ಪಟ್ಟಾಭಿಷೇಕ ಮಾಡಿಕೊಳ್ಳುತ್ತಿದ್ದಾರೆ. ರೆಡ್ಡಿ ಬಳ್ಳಾರಿ ಜಿಲ್ಲೆಗೆ ಆಗಮಿಸುತ್ತಿರುವುದರಿಂದ ನಮಗೆಲ್ಲರಿಗೂ ಸಂತೋಷವಾಗಿದೆ. ಜನಾರ್ದನ ರೆಡ್ಡಿ, ಆನಂದ ಸಿಂಗ್ ಸೇರಿದಂತೆ ನಮ್ಮೆಲ್ಲ ಹಿರಿಯರು ಸೇರಿ ಪಕ್ಷ ಕಟ್ಟುತ್ತೇವೆ ಎಂದರು.

ಮುಂಬರುವ 2028ರ ಸಾರ್ವತ್ರಿಕ ಚುನಾವಣೆಯಲ್ಲಿ ಪುನಃ ಬಿಜೆಪಿ ಅಧಿಕಾರಕ್ಕೆ ತರಲು ಎಲ್ಲರೂ‌ ಶ್ರಮ ವಹಿಸುತ್ತೇವೆ. ಸಂಡೂರು ಉಪ ಚುನಾವಣೆಯಲ್ಲೂ ಎಲ್ಲರೂ ಸೇರಿ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದರು.

ಆತ್ಮಸಾಕ್ಷಿ ನ್ಯಾಯಾಲಯ ಮುಖ್ಯ:

ರಾಜಕೀಯ ಮೌಲ್ಯಗಳನ್ನು ನಾವು ಕಾಪಾಡಬೇಕು. ಎಲ್ಲ ನ್ಯಾಯಾಲಯಗಳಿಗಿಂತ ನಮ್ಮ ಆತ್ಮಸಾಕ್ಷಿ ನ್ಯಾಯಾಲಯ ಎಂಬುದು ಬಹಳಷ್ಟು ದೊಡ್ಡದು. ಮುಡಾ ಸೈಟ್ ಪಡೆದು ವಾಪಸ್ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆತ್ಮಸಾಕ್ಷಿಯಾಗಿ ರಾಜಕೀಯ ನಿವೃತ್ತಿ‌ ಘೋಷಿಸಲಿ ಅಥವಾ ರಾಜೀನಾಮೆ ನೀಡಿ ತನಿಖೆ‌ ಎದುರಿಸಲಿ ಎಂದು ಶ್ರೀರಾಮುಲು ಹೇಳಿದರು.

ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಸಿಎಂ ರಾಜೀನಾಮೆ ನೀಡಬಾರದು ಎಂದು ಹೇಳಿರುವುದರ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಲೋಕಾಯುಕ್ತ ಸಂಸ್ಥೆ ಸರ್ಕಾರದ ಕೆಳಗಡೆ ಕೆಲಸ ಮಾಡುವ ಒಂದು ಅಂಗ ಸಂಸ್ಥೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ಡ ಸ್ಥಾನದಲ್ಲಿದ್ದಾರೆ. ಅವರನ್ನು ಹೇಗೆ ತನಿಖೆ ಮಾಡಲು ಸಾಧ್ಯ? ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದರು.

ಕೇಂದ್ರ‌ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿಲ್ಲ. ಮುಂದೆ ಅವಕಾಶ ಮಾಡಿಕೊಟ್ರೆ ಆ ವಿಚಾರ ಮುನ್ನೆಲೆಗೆ ಬರುತ್ತದೆ ಎಂದು ಚುಟುಕಾಗಿ ಉತ್ತರಿಸಿದರು.

ಮುಖಂಡರಾದ ವೆಂಕಟೇಶ್‌ ಕಾಟವೆ, ಶ್ಯಾಮ್‌ ಸಿಂಗ್‌ ಮತ್ತಿತರರಿದ್ದರು.