ಸಾರಾಂಶ
ರಾಮಮೂರ್ತಿ ನವಲಿ
ಗಂಗಾವತಿ:ಗಾಲಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೈದರಾಬಾದ್‌ನ ಸಿಬಿಐ ಕೋರ್ಟ್ 7 ವರ್ಷ ಜೈಲು ಶಿಕ್ಷೆ ವಿಧಿಸಿದ್ದರಿಂದ ಶಾಸಕ ಸ್ಥಾನದಿಂದ ಅನರ್ಹವಾಗಿರುವ ಬೆನ್ನಲ್ಲೆ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಆರಂಭವಾಗಿದೆ.
ಶಾಸಕ ಸ್ಥಾನದಿಂದ ಅನರ್ಹವಾದ ಸುದ್ದಿ ಪ್ರಕಟವಾಗುತ್ತಿದ್ದಂತೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಪಾಳಯದಲ್ಲಿ ಭಾರೀ ವಿದ್ಯಮಾನಗಳು ನಡೆದಿವೆ.ಇದರ ನಡುವೆ ಗಾಲಿ ಜನಾರ್ದನ ರೆಡ್ಡಿ ಅಭಿಮಾನಿಗಳ ಬಳಗದಿಂದ ಮೇ 13ರಂದು ಶ್ರೀಚೆನ್ನಬಸವ ತಾತ ಕಲಾಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ವಿಶೇಷ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಅವರು ಭಾಗವಹಿಸುತ್ತಿರುವುದು ಭಾರೀ ಕುತೂಹಲ ಕೆರಳಿಸಿದೆ.
ಅರುಣಾ ಸ್ಪರ್ಧಿಸುವರೇ?ಒಂದು ವೇಳೆ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದರೆ ಅನರ್ಹ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಸ್ಪರ್ಧಿಸುವ ಚಿಂತನೆ ನಡೆದಿದೆ. 2023ರಲ್ಲಿ ಬಳ್ಳಾರಿ ವಿಧಾನಸಭಾ ಕ್ಷೇತ್ರದಿಂದ ಕೆಆರ್‌ಪಿಪಿ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿರುವ ಲಕ್ಷ್ಮೀ ಅರುಣಾ, ಇಲ್ಲಿ ಸ್ಪರ್ಧಿಸುವ ಚಿಂತನೆಯಲ್ಲಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಬಿಜೆಪಿಯಿಂದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರ ಹೆಸರು ಮುಂಚೂಣಿಯಲ್ಲಿದೆ. ಈಗ ಲಕ್ಷ್ಮೀ ಅರುಣಾ ಅಖಾಡಕ್ಕೆ ಬಂದಿದ್ದರಿಂದ ಪಕ್ಷ ಯಾರಿಗೆ ಮಣೆ ಹಾಕುತ್ತದೆ ಎಂಬುದು ಕಾದುನೋಡಬೇಕಿದೆ. ಶಾಸಕರಾಗಿ 2 ವರ್ಷ ಪೂರ್ಣಗೊಳ್ಳುತ್ತಿದ್ದರೂ ಸಹ ಗಂಗಾವತಿ ಕ್ಷೇತ್ರದ ಅಭಿವೃದ್ಧಿ ಇನ್ನೂ ಆಗಬೇಕಾಗಿದೆ. ಪತಿಯ ಕನಸು ನನಸು ಮಾಡಬೇಕೆಂಬ ಛಲ ತೊಟ್ಟಿರುವ ಲಕ್ಷ್ಮೀ ಅರುಣಾ, ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಹೀಗಾಗಿಯೇ ಮಂಗಳವಾರ ನಡೆಯುವ ಅಭಿಮಾನಿಗಳ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆಂದು ಅವರ ಆಪ್ತರು ತಿಳಿಸಿದ್ದಾರೆ.
ಕಾಂಗ್ರೆಸ್ಸಿನಲ್ಲೂ ಪೈಪೋಟಿ:ಕಾಂಗ್ರೆಸ್ ಪಕ್ಷದಿಂದ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ, ಮಾಜಿ ಸಂಸದ ಕರಡಿ ಸಂಗಣ್ಣ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿವೆ.
ಚುನಾವಣೆ ಘೋಷಣೆ ಆಗುವುದಕ್ಕೂ ಮೊದಲೇ ಇದೀಗ ಕ್ಷೇತ್ರದಲ್ಲಿ ಉಪ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಕಾರ್ಯಕರ್ತರು ಹಾಗೂ ಮುಖಂಡರ ಸಭೆ ನಡೆಸುತ್ತಿರುವ ಆಕಾಂಕ್ಷಿಗಳು, ಚುನಾವಣೆ ಘೋಷಣೆ ಆದ ತಕ್ಷಣ ತಮ್ಮ ಬೆಂಬಲಿಗರ ಮೂಲಕ ವರಿಷ್ಠರಿಗೆ ಟಿಕೆಟ್‌ಗಾಗಿ ಮನವಿ ಸಲ್ಲಿಸುವ ಸಿದ್ಧತೆ ನಡೆಸಿದ್ದಾರೆ.ಇಂದು ಅರುಣಾ ಸಭೆ...
ಬೆಳಗ್ಗೆ 10 ಗಂಟೆಗೆ ಗಂಗಾವತಿಯಲ್ಲಿ ಅಭಿಮಾನಿಗಳು ಕರೆದಿರುವ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಕ್ಷೇತ್ರದಲ್ಲಿರುವ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಜನಾರ್ದನ ರೆಡ್ಡಿ ಆಪ್ತರು ಕರೆಕೊಟ್ಟಿದ್ದಾರೆ. ಒಂದು ವೇಳೆ ಉಪಚುನಾವಣೆ ಘೋಷಣೆಯಾದರೆ ಲಕ್ಷ್ಮೀ ಅರುಣಾ ಅವರೇ ಸ್ಪರ್ಧಿಸಬೇಕೆಂದು ಅಭಿಮಾನಿಗಳು ಒತ್ತಡ ಹಾಕುತ್ತಿರುವುದರಿಂದ ಈ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.ಜಾಮೀನಿಗಾಗಿ ವಿಶೇಷ ಪೂಜೆ...
ಗಣಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅನರ್ಹ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಆಪ್ತ ಅಲಿಖಾನ್ ಅವರಿಗೆ ಶೀಘ್ರ ಜಾಮೀನು ಸಿಗಲೆಂದು ಪ್ರಾರ್ಥಿಸಿ ಮೇ 13ರಂದು ಬೆಳಗ್ಗೆ 9ಕ್ಕೆ ಕರ್ನೂಲನ ತಾತಾ ದರ್ಗಾ ಮತ್ತು ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಕೆಆರ್‌ಪಿಪಿ ಕಾರ್ಯಕರ್ತರು, ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಗಾಲಿ ಜನಾರ್ದನ ರೆಡ್ಡಿ ಅವರ ಅಭಿಮಾನಿ ಬಳಗದಿಂದ ಆಡಿಯೋ ಮೂಲಕ ಕೋರಿದೆ.