ಇಂದು ಜನಾರ್ದನ ರೆಡ್ಡಿ ಬಿಜೆಪಿಗೆ ಪುನರಾಗಮನ!

| Published : Mar 25 2024, 12:52 AM IST / Updated: Mar 25 2024, 11:51 AM IST

ಸಾರಾಂಶ

ರಾಜ್ಯ ರಾಜಕೀಯದಲ್ಲಿ ನಡೆದ ದಿಢೀರ್‌ ಬೆಳವಣಿಗೆಯಲ್ಲಿ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಮರಳಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದು, ಸೋಮವಾರ ಬೆಳಗ್ಗೆ ಸೇರ್ಪಡೆ ಕಾರ್ಯಕ್ರಮ ನಿಗದಿಯಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ರಾಜಕೀಯದಲ್ಲಿ ನಡೆದ ದಿಢೀರ್‌ ಬೆಳವಣಿಗೆಯಲ್ಲಿ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಮರಳಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದು, ಸೋಮವಾರ ಬೆಳಗ್ಗೆ ಸೇರ್ಪಡೆ ಕಾರ್ಯಕ್ರಮ ನಿಗದಿಯಾಗಿದೆ. 

ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ರೆಡ್ಡಿ ಬಿಜೆಪಿಯಿಂದ ದೂರವಾಗಿದ್ದರು. ಬಳಿಕ ಹಲವು ವರ್ಷಗಳ ಕಾಲ ರಾಜಕೀಯದಿಂದಲೇ ದೂರ ಉಳಿದಿದ್ದರು.

ನಂತರ ತಮ್ಮದೇ ‘ಕಲ್ಯಾಣ ರಾಜ್ಯ ಪ್ರಗತಿಪರ ಪಕ್ಷ’ವನ್ನು ಸ್ಥಾಪಿಸಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 

ಇದೀಗ ಮತ್ತೆ ಬಿಜೆಪಿಗೆ ಮರಳುತ್ತಿದ್ದಾರೆ. ಸೋಮವಾರ ಬೆಳಗ್ಗೆ 9 ಗಂಟೆಗೆ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್‌ ಸೇರಿದಂತೆ ಇತರೆ ಮುಖಂಡರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. 

ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಜನಾರ್ದನ ರೆಡ್ಡಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಬಿಜೆಪಿ ವರಿಷ್ಠರು ಹಸಿರು ನಿಶಾನೆ ತೋರಿದ ಬಳಿಕ ಬಿಜೆಪಿಗೆ ಮರಳುತ್ತಿದ್ದಾರೆ. 

ಯಾವುದೇ ಷರತ್ತುಗಳಿಲ್ಲದೆ, ಪಕ್ಷದ ನಾಯಕತ್ವ ಮತ್ತು ಸಿದ್ಧಾಂತಕ್ಕೆ ಬದ್ಧವಾಗಿ ಪಕ್ಷ ಸೇಪರ್ಡೆಗೆ ಸಮ್ಮತಿಸಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ, ಬಿಜೆಪಿಗೆ ಸೇರುವ ಸಂಬಂಧ ಭಾನುವಾರ ‘ಪಾರಿಜಾತ’ ನಿವಾಸದಲ್ಲಿ ತಮ್ಮ ಬೆಂಬಲಿಗರೊಂದಿಗೆ ಚರ್ಚೆ ನಡೆಸಿದರು. 

ತಮ್ಮ ನಿಲುವಿನ ಬಗ್ಗೆ ಬೆಂಬಲಿಗರ ಜೊತೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಬಿಜೆಪಿಗೆ ಸೇರ್ಪಡೆಯಾಗಲು ನಿರ್ಧರಿಸಿದರು. ಅಲ್ಲದೇ, ಸಭೆಯಲ್ಲಿ ಬಿಜೆಪಿ ಜತೆ ಕೆಆರ್‌ಪಿಪಿ ಪಕ್ಷದ ವಿಲೀನಕ್ಕೆ ಸರ್ವಸಮ್ಮತ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ. 

ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರು.‌ ಇದೀಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಯಾಗಲು ತೀರ್ಮಾನಿಸಿದ್ದಾರೆ.‌

ಬೆಂಬಲಿಗರ ಜತೆ ಚರ್ಚಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜನಾರ್ದನ ರೆಡ್ಡಿ, ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಯಾವುದೇ ವಿಚಾರ ಇಲ್ಲ. 

ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದು, ಪಕ್ಷಕ್ಕೆ ದುಡಿಯುತ್ತೇನೆ ಎಂದರು. ಬಿಜೆಪಿಯ ಹಿರಿಯ ಮುಖಂಡ ಎಲ್‌.ಕೆ.ಅಡ್ವಾಣಿ ಜೊತೆ ರಥಯಾತ್ರೆಯಲ್ಲಿ ಭಾಗವಹಿಸಿದ್ದೆ. 

ಹಲವು ವರ್ಷಗಳ ಕಾಲ ಬಿಜೆಪಿಯಲ್ಲಿದ್ದು, ಮಧ್ಯದಲ್ಲಿ ನಡೆದಿರುವ ಎಲ್ಲಾ ಘಟನೆಗಳು ಗೊತ್ತಿದೆ. ಉಳಿದಿದ್ದು ಸೋಮವಾರ ಮಾತಾಡುತ್ತೇನೆ. 

ಬಿಜೆಪಿಗೆ ಸೇರ್ಪಡೆಗೆ ಮೊದಲು ನನ್ನ ಕಷ್ಟದಲ್ಲಿ ಜೊತೆಗಿದ್ದ ಎಲ್ಲಾ ಕಾರ್ಯಕರ್ತರು, ಮುಖಂಡರ ಜೊತೆಗೆ ಚರ್ಚೆ ಮಾಡಿದ್ದೇನೆ. ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಕೊಪ್ಪಳ, ಕಲಬುರಗಿ , ಕೊಪ್ಪಳ ಜಿಲ್ಲೆಯಲ್ಲಿ ನನ್ನ ಬೆಂಬಲಿಸಿದವರಿಂದ ಅಭಿಪ್ರಾಯ ಪಡೆಯುವ ಕೆಲಸ ಮಾಡಿದ್ದೇನೆ. 

ಎಲ್ಲರೂ ಮುಕ್ತ ಕಂಠದಿಂದ ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಂಬಲವಾಗಿ ನಿಂತು ಒಪ್ಪಿಗೆ ಸೂಚಿಸಿದ್ದಾರೆ. ಸೋಮವಾರ ಬೆಳಿಗ್ಗೆ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದು ಹೇಳಿದರು.

ಭಾರತ ವಿಶ್ವಗುರು ಆಗುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಮಾಡಿದ್ದಾರೆ. ಇದು 10 ವರ್ಷಗಳಲ್ಲಿ ಭಾರತಕ್ಕೆ ಬಂದಿರುವ ಖ್ಯಾತಿಯಾಗಿದೆ. 

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂಬುದು ದೇಶದ ಜನರ ಅಭಿಪ್ರಾಯವಾಗಿದೆ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ ಎಂದು ತಿಳಿಸಿದರು. 

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆನೆಗುಂದಿ ಉತ್ಸವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಗಮಿಸಿದ್ದರು. ಅದೇ ವೇಳೆ ರಾಜ್ಯಸಭೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿತ್ತು. ಈಗಾಗಲೇ ಆ ವಿಚಾರವಾಗಿ ಹೇಳಿದ್ದೇನೆ. ಆತ್ಮಸಾಕ್ಷಿಯ ಮತ ಚಲಾಯಿಸಿದ್ದೇನೆ ಎಂದಷ್ಟೇ ಹೇಳಿದರು.

ರೆಡ್ಡಿ ಬಿಜೆಪಿ ಸೇರ್ಪಡೆಯಿಂದ ಆನೆಬಲ: ಸೋಮಶೇಖರ ರೆಡ್ಡಿ

ಬಳ್ಳಾರಿ: ನನ್ನ ಸಹೋದರ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಯಾಗುತ್ತಿರುವುದರಿಂದ ಸಂತಸವಾಗಿದೆ. ರೆಡ್ಡಿ ವಾಪಸ್‌ ನಮ್ಮ ಪಕ್ಷಕ್ಕೆ ಬರುವುದರಿಂದ ಹೆಚ್ಚಿನ ಶಕ್ತಿ ಬರಲಿದೆ ಎಂದು ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ತಿಳಿಸಿದರು. 

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಜನಾರ್ದನ ರೆಡ್ಡಿ ಬಿಜೆಪಿಯಿಂದ ದೂರ ಸರಿದಿದ್ದರಿಂದ ವಿರೋಧಿಗಳಿಗೆ ಅವಕಾಶವಾಯಿತು. ಯಾವುದೋ ಕೆಟ್ಟಗಳಿಗೆಯಲ್ಲಿ ಸ್ವಂತ ಪಕ್ಷ ಕಟ್ಟಿದ್ದರಿಂದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಸೋಲಾಯಿತು. 

ಇದೀಗ ಮತ್ತೆ ಜನಾರ್ದನ ರೆಡ್ಡಿ ಪಕ್ಷಕ್ಕೆ ಬರುತ್ತಿರುವುದು ನಮಗೆಲ್ಲ ಆನೆಬಲ ಬಂದಂತಾಗಿದೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭಾರೀ ಮತಗಳ ಅಂತರದಿಂದ ಗೆಲ್ಲುವುದು ಸಹಜ. 

ಇಡೀ ದೇಶದಲ್ಲಿ ಮೋದಿ ಅವರ ಅಲೆಯಿದೆ. ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ದೇಶದ ಪ್ರತಿಯೊಬ್ಬ ನಾಗರಿಕರು ಇಷ್ಟಪಡುತ್ತಿದ್ದಾರೆ ಎಂದು ಸೋಮಶೇಖರ ರೆಡ್ಡಿ ತಿಳಿಸಿದರು.

ಇದೇ ವೇಳೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ನಗರದಿಂದ ನನಗೆ ಟಿಕೆಟ್ ನೀಡುವುದು, ಬಿಡುವುದು ಪಕ್ಷಕ್ಕೆ ಬಿಟ್ಟದ್ದು. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ತಿಳಿಸಿದರು.