ಸಾರಾಂಶ
ಮಂಜುನಾಥ ಕೆ.ಎಂ.
ಬಳ್ಳಾರಿ: ಪ್ರಾಣ ಸ್ನೇಹಿತರು ಎಂದೇ ಗುರುತಿಸಿಕೊಂಡಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಹಾಗೂ ಶಾಸಕ ಜನಾರ್ದನ ರೆಡ್ಡಿ ನಡುವಿನ ಮುಸುಕಿನ ಗುದ್ದಾಟ ಕೊನೆಗೂ ಸ್ಫೋಟಗೊಂಡಿದೆ. ರೆಡ್ಡಿ ವಿರುದ್ಧ ಶ್ರೀರಾಮುಲು ಬಹಿರಂಗವಾಗಿಯೇ ಧ್ವನಿ ಎತ್ತಿರುವುದು ಇಬ್ಬರ ನಡುವಿನ ಶೀತಲ ಸಮರ ಮುಂದುವರಿಯುವ ಲಕ್ಷಣಗಳು ದಟ್ಟವಾಗಿದೆ.ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಜರುಗಿದ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲಿಗೆ ಶ್ರೀರಾಮುಲು ಕಾರಣ ಎಂಬ ಆರೋಪ, ರೆಡ್ಡಿ ಮತ್ತು ಶ್ರೀರಾಮುಲು ನಡುವಿನ ಭಿನ್ನಾಭಿಪ್ರಾಯ ಮತ್ತಷ್ಟು ಕಂದಕ ಸೃಷ್ಟಿಸಿದಂತಾಗಿದೆ.
ರಾಜಕೀಯೇತರ ಕಾರಣಗಳಿಂದಾಗಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ನಡುವೆ ಸಾಕಷ್ಟು ಭಿನ್ನಾಭಿಪ್ರಾಯವಿತ್ತು. ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಆರೋಪದಡಿ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದ ಬಳಿಕದ ಕೆಲವು ವ್ಯವಹಾರಿಕ ಬೆಳವಣಿಗೆಗಳು ಇಬ್ಬರ ನಡುವೆ ಭಿನ್ನಾಭಿಪ್ರಾಯ ಮತ್ತಷ್ಟು ಗಟ್ಟಿಗೊಂಡಿತ್ತಾದರೂ ತಮ್ಮ ನಡುವಿನ ಸ್ನೇಹ ಸ್ಥಿರವಾಗಿಯೇ ಇದೆ ಎಂಬಂತೆಯೇ ಈ ಇಬ್ಬರು ತೋರ್ಪಡಿಸಿಕೊಳ್ಳುತ್ತಿದ್ದರು.ಸಂಡೂರು ಉಪ ಚುನಾವಣೆ: ಸಂಡೂರು ಉಪ ಚುನಾವಣೆ ಘೋಷಣೆ ವೇಳೆಯಲ್ಲಿಯೇ ಜನಾರ್ದನ ರೆಡ್ಡಿ ಬಳ್ಳಾರಿಗೆ ಬರಲು ನ್ಯಾಯಾಲಯ ಅನುಮತಿ ನೀಡುತ್ತಿದ್ದಂತೆಯೇ ರೆಡ್ಡಿ ಚುನಾವಣೆ ಉಸ್ತುವಾರಿ ಹೊತ್ತು ಸಂಡೂರಿನಲ್ಲಿಯೇ ವಾಸ್ತವ್ಯ ಹೂಡಿದರು. ರೆಡ್ಡಿ ನೇತೃತ್ವದಲ್ಲಿಯೇ ಚುನಾವಣೆ ನಡೆದಿದ್ದು ಶ್ರೀರಾಮುಲು ಅವರನ್ನು ಕಡೆಗಣಿಸಲಾಗಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿಯೇ ಕೇಳಿ ಬಂದಿದ್ದವು.
ಚುನಾವಣೆ ವೇಳೆ ಅಸಮಾಧಾನ ಸ್ಫೋಟದಿಂದ ಪಕ್ಷಕ್ಕೆ ಮುಜುಗರವಾಗುತ್ತದೆ ಎಂಬ ಕಾರಣಕ್ಕೆ ಶ್ರೀರಾಮುಲು ಬೆಂಬಲಿಗರು ಮೌನ ವಹಿಸಿದ್ದರು. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿನ ಬಳಿಕ ರೆಡ್ಡಿ-ರಾಮುಲು ನಡುವಿನ ಮುಸುಕಿನ ಗುದ್ದಾಟ ಸ್ಫೋಟಗೊಂಡಿದೆ. ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರ್‌ವಾಲ್ ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ನೀವೂ ಕಾರಣ ಎಂದು ಬೊಟ್ಟು ಮಾಡಿ ತೋರಿಸಿರುವುದು ಶ್ರೀರಾಮುಲು ಅವರಿಗೆ ಜನಾರ್ದನ ರೆಡ್ಡಿ ಮೇಲಿನ ಸಿಟ್ಟು ರಟ್ಟಾಗುವಂತೆ ಮಾಡಿದೆ.ಶ್ರೀರಾಮುಲು ವಿರುದ್ಧ ದೂರು: ಜನಾರ್ದನ ರೆಡ್ಡಿಯೇ ನನ್ನ ವಿರುದ್ಧ ರಾಧಾ ಮೋಹನ್ ಅಗರ್‌ವಾಲ್ ಅವರಿಗೆ ದೂರು ನೀಡಿದ್ದಾರೆ ಎಂಬುದು ಶ್ರೀರಾಮುಲು ಆರೋಪವಾಗಿದೆ. ಈ ಸಂಬಂಧ ಶ್ರೀರಾಮುಲು ಮಾಧ್ಯಮಗಳ ಮುಂದೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ರೆಡ್ಡಿ ಹಾಗೂ ಶ್ರೀರಾಮುಲು ನಡುವಿನ ಗುದ್ದಾಟದ ಬಹಿರಂಗ ಸ್ಫೋಟ ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಜೊತೆಗೂಡಿ ಕೈ ಕೋಟೆಯನ್ನು ಕುಟ್ಟಿ ಹಾಕಿದ್ದರು.ಶ್ರೀರಾಮುಲು ವರ್ಚಸ್ಸು, ಜನಾರ್ದನ ರೆಡ್ಡಿ ರಾಜಕೀಯ ತಂತ್ರಗಾರಿಕೆ ಜಿಲ್ಲೆಯಲ್ಲಿ ಕಮಲ ಅರಳಲು ಕಾರಣವಾಗಿತ್ತು. 1999ರ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಹಾಗೂ ಸುಷ್ಮಾ ಸ್ವರಾಜ್ ಸ್ಪರ್ಧಿಸಿದ ಬಳಿಕ ರೆಡ್ಡಿ-ರಾಮುಲು ಜೊತೆಗೂಡಿ ಇಡೀ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿ ಸೈ ಎನಿಸಿಕೊಂಡಿದ್ದರು. ಪರಿಣಾಮವಾಗಿಯೇ ಪಕ್ಷ ಗುರುತಿಸಿ, ಈ ಇಬ್ಬರಿಗೂ ರಾಜಕೀಯ ಅಧಿಕಾರದ ಸ್ಥಾನಮಾನ ನೀಡಿತ್ತು. ರೆಡ್ಡಿ ಅಕ್ರಮ ಗಣಿಗಾರಿಕೆ ಆರೋಪದಡಿ ಜೈಲು ಪಾಲಾದ ಬಳಿಕ ಅನೇಕ ವ್ಯವಹಾರಿಕ ಭಿನ್ನಾಭಿಪ್ರಾಯಗಳು ಬಂದು ಇಬ್ಬರ ನಡುವಿನ ಸ್ನೇಹ ಮುಕ್ಕಾಯಿತು. ಸಂಡೂರು ಉಪ ಚುನಾವಣೆಯ ಜವಾಬ್ದಾರಿ ರೆಡ್ಡಿ ವಹಿಸಿಕೊಂಡಿದ್ದು ಶ್ರೀರಾಮುಲು ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಗುಮಾನಿ ಶುರುಗೊಂಡಿತಲ್ಲದೆ, ಉಪ ಚುನಾವಣೆಯ ಫಲಿತಾಂಶ ಇಬ್ಬರ ನಡುವಿನ ಅಸಮಾಧಾನ ಕೊನೆಗೂ ಸ್ಫೋಟಗೊಂಡಂತಾಗಿದೆ.
ರೆಡ್ಡಿ- ಶ್ರೀರಾಮುಲು ಬಣಗಳು: ಜನಾರ್ದನ ರೆಡ್ಡಿ, ಶ್ರೀರಾಮುಲು ನಡುವಿನ ಮುನಿಸಿನಿಂದಾಗಿ ಜಿಲ್ಲೆಯಲ್ಲಿ ಎರಡು ಬಿಜೆಪಿ ಬಣಗಳ ಸೃಷ್ಟಿಯಾಗಿವೆ. ಈ ಹಿಂದೆ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಹುಟ್ಟು ಹಾಕಿದ ಬಳಿಕ ಬಿಜೆಪಿಯಲ್ಲಿದ್ದ ಅನೇಕ ನಾಯಕರು ಜನಾರ್ದನ ರೆಡ್ಡಿ ಅವರ ಪಕ್ಷದ ಜೊತೆ ಗುರುತಿಸಿಕೊಂಡರು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ರೆಡ್ಡಿ ಮತ್ತೆ ಬಿಜೆಪಿಗೆ ಸೇರಿದರು. ರೆಡ್ಡಿ ಬಿಜೆಪಿಗೆ ಸೇರಿಕೊಂಡರೂ ಬೆಂಬಲಿಗರು ಕೆಆರ್‌ಪಿಪಿ ಗುಂಗಿನಿಂದ ಹೊರ ಬಂದಿಲ್ಲ ಎಂಬುದು ಶ್ರೀರಾಮುಲು ಬೆಂಬಲಿಗರ ಆರೋಪ. ಈಚೆಗೆ ಬಿಜೆಪಿ ಜಿಲ್ಲಾಧ್ಯಕ್ಷ ನೇಮಕಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಜರುಗಿದ ಸಭೆಯಲ್ಲಿ ಒಮ್ಮತ ಕಂಡು ಬರದೇ ರೆಡ್ಡಿ-ಶ್ರೀರಾಮುಲು ಬೆಂಬಲಿಗರ ಹೆಸರುಗಳು ಸಭೆಯಲ್ಲಿ ಚರ್ಚೆಯಾಗಿವೆ. ಕಮಲ ನಾಯಕರ ಮುಸುಕಿನ ಗುದ್ದಾಟದ ಸ್ಫೋಟ ಸಾಮಾನ್ಯ ಕಾರ್ಯಕರ್ತರು ಕಂಗಾಲಾಗುವಂತೆ ಮಾಡಿದೆ.ಜನಾರ್ದನ ರೆಡ್ಡಿ, ಶ್ರೀರಾಮುಲು ನಡುವಿನ ಮುನಿಸಿನ ಸ್ಫೋಟ ಕುರಿತು ಪಕ್ಷದ ರಾಜ್ಯ ನಾಯಕರ ಜೊತೆ ಚರ್ಚಿಸಲಾಗುವುದು. ಕೇಂದ್ರ, ರಾಜ್ಯ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಪಕ್ಷದ ಹೈಕಮಾಂಡ್ ನಾಯಕರೇ ಸೂಕ್ತ ನಿಲುವು ತೆಗೆದುಕೊಳ್ಳುತ್ತಾರೆ ಎನ್ನುತ್ತಾರೆ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ.