ಸಾರಾಂಶ
ಬಳ್ಳಾರಿ: ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುವವರು ಕ್ಷೇತ್ರದಲ್ಲಿನ ಕಬ್ಬಿಣ ಮತ್ತು ಮ್ಯಾಂಗನೀಸ್ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕೆ.ಸಿ. ಕೊಂಡಯ್ಯ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಹೆಸರು ಹೇಳದೆಯೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.ಈ ಹಿಂದೆ 2004ರಿಂದ 2008ರ ವರೆಗೆ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಮಾಡಿದವರೇ ಇಂದು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ವ್ಯಕ್ತಿಗೆ ಸಂಡೂರು ಅಭಿವೃದ್ಧಿಯಾಗಬೇಕು ಎಂಬ ಯಾವುದೇ ಇಚ್ಛೆಯಿಲ್ಲ. ಬದಲಿಗೆ, ಸಂಡೂರಿನ ಗಣಿಗಳ ಮೇಲೆ ಕಣ್ಣು ಹಾಯಿಸಿದ್ದಾರೆ. ಬಿಜೆಪಿ ಗೆದ್ದರೆ ಗಣಿಗಾರಿಕೆಯ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಎಂಬುದು ಅವರ ಉದ್ದೇಶವಾಗಿದೆ. ಸಂಡೂರು ಕ್ಷೇತ್ರದ ಮತದಾರರು ಎಚ್ಚೆತ್ತುಕೊಳ್ಳಬೇಕು. ಯಾವುದೇ ಗಲಾಟೆ, ದೌರ್ಜನ್ಯಗಳು ಮತ್ತು ಅಕ್ರಮಗಳು ಪುನರಾವರ್ತನೆ ಆಗದಂತೆ ಸ್ಥಳೀಯರು ಮುನ್ನೆಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಹೊರಗಿನ ಅಭ್ಯರ್ಥಿಗಳನ್ನು ಬೆಂಬಲಿಸಬಾರದು ಎಂದು ಮನವಿ ಮಾಡಿದರು.
ಈ. ತುಕಾರಾಂ ಅವರು ಕ್ಷೇತ್ರದ ಪ್ರಗತಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ನಾಲ್ಕು ಬಾರಿಯ ಅವಧಿಯಲ್ಲಿ ಹಳ್ಳಿಹಳ್ಳಿಗೆ ತಿರುಗಾಟ ನಡೆಸಿ, ಸ್ಥಳೀಯ ಸೌಕರ್ಯಗಳಿಗೆ ಗಮನ ನೀಡಿದ್ದಾರೆ. ಕ್ಷೇತ್ರದ ಪ್ರಗತಿಗೆ ಆದ್ಯತೆ ನೀಡಿದ್ದಾರೆ. ಸಂಸದರು ಹಾಗೂ ಶಾಸಕರು ಒಂದೇ ಪಕ್ಷದವರಾದಲ್ಲಿ ಸಂಡೂರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ತಂದು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದರು.ಸಂಡೂರಿನಲ್ಲಿ ಈ ಹಿಂದಿನಿಂದಲೂ ಉತ್ತಮ ವಾತಾವರಣವಿದೆ. ಈ ಹಿಂದೆ ಎಂ.ವೈ. ಘೋರ್ಪಡೆ ಅವರಿಂದ ಸಾಕಷ್ಟು ಅಭಿವೃದ್ಧಿ ಸಾಧ್ಯವಾಯಿತು. ಬಳಿಕ ಈ. ತುಕಾರಾಂ ಸಹ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಿದರು. ಜಿಲ್ಲಾ ಖನಿಜ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಪ್ರಗತಿದಾಯಕ ಕೆಲಸಗಳನ್ನು ತುಕಾರಾಂ ಮಾಡಿದ್ದಾರೆ. ಸಂಸದ ಹಾಗೂ ವಿಧಾನಪರಿಷತ್ ಸದಸ್ಯನಾಗಿ ಸಂಡೂರು ಕ್ಷೇತ್ರದ ಪ್ರಗತಿಗೆ ನಾನು ಸಹ ಕೊಡುಗೆ ನೀಡಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಾ ಅವರ ಪರ ಪ್ರಚಾರ ಕೈಗೊಳ್ಳಲು ಸಂಡೂರಿಗೆ ತೆರಳುವೆ. ನನ್ನದೇ ಆದ ಜನ ಸಂಪರ್ಕವಿದ್ದು, ಎಲ್ಲರ ಜತೆ ಚರ್ಚಿಸಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿಕೊಳ್ಳುವೆ ಎಂದು ಕೆ.ಸಿ. ಕೊಂಡಯ್ಯ ತಿಳಿಸಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಖಚಿತ. ಸಂಡೂರಿನ ಮತದಾರರು ಅತ್ಯಂತ ಪ್ರಜ್ಞಾವಂತರಿದ್ದಾರೆ. ಯಾರನ್ನು ಗೆಲ್ಲಿಸಿದರೆ ಕ್ಷೇತ್ರದ ಹಿತ ಕಾಯುತ್ತಾರೆ ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿಯೇ ಸತತ ನಾಲ್ಕು ಬಾರಿ ಈ. ತುಕಾರಾಂ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಸಂಡೂರು ರಾಜಕೀಯ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಚುನಾಯಿಸಿಕೊಂಡು ಬಂದಿದ್ದಾರೆ ಎಂದರಲ್ಲದೆ, ಸಂಡೂರಿನಲ್ಲಿ ಕಾಂಗ್ರೆಸ್‌ನ ಗೆಲುವಿನ ಓಟ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪಕ್ಷದ ಮುಖಂಡರಾದ ರಾಮ್‌ಪ್ರಸಾದ್, ವೆಂಕಟೇಶ್ ಹೆಗಡೆ, ವೆಂಕಟರಮಣ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))