ಕೆಲ ಬಾಲಕರು ಹಾಗೂ ಯುವಕರು ರೀಲ್ಸ್ ಮಾಡಲು ಹೋಗಿದ್ದ ವೇಳೆ ಆದ ಅವಘಡ ಎಂದು ಪೊಲೀಸ್ ಇಲಾಖೆ ಪ್ರಾಥಮಿಕ ವರದಿ ನೀಡಿದೆ.
ಮಂಜುನಾಥ ಕೆ.ಎಂ.
ಬಳ್ಳಾರಿ: ನಗರ ಹೊರವಲಯದ ಕಂಟೋನ್ಮೆಂಟ್ ಪ್ರದೇಶದ ಜಿ-ಸ್ಕ್ವೇರ್ ಲೇಔಟ್‌ನಲ್ಲಿ ಜ.23ರಂದು ಜರುಗಿದ ಜನಾರ್ದನ ರೆಡ್ಡಿ ಮಾಡೆಲ್ ಹೌಸ್ ಬೆಂಕಿ ಪ್ರಕರಣ ರಾಜಕೀಯ ದುರುದ್ದೇಶದಿಂದ ನಡೆದ ಘಟನೆ ಅಲ್ಲ; ಕೆಲ ಬಾಲಕರು ಹಾಗೂ ಯುವಕರು ರೀಲ್ಸ್ ಮಾಡಲು ಹೋಗಿದ್ದ ವೇಳೆ ಆದ ಅವಘಡ ಎಂದು ಪೊಲೀಸ್ ಇಲಾಖೆ ಪ್ರಾಥಮಿಕ ವರದಿ ನೀಡಿದೆ.ಪ್ರಕರಣದಲ್ಲಿ ಬಂಧಿಸಲಾಗಿದ್ದ ಎಂಟು ಆರೋಪಿಗಳ ವಿಚಾರಣೆ ವೇಳೆ ಮಾಡೆಲ್ ಹೌಸ್‌ಗೆ ಬೆಂಕಿ ಹತ್ತಿದ್ದು ಹೇಗೆ? ಬೆಂಕಿಗೆ ಯಾರಾದರೂ ಪ್ರೇರಣೆ ನೀಡಿದರೆ ಎಂಬಿತ್ಯಾದಿ ಮಾಹಿತಿಯನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಸಿಕ್ಕ ಸಿಗರೇಟುಗಳು, ಬೆಂಕಿ ಪೊಟ್ಟಣ ಮತ್ತಿತರ ವಸ್ತುಗಳ ಆಧರಿಸಿ ಹಾಗೂ ವಿಚಾರಣೆ ವೇಳೆ ಕಂಡು ಬಂದ ಮಾಹಿತಿಯನ್ವಯ ಇದೊಂದು ಆಕಸ್ಮಿಕವಾದ ಘಟನೆ ಎಂದು ತನಿಖಾಧಿಕಾರಿಗಳು ಗೃಹ ಇಲಾಖೆಗೆ ವರದಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತನಿಖೆಯನ್ನು ಮುಂದುವರಿಸಿರುವುದಾಗಿ ಹೇಳಿರುವ ಪೊಲೀಸರು, ಘಟನೆಯ ಬಗ್ಗೆ ಸ್ಪಷ್ಟ ಚಿತ್ರಣ ಗೊತ್ತಾಗಿದೆ. ಆರೋಪಿಗಳ ವಿಚಾರಣೆ ಬಳಿಕ ಆಕಸ್ಮಿಕ ಘಟನೆ ಎಂದೂ ಸಹ ತಿಳಿದು ಬಂದಿದೆ. ಆದಾಗ್ಯೂ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಪೊಲೀಸ್ ಇಲಾಖೆಯ ಪೂರ್ಣ ತನಿಖೆಯ ಬಳಿಕ ಘಟನೆ ಕುರಿತಾಗಿ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದ ನಾನಾ ಊಹಾಪೋಹಗಳಿಗೆ ತೆರೆಬಿದ್ದಂತಾಗಿದೆ.ಬ್ಯಾನರ್ ಗಲಾಟೆಯಿಂದ ಮಹತ್ವ: ನಗರದ ಸಿರುಗುಪ್ಪ ರಸ್ತೆಯಲ್ಲಿರುವ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ನಿವಾಸದ ಎದುರು ಜನವರಿ 1 ರಂದು ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಳವಡಿಸಲಾಗಿದ್ದ ಬ್ಯಾನರ್ ವಿಚಾರಕ್ಕೆ ಸಂಬಂಧಿಸಿದಂತೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರು ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ವಾಗ್ವಾದ ನಡೆದು ಕೊನೆಗೆ ಗಲಭೆ, ಶೂಟೌಟ್, ಓರ್ವ ಯುವಕನ ಕೊಲೆಯಲ್ಲಿ ಅಂತ್ಯಗೊಂಡಿತು. ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು.
ಇದಾದ ಕೆಲವೇ ದಿನಗಳಲ್ಲಿ ಈ ಮಾಡೆಲ್ ಹೌಸ್‌ಗೆ ಬೆಂಕಿ ಬಿತ್ತು. ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರೇ ಬೆಂಕಿ ಹಚ್ಚಿದ್ದಾರೆ ಎಂದು ಜನಾರ್ದನರೆಡ್ಡಿ, ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದ್ದರಿಂದ ಈ ಪ್ರಕರಣದ ಗಂಭೀರತೆ ಹೆಚ್ಚಿತ್ತು. ಆದರೆ, ಘಟನೆ ಕುರಿತಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ನೀಡಿರುವ ಪ್ರಾಥಮಿಕ ವರದಿಯಲ್ಲಿ ರೆಡ್ಡಿ ಮನೆಗೆ ಬಿದ್ದ ಬೆಂಕಿ ರಾಜಕೀಯ ಪ್ರೇರಿತ ಅಲ್ಲ; ರೀಲ್ಸ್ ಮಾಡಲು ತೆರಳಿದ್ದವರಿಂದಾದ ಅವಘಡ .ಬೆಂಕಿಗೆ ಆಹುತಿಯಾದ ಮನೆ ಅನೇಕ ವರ್ಷಗಳಿಂದ ಪಾಳು ಬಿದ್ದಿತ್ತು. ಮನೆಗೆ ಯಾವುದೇ ಭದ್ರತೆ ಇರಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.ಜನಾರ್ದನ ರೆಡ್ಡಿ ನಿವಾಸಕ್ಕೆ ಬೆಂಕಿ ಬಿದ್ದ ಪ್ರಕರಣ ರೀಲ್ಸ್ ಮಾಡಲು ಹೋಗಿದ್ದ ಯುವಕರು ಮಾಡಿರುವ ಕೃತ್ಯ ಎಂದು ತಿಳಿದು ಬಂದಿದೆ. ಈ ಸಂಬಂಧ ನಮಗೆ ಸಾಕ್ಷ್ಯಗಳು ಸಿಕ್ಕಿವೆ. ಉದ್ದೇಶಪೂರ್ವಕವಾಗಿಯೇ ಹಚ್ಚಿದ ಬೆಂಕಿಯಲ್ಲ. ಆಡ ಆಡುತ್ತಲೇ ಬೆಂಕಿ ಹಚ್ಚಿದ್ದಾರೆ. ಘಟನಾ ಸ್ಥಳದಲ್ಲಿ ಸಿಗರೇಟು, ಬೆಂಕಿಪೊಟ್ಟಣ ಸಾಕಷ್ಟು ಬಿದ್ದಿರುವುದು ಕಂಡು ಬಂದಿದೆ. ಆದಾಗ್ಯೂ ಘಟನೆ ಕುರಿತಾಗಿ ಸ್ಥಳದಲ್ಲಿ ಸಿಕ್ಕಿರುವ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ ತಂಡ ಸಂಗ್ರಹಿಸಿದೆ. ತನಿಖೆ ಮುಂದುವರಿದಿದೆ ಎನ್ನುತ್ತಾರೆ ಬಳ್ಳಾರಿ ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್.
5ಬಿಆರ್‌ವೈ1ಘಟನೆ ನಡೆದಿರುವ ಗಾಲಿ ಜನಾರ್ದನ ರೆಡ್ಡಿ ನಿವಾಸಕ್ಕೆ ಎಸ್ಪಿ ಸುಮನ್ ಡಿ.ಪೆನ್ನೇಕರ್ ಹಾಗೂ ಎಎಸ್ಪಿ ರವಿಕುಮಾರ್ ಭೇಟಿ ನೀಡಿದ್ದರು. (ಸಂಗ್ರಹ ಚಿತ್ರ)