ಸಾರಾಂಶ
ಫಿಶ್ ಮಾರ್ಕೆಟ್ ಗಿಂತ ಕಡೆಯಾದ ನಗರಸಭೆ ವಿಶೇಷ ಅಧಿವೇಶನ । ಅಜೆಂಡಾ ಬಿಟ್ಟು ಉಳಿದೆಲ್ಲ ಚರ್ಚೆ। ಮತ್ತೆ ಸಭೆ ಮುಂದೂಡಿದ ಅಧ್ಯಕ್ಷೆ ಸುಮಿತಾಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಒಕ್ಕೂಟ ಮಾದರಿ ಆಡಳಿತ ಚಾಲ್ತಿಯಲ್ಲಿರುವ ಚಿತ್ರದುರ್ಗ ನಗರಸಭೆಯಲ್ಲಿ ಸೋಮವಾರ ನಡೆದ ವಿಶೇಷ ಅಧಿವೇಶನ ಜನಾಶಯಗಳ ದಿಕ್ಕಾಪಾಲು ಮಾಡಿದ ಸಾಕ್ಷಾತ್ ದರ್ಶನಕ್ಕೆ ಸಾಕ್ಷಿಯಾಯಿತು.ಫಿಶ್ ಮಾರ್ಕೆಟ್ ನಲ್ಲಿರುವ ಸಹಜ ಕಲರವ ಮೀರಿದ ಗದ್ದಲ ಕಂಡು ಬಂತು. ಅಜೆಂಡಾ ಬಿಟ್ಟು ಉಳಿದೆಲ್ಲ ಚರ್ಚೆಗೆ ಸಭೆ ಅವಕಾಶ ಮಾಡಿಕೊಟ್ಟಿತ್ತು. ಮುಕ್ಕಾಲು ತಾಸು ತಡವಾಗಿ ಆರಂಭವಾದ ಸಭೆ ಬರೋಬ್ಬರಿ ಮುಕ್ಕಾಲು ತಾಸಿಗೆ ಮಂಗಳ ಹಾಡಿಕೊಂಡಿತು. ಅಜೆಂಡಾದ ಯಾವ ವಿಷಯದ ಬಗ್ಗೆ ಚರ್ಚಿಸಲು ಮುಂದಾಗದೆ ಅಧ್ಯಕ್ಷೆ ಬಿ.ಎನ್.ಸುಮಿತ ಮುಂದೂಡುವ ತೀರ್ಮಾನ ಕೈಗೊಂಡು ಸಭೆಯಿಂದ ಹೊರ ನಡೆದರು. ಉಪಾಧ್ಯಕ್ಷೆ ಶ್ರೀದೇವಿ ಸದಸ್ಯರ ನಡುವೆ ಕುಳಿತು ತಮ್ಮ ಬಂಡಾಯದ ಬಾವುಟ ಹಾರಿಸಿದರು.
ಚಿತ್ರದುರ್ಗ ನಗರದ ಚಳ್ಳಕೆರೆ ವೃತ್ತದಿಂದ ಕನಕ ವೃತ್ತದವರೆಗಿನ ಒತ್ತುವರಿ ತೆರವು, ನಗರದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಡಿವೈಡರ್ ತೆರವು ಗೊಳಿಸುವ ಹಾಗೂ ಗಾಯತ್ರಿ ಕಲ್ಯಾಣ ಮಂಟಪದಿಂದ ಎಚ್‌ಎಚ್ 4 ರವರೆಗೆ ನಿರ್ಮಾಣಗೊಂಡಿರುವ ರಸ್ತೆ ಸೇರಿ ಮೂರು ವಿಷಯಗಳ ಅಜೆಂಡಾವನ್ನು ವಿಶೇಷ ಸಭೆಗಯಲ್ಲಿ ಚರ್ಚಿಸಲು ಸಿದ್ದಪಡಿಸಲಾಗಿತ್ತು.ಸಭೆಯ ಆರಂಭದಲ್ಲಿ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ಬೀದಿ ಬದಿ ವ್ಯಾಪಾರಿಗಳಿಂದ ಕರ ವಸೂಲಿ ಮಾಡುತ್ತಿರುವ ವಿಷಯ ಪ್ರಸ್ತಾಪಿಸಿ ಅಜೆಂಡಾದ ವಿಷಯ ಚರ್ಚೆಯ ದಿಕ್ಕು ಬದಲಿಸಿದರು. ಜಿಲ್ಲಾಧಿಕಾರಿಗಳು ಕರ ವಸೂಲಿ ಮಾಡಬಾರದೆಂದು ಹೇಳಿದ್ದರೂ ಅವರ ನಿರ್ದೇಶನ ಪಾಲನೆ ಮಾಡಿಲ್ಲ. ಹಳ್ಳಿಗಳಿಂದ ಬಂದ ಬಡ ರೈತರು, ಕಾರ್ಮಿಕರಿಂದ 10 ರಿಂದ 50 ರು. ವಸೂಲು ಮಾಡಲಾಗುತ್ತಿದೆ. ಟೆಂಡರ್ ಅವಧಿ ಮುಗಿದಿದ್ದರೂ ಇವರಿಗೇಕೆ ಅವಕಾಶ ಕೊಟ್ಟಿರಿ ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದರು ಎಂಬ ಕಾರಣಕ್ಕೆ ನಾಲ್ಕು ದಿನದ ಹಿಂದೆ ಮಳಿಗೆಗಳ ಹರಾಜು ರದ್ದು ಮಾಡಿದಿರಿ. ಆದರೆ ಅದೇ ಜಿಲ್ಲಾಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳಿಂದ ಕರ ವಸೂಲಿ ಮಾಡಬಾರದೆಂದು ಪತ್ರ ಬರೆದಿದ್ದರೂ ಏಕೆ ಪಾಲನೆ ಮಾಡಲಿಲ್ಲ ಎಂದು ಶ್ರೀದೇವಿ ಚಕ್ರವರ್ತಿ ಪೌರಾಯುಕ್ತೆಯ ತರಾಟೆಗೆ ತೆಗೆದುಕೊಂಡರು.ಬೀದಿ ಬದಿ ವ್ಯಾಪಾರಸ್ತರಿಂದ ಮೊದಲಿನಿಂದಲೂ ಕರ ವಸೂಲಿ ಮಾಡಲಾಗುತ್ತಿದೆ. ಇದೇನು ಹೊಸದಲ್ಲ. ಅವರು ನಗರಸಭೆಗೆ 50 ಲಕ್ಷ ರು. ಹಣ ಕಟ್ಟಿದ್ದಾರೆ. ಕರ ವಸೂಲಿಗೆ ತಡೆ ನೀಡಿದರೆ ಲೆಕ್ಕಾ ಹಾಕಿ ಅವರಿಗೆ ವಾಪಸ್ಸು ಹಣ ನೀಡಬೇಕಾಗುತ್ತದೆ ಎಂದು ಪೌರಾಯುಕ್ತೆ ರೇಣುಕಾ ಸಮಜಾಯಿಷಿ ನೀಡಿದರು. ನಗರಸಭೆ ಮಳಿಗೆಗೆಗಳ ಹರಾಜಿನಲ್ಲಿ ಲಕ್ಷಾಂತರ ರು. ಕಿಕ್ ಬ್ಯಾಕ್ ಪಡೆಯಲಾಗುತ್ತಿದೆ ಎಂದು ಉಪಾಧ್ಯಕ್ಷೆ ಶ್ರೀದೇವಿ ಹಾಗೂ ಸದಸ್ಯ ಭಾಸ್ಕರ ಆರೋಪಿಸಿದರು.
ಏತನ್ಮಧ್ಯೆ ಗುತ್ತಿಗೆದಾರರು ಬಾಕಿ ಹಣ ಪಾವತಿಗೆ ಆಗ್ರಹಿಸಿ ಕೆಡಿಪಿ ಸಭೆಯಲ್ಲಿ ಶಾಸಕ ವೀರೇಂದ್ರ ಪಪ್ಪಿ ಅವರಿಗೆ ಮನವಿ ಸಲ್ಲಿಸಿದ್ದಾರೆ. 3ನೇ ವ್ಯಕ್ತಿಯೋರ್ವರು ಅನುಮತಿ ನೀಡದ ಕಾರಣ ಹಣ ನೀಡಲಾಗುತ್ತಿಲ್ಲವೆಂದು ಪತ್ರದಲ್ಲಿ ತಿಳಿಸಲಾಗಿದೆ. ಅಧ್ಯಕ್ಷರ ಪತಿ ವಿಷವೂ ಅದರಲ್ಲಿದೆ ಎಂದರು.ಆ ಮೂರನೇ ವ್ಯಕ್ತಿ ಯಾರೆಂದು ಸದಸ್ಯ ಭಾಸ್ಕರ ಪ್ರಶ್ನಿಸಿದರು.
ಈ ಮಾತಿಗೆ ಕೆರಳಿ ಕೆಂಡಾ ಮಂಡಲವಾದ ಅಧ್ಯಕ್ಷೆ ಸುಮಿತಾ, ನಗರಸಭೆ ವ್ಯಾಪ್ತಿಯಲ್ಲಿ ಕೆಲಸ ಮಾಡಿದವರು ಕೆಡಿಪಿಗೆ ಏಕೆ ಹೋಗಬೇಕು, ನಾವು ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ನಮ್ಮ ಪತಿ ಆಡಳಿತದಲ್ಲಿ ಮೂಗು ತೂರಿಸಿಲ್ಲವೆಂದು ಅಬ್ಬರಿಸಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಇಡೀ ಸಭೆಯಲ್ಲಿ ಗೊಂದಲ ಮಾತಾವರಣ ಮೂಡಿತು. ಅರಚಾಟ, ಕಿರುಚಾಟಗಳೇ ಪ್ರಧಾನವಾಗಿ ಬಿಂಬಿತವಾದವು. ಅಂತಿಮವಾಗಿ ಪೌರಾಯುಕ್ತೆ ರೇಣುಕಾ ಯಾರೊಬ್ಬ ಗುತ್ತಿಗೆದಾರರು ನಮಗೆ ಬಾಕಿ ಬಗ್ಗೆ ಪತ್ರ ಕೊಟ್ಟಿಲ್ಲವೆಂದು ಸ್ಪಷ್ಟನೆ ನೀಡಿ ಚರ್ಚೆಗೆ ತೆರೆ ಎಳೆದರು.ಅಂತೂ ಸಭೆ ಸರಿದಾರಿಗೆ ಬಂತು, ಅಜೆಂಡಾ ವಿಷಯ ಚರ್ಚೆಗೆ ಬರುತ್ತೆ ಎಂದುಕೊಳ್ಳುವಾಗಲೇ ಮಾಜಿ ಅಧ್ಯಕ್ಷ ಗೊಪ್ಪೆ ಮಂಜುನಾಥ್, ರಸ್ತೆ ಅಗಲೀಕರಣದ ವಿಷಯ ಪ್ರಸ್ತಾಪಿಸಿದರು. ರಸ್ತೆ ಎಷ್ಟು ಅಗಲ ಮಾಡಬೇಕು, ಈ ಮೊದಲು ರಸ್ತೆ ಎಷ್ಟಿತ್ತು ಎಂಬ ಬಗ್ಗೆ ಸದಸ್ಯರಿಗೆ ಯಾವುದೇ ಬಗೆಯ ಮಾಹಿತಿ ನೀಡಲಾಗಿಲ್ಲ. ಮಾಹಿತಿ ಕೊಟ್ಟ ನಂತರವೇ ಸಭೆ ನಡೆಸೋಣವೆಂದರು.
ಮಧ್ಯ ಪ್ರವೇಶಿಸಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ನಸ್ರೂ ಪೌರಸಭೆಗಳ ಅಧಿನಿಯಮ ರೂಲ್ 28 ಉಲ್ಲಂಘನೆಯಾಗಿದೆ. ಅಜೆಂಡಾದಲ್ಲಿ ಯಾವುದೇ ವಿಷಯ ಚರ್ಚೆಗೆ ತರುವ ಮುನ್ನ ಸದಸ್ಯರಿಗೆ ಮಾಹಿತಿ ನೀಡಬೇಕು ಎಂದಿದೆ. ಇದವರೆಗೂ ರಸ್ತೆ ಅಗಲೀಕರಣ ಕುರಿತಂತೆ ಯಾವುದೇ ಮಾಹಿತಿ ನೀಡಲಾಗಿಲ್ಲ ಎಂದು ನೇರವಾಗಿ ಆಯುಕ್ತರ ಮೇಲೆ ವಾಗ್ದಾಳಿ ಮಾಡಿದರು.ಈ ಮಾತಿಗೆ ದನಿಗೂಡಿಸಿದ ಅಧ್ಯಕ್ಷೆ ಸುಮಿತಾ, ಈ ಬಗ್ಗೆ ನನಗೂ ಮಾಹಿತಿ ನೀಡಿಲ್ಲ. ಮಾಹಿತಿ ನೀಡಿದ ನಂತರವೇ ಸಭೆ ನಡೆಸೋಣವೆಂದು ಹೇಳಿ ಸಭೆ ಮುಂದೂಡಿ ವೇದಿಕೆಯಿಂದ ಮೇಲೆದ್ದರು.