ಸಾರಾಂಶ
ಅಧಿಕಾರಿಗಳಿಗೆ ಆಡಳಿತದ ಪಾಠ ಬೋಧಿಸಿದ ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್
ಕನ್ನಡಪ್ರಭ ವಾರ್ತೆ ಚಳ್ಳಕೆರೆಆಡಳಿತ ಹೇಗೆ ಜನಪರವಾಗಿರಬೇಕು, ಜನರ ಬೇಕು ಬೇಡಗಳಿಗೆ ಹೇಗೆ ಸ್ಪಂದಿಸಬೇಕು, ಗ್ರಾಮಾಭ್ಯುದಯ ಎಂದರೆ ಏನು ಎಂಬಿತ್ಯಾದಿ ಪ್ರಶ್ನೆಗಳಿಗೆ ಗುರುವಾರ ನಡೆ ಜನಸ್ಪಂದನ ಕಾರ್ಯಕ್ರಮ ದಿಕ್ಸೂಚಿಯಾಗಿತ್ತು. ತಾಲೂಕು ಮಟ್ಟದ ಅಧಿಕಾರಿಗಳಿಗೆ ಆಡಳಿತ ಪಾಠ ಬೋಧನೆ ಮಾಡುವುದರ ಮೂಲಕ ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ವೆಂಕಟೇಶ್ ಚುರುಕು ಮುಟ್ಟಿಸಿದರು.ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಜನಸ್ಪಂದನ ಸಭೆಯ ದಿಕ್ಸೂಚಿ ಮಾತುಗಳನ್ನಾಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜನರ ಆಶಯಗಳಿಗೆ ತಕ್ಕಂತೆ ಸರ್ಕಾರ ಹಲವಾರು ಯೋಜನೆ ರೂಪಿಸಿ ಅವುಗಳನ್ನು ಜಾರಿಗೊಳಿಸುವ ಮೂಲಕ ನೆರವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಯೋಜನೆಗಳು ಜನರನ್ನು ತಲುಪುವಲ್ಲಿ ಸಾಧ್ಯವಾಗದಿದ್ದರೆ ಸರ್ಕಾರದ ಮೂಲ ಉದ್ದೇಶ ಈಡೇರಿದಂತೆ ಆಗುವುದಿಲ್ಲ. ಈ ಸಂಬಂಧ ಅಧಿಕಾರಿಗಳಿಗೆ ಪದೇ ಪದೆ ಎಚ್ಚರಿಸುವ ಕೆಲಸ ಮಾಡುವುದಿಲ್ಲ. ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಿದರೆ ಒಳಿತು. ನಿಮ್ಮೊಟ್ಟಿಗೆ ಜಿಲ್ಲಾಡಳಿತ ದನಿಗೂಡಿಸಿ ಸಾರ್ವಜನಿಕರ ಹಲವಾರು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕಾರ್ಯ ಪ್ರಾಮಾಣಿಕವಾಗಿ ಮಾಡಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್ ಮಾತನಾಡಿ, ಗ್ರಾಮೀಣ ಭಾಗದ ಹಲವಾರು ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಜನಸಂಪರ್ಕ ಸಭೆ ಆಯೋಜಿಸುತ್ತಿರುವ ಜಿಲ್ಲಾಡಳಿತ ಜನರ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಲಿಖಿತ ಮೂಲಕ ನೀಡಿದ್ದಲ್ಲಿ ಅವುಗಳಿಗೆ ಪರಿಹಾರ ಹುಡುಕುವ ಕೆಲಸ ಮಾಡಲಾಗುವುದು. ಜಿಲ್ಲಾದ್ಯಂತ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಮಾನವ ದಿನಗಳ ನಿರ್ಮಿಸಿ ಕೊಡಲಾಗುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಸಭೆಯಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡುವಂತೆ ಮನವಿ ಮಾಡಲಾಗಿತ್ತು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆಗಮಿಸಿ ಜನಸ್ಪಂದನಾ ಕಾರ್ಯಕ್ರಮದ ಮೂಲ ಉದ್ದೇಶಗಳ ಬಗ್ಗೆ ತಿಳಿಸಿ ಜನರಲ್ಲಿ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಕ್ಷೇತ್ರದ ಶಾಸಕನಾಗಿ ಸಾಕಷ್ಟು ಜನಸಂಪರ್ಕ ಸಭೆ ನಡೆಸಿ ಜನರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಕಾರ್ಯ ಮಾಡಿದ್ದೇನೆ. ಕೆಲವೊಂದು ವಿಚಾರಗಳು ಜಿಲ್ಲಾಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕರು ಸರ್ಕಾರಕ್ಕೆ ನೀಡುವ ಮನವಿ ಹಾಗೂ ಇನ್ನಿತರೆ ವಿಚಾರಗಳ ಬಗ್ಗೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಜನಸ್ಪಂದನಾ ಸಭೆಯಿಂದ ಜನರ ಸಂಕಷ್ಟಗಳು ದೂರವಾಗಬೇಕು. ಕೇವಲ ಜನರನ್ನು ಸೇರಿಸಿ ಭಾಷಣ ಮಾಡದೆ ಸಭೆಯಲ್ಲಿ ವ್ಯಕ್ತವಾಗುವ ನಿವೇದನೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ಸಾರ್ವಜನಿಕರಲ್ಲಿ ಜನಸಂಪರ್ಕ ಮತ್ತು ಜನಸ್ಪಂದನದ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಕ್ಷೇತ್ರ ಮಟ್ಟದಲ್ಲಿ ನಡೆಯುವ ಜನಸಂಪರ್ಕ ಸಭೆಯ ವಿಷಯಗಳಿಗೆ ಪರಿಹಾರವನ್ನು ಸಕಾಲದಲ್ಲಿ ಒದಗಿಸಲು ತಾಲೂಕು ಮಟ್ಟದ ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ. ವಿಶೇಷ ಸಂದರ್ಭಗಳಲ್ಲಿ ಜಿಲ್ಲಾಡಳಿತದ ಸಹಕಾರ ಪಡೆಯಬೇಕಾಗುತ್ತದೆ. ಮುಂದಿನ ದಿನಗಳಲ್ಲೂ ಜನರ ಹಿತಕ್ಕಾಗಿ ಜನಸ್ಪಂದನಾ ಸಭೆ ಮುಂದುವರೆಯುವುದು ಎಂದು ತಿಳಿಸಿದರು. ಜನಸ್ಪಂದನ ಕಾರ್ಯಕ್ರಮದಲ್ಲಿ ಪರಶುರಾಮಪುರ ಹೋಬಳಿ ವ್ಯಾಪ್ತಿಯಲ್ಲಿ ಜಮೀನಿಗೆ ರಸ್ತೆ, ಮನೆ ನಿರ್ಮಾಣ, ಚೆಕ್‍ಡ್ಯಾಂ ನಿರ್ಮಾಣ, ಖಾತೆ ಬದಲಾವಣೆ, ಸ್ಮಶಾನ ನಿರ್ಮಾಣ, ಕಾಲುವೇಹಳ್ಳಿ ಗ್ರಾಮದ ಕುಡಿವ ನೀರಿನ ಸಮಸ್ಯೆ ಸೇರಿದಂತೆ ಹಲವಾರು ಮನವಿಗಳು ಸಲ್ಲಿಕೆಯಾದವು. ಈ ವೇಳೆ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಜಿಲ್ಲಾ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ತಹಸೀಲ್ದಾರ್ ರೇಹಾನ್‍ಪಾಷ, ಇಒ ಶಶಿಧರ, ಬಿಇಒ ಕೆ.ಎಸ್.ಸುರೇಶ್, ಕೃಷಿ ಅಧಿಕಾರಿ ಅಶೋಕ್, ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ, ಡಿವೈಎಸ್‌ಪಿ ರಾಜಣ್ಣ, ಪೌರಾಯುಕ್ತ ಸಿ.ಚಂದ್ರಪ್ಪ, ಎಇಇ ದಯಾನಂದ, ಎನ್.ಕಾವ್ಯ, ವಿಜಯಭಾಸ್ಕರ, ನಾಮಿನಿ ಸದಸ್ಯರಾದ ಅನ್ವರ್ ಮಾಸ್ಟರ್, ನೇತಾಜಿ ಪ್ರಸನ್ನ, ಬಡಗಿ ಪಾಪಣ್ಣ, ಭದ್ರಿ, ನಟರಾಜ್ ಉಪಸ್ಥಿತರಿದ್ದರು.