ಸಾರಾಂಶ
ಬೆಂಗಳೂರು : ‘ಜನರೊಂದಿಗೆ ಜನತಾದಳ’ ಹೆಸರಿನಲ್ಲಿ ಹಮ್ಮಿಕೊಂಡಿರುವ ರಾಜ್ಯ ಪ್ರವಾಸದ ಭಾಗವಾಗಿ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮಂಗಳವಾರದಿಂದ ಎರಡು ದಿನ ರಾಮನಗರ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಮಂಗಳವಾರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕುಡ್ಲೂರಿನ ಶಿಶಿರ್ ಹೋಮ್ ಸ್ಟೇ ಮತ್ತು ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 3ರಿಂದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ನಿಖಿಲ್ ಚಾಲನೆ ನೀಡಲಿದ್ದಾರೆ.
ಪಕ್ಷ ಸಂಘಟನೆಗಾಗಿ ಹಮ್ಮಿಕೊಂಡಿರುವ ರಾಜ್ಯ ಪ್ರವಾಸ ಹಾಗೂ ‘ಮಿಸ್ಡ್ ಕಾಲ್ʼ ಸದಸ್ಯತ್ವ ಅಭಿಯಾನ ತುಮಕೂರು ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ದಿನಗಳಲ್ಲಿ ಈಗಾಗಲೇ ಯಶಸ್ವಿಯಾಗಿ ನಡೆದಿದೆ.
ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭೆ ಕ್ಷೇತ್ರದಿಂದ ಆರಂಭವಾದ ರಾಜ್ಯ ಪ್ರವಾಸ ಹಾಗೂ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ನಿರೀಕ್ಷೆಗೂ ಮೀರಿದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದು, ನನ್ನ ರಾಜ್ಯ ಪ್ರವಾಸಕ್ಕೆ ಮತ್ತಷ್ಟು ಹುರುಪು ಬಂದಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೊಂಡಿದ್ದಾರೆ.
ಕನಿಷ್ಠ 50 ಲಕ್ಷ ಸದಸ್ಯತ್ವದ ಗುರಿ ಇಟ್ಟುಕೊಂಡು ರಾಜ್ಯ ಪ್ರವಾಸ ಆರಂಭಿಸಲಾಗಿದೆ. ಎಲ್ಲ ಜಿಲ್ಲೆ, ತಾಲೂಕುಗಳಿಗೆ ಭೇಟಿ ನೀಡಲಾಗುವುದು. ‘ಪಕ್ಷ ಸಂಘಟನೆ ಮತ್ತು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ನಿಮ್ಮೆಲ್ಲರ ದುಡಿಮೆಗೆ ತಕ್ಕಂತೆ ಅಧಿಕಾರ ಕೊಡಿಸಿದಾಗ ಮಾತ್ರ ನಿಮ್ಮೆಲ್ಲರ ಋಣ ತೀರಿಸಿದಂತಾಗುತ್ತದೆ. ಇದು ನನ್ನ ನಂಬಿಕೆ ಮತ್ತು ವಿಶ್ವಾಸಕ್ಕೆ 58 ದಿನಗಳ ಪ್ರವಾಸ ಆರಂಭಿಸಿದ್ದೇನೆ. ಹೀಗೆ ನಿಮ್ಮ ಸಹಕಾರ ನಿರಂತರವಾಗಿರಲಿ’ ಎಂದು ಮನವಿ ಮಾಡಿದ್ದಾರೆ.