ಸಾರಾಂಶ
ಧರ್ಮಸ್ಥಳ ಗ್ರಾಮದಲ್ಲಿ ಅನಧಿಕೃತವಾಗಿ ನೂರಾರು ಶವಗಳನ್ನು ಹೂತು ಸಮಾಧಿ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಮುಂದಾಗಿರುವ ಎಸ್ಐಟಿ ತಂಡಕ್ಕೆ ಬುಧವಾರವೂ ಯಾವುದೇ ಫಲಿತಾಂಶ ಸಿಕ್ಕಿಲ್ಲ.
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಅನಧಿಕೃತವಾಗಿ ನೂರಾರು ಶವಗಳನ್ನು ಹೂತು ಸಮಾಧಿ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಮುಂದಾಗಿರುವ ಎಸ್ಐಟಿ ತಂಡಕ್ಕೆ ಬುಧವಾರವೂ ಯಾವುದೇ ಫಲಿತಾಂಶ ಸಿಕ್ಕಿಲ್ಲ. ನೂರಾರು ಶವಗಳನ್ನು ಹೂತಿದ್ದೇನೆ ಎಂದಿದ್ದ ಅನಾಮಿಕ ದೂರುದಾರ ಗುರುತಿಸಿದ ನಾಲ್ಕು ಸ್ಥಳಗಳಲ್ಲಿ ಬುಧವಾರ ಉತ್ಖನನ ಕಾರ್ಯ ನಡೆಯಿತು. ಕಳೆದೆರಡು ದಿನಗಳ ಅವಧಿಯಲ್ಲಿ ಒಟ್ಟಾರೆ 5 ಕಡೆ ಗುಂಡಿ ತೋಡಲಾಗಿದ್ದರೂ ಯಾವುದೇ ಕುರುಹು ಪತ್ತೆಯಾಗಿಲ್ಲ.
ವಿಶೇಷ ತನಿಖಾ ತಂಡದ ನೇತೃತ್ವದಲ್ಲಿ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟ ಪರಿಸರದ ಕಾಡಿನಲ್ಲಿ ಸೋಮವಾರದಿಂದ ಪ್ರಾರಂಭವಾದ ಪ್ರತ್ಯಕ್ಷ ತನಿಖೆಯಲ್ಲಿ ಅನಾಮಿಕ ದೂರುದಾರ ತಿಳಿಸಿರುವ ಸ್ಥಳಗಳನ್ನು ಪರಿಶೀಲಿಸಲಾಗುತ್ತಿದೆ. ಮಂಗಳವಾರ ಒಂದು ಕಡೆ ಉತ್ಖನನ ನಡೆಸಲಾಗಿತ್ತು.
ಬುಧವಾರ ನೇತ್ರಾವತಿ ಸ್ನಾನಘಟ್ಟದ ಸಮೀಪ ಮೀಸಲು ಅರಣ್ಯದ ಮೂರು ಕಡೆ ಹಾಗೂ ಇದೇ ಅರಣ್ಯದ ಇನ್ನೊಂದು ಭಾಗ ಇರುವ ನದಿ ಕಿನಾರೆ ಸಮೀಪ ಒಂದು ಕಡೆ ಅಗೆತ ಕಾರ್ಯ ನಡೆಸಲಾಯಿತು.
ಬೆಳಗ್ಗೆ 11.30ರಿಂದ ಮಧ್ಯಾಹ್ನ 3.30ರ ತನಕ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ, ದೂರುದಾರ ಗುರುತಿಸಿದ ಸ್ಥಳಗಳಲ್ಲಿ, ಆತನ ಉಪಸ್ಥಿತಿಯಲ್ಲಿ ಸ್ನಾನ ಘಟ್ಟದಲ್ಲಿ 3 ಕಡೆ ಉತ್ಖನನ ನಡೆಸಲಾಯಿತು. ಸುಮಾರು 12 ಪೌರ ಕಾರ್ಮಿಕರು 4 ಅಡಿಗಿಂತ ಅಧಿಕ ಆಳದವರೆಗೆ ಅಗೆತ ನಡೆಸಿದರು. ಬಳಿಕ, ಸಂಜೆ 5.30ರ ತನಕ ನೇತ್ರಾವತಿ ನದಿ ಕಿನಾರೆ ಬದಿ ಒಂದು ಕಡೆ ಅಗೆತ ಕಾರ್ಯ ಮಾಡಲಾಯಿತು. ಎಸ್‌ಐಟಿ ಮುಖ್ಯಸ್ಥ ಪ್ರಣವ್ ಕುಮಾರ್ ಮೊಹಂತಿಯವರು ಸಂಜೆ 4.45ರ ಸುಮಾರಿಗೆ ಆಗಮಿಸಿ, ಸುಮಾರು 45 ನಿಮಿಷಗಳ ಕಾಲ ನೇತ್ರಾವತಿ ನದಿ ಕಿನಾರೆ ಸಮೀಪ ನಡೆದ ಕಾರ್ಯಾಚರಣೆಯನ್ನು ಖುದ್ದಾಗಿ ವೀಕ್ಷಿಸಿದರು. ಎಸ್.ಪಿ.ಅನುಚೇತ್ ಜೊತೆಗಿದ್ದರು. ಈ ವೇಳೆ, ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೊಹಾಂತಿ, ‘ಯಾವುದೇ ಕುರುಹು ಸಿಕ್ಕಿಲ್ಲ’ ಎಂದಷ್ಟೇ ತಿಳಿಸಿದರು.
ಮಂಗಳವಾರ ಮಧ್ಯಾಹ್ನದ ಬಳಿಕ ಮಿನಿ ಹಿಟಾಚಿ ಬಳಸಿ ಶೋಧ ಕಾರ್ಯ ನಡೆಸಲಾಗಿತ್ತು. ಆದರೆ, ಬುಧವಾರ ಮಾನವ ಶ್ರಮದ ಮೂಲಕವೇ ಅಗೆತ ಕಾರ್ಯಾಚರಣೆ ನಡೆದಿದೆ. ಗುರುವಾರ 6ನೇ ಸ್ಥಳದಿಂದ ಶೋಧ ಕಾರ್ಯ ನಡೆಯಲಿದೆ ಎಂದು ಹೇಳಲಾಗಿದೆ.
ಈ ಮಧ್ಯೆ, ಅನಾಮಿಕ ಗುರುತಿಸಿದ ಐದು ಸ್ಥಳಗಳಲ್ಲಿ ಇದುವರೆಗೂ ಯಾವುದೇ ಕುರುಹು ಸಿಗದಿರುವುದು ಪ್ರಕರಣದ ಕುತೂಹಲವನ್ನು ಹೆಚ್ಚಿಸಿದೆ.
- ಧರ್ಮಸ್ಥಳ ಗ್ರಾಮದ 4 ಕಡೆ ನಿನ್ನೆ 4 ಅಡಿ ಗುಂಡಿ ಅಗೆದು ಪರಿಶೀಲಿಸಿದರೂ ಫಲಿತಾಂಶ ಇಲ್ಲ
- ಅನಾಮಿಕ ತೋರಿಸಿದ್ದ 5 ಪಾಯಿಂಟ್‌ಗಳಲ್ಲಿ ಅಸ್ಥಿಪಂಜರಕ್ಕಾಗಿ ಎಸ್‌ಐಟಿ ಹುಡುಕಾಟ
ಮಂಗಳವಾರ ಒಂದು ಸ್ಥಳದಲ್ಲಿ ಅವಶೇಷಗಳಿಗಾಗಿ ಹುಡುಕಾಟ ನಡೆಸಿದ್ದ ಎಸ್‌ಐಟಿ ಅಧಿಕಾರಿಗಳು
ಬುಧವಾರ ಅನಾಮಿಕ ತೋರಿಸಿದ 4 ಪ್ರದೇಶಗಳಿಗೂ ತೆರಳಿ ಅಧಿಕಾರಿಗಳ ತಂಡದ ಪರಿಶೀಲನೆ
ನಾಲ್ಕೂ ಸ್ಥಳಗಳಲ್ಲಿ 4 ಅಡಿ ಗುಂಡಿ ತೋಡಿ ಹುಡುಕಾಡಿದರೂ ಅವಶೇಷಗಳ ಕುರುಹುಗಳು ಸಿಕ್ಕಿಲ್ಲ
ರಕ್ಷಿತ ಅರಣ್ಯ ಪ್ರದೇಶವಾದ ಕಾರಣ ಬುಧವಾರ ಯಂತ್ರ ಬಿಟ್ಟು ಕಾರ್ಮಿಕರಿಂದಲೇ ಗುಂಡಿ ಅಗೆತ
ಗುರುವಾರ ಅನಾಮಿಕ ವ್ಯಕ್ತಿ ತೋರಿಸಿದ 6 ಸ್ಥಳಗಳಲ್ಲಿ ಗುಂಡಿ ತೋಡಿ ಅವಶೇಷಗಳಿಗೆ ಹುಡುಕಾಟ