ಜಿಲ್ಲಾ ಉಸ್ತುವಾರಿ ಸಚಿವರಿಂದ ಜನತಾ ದರ್ಶನ

| Published : Jan 17 2024, 01:47 AM IST

ಸಾರಾಂಶ

ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಜನತಾ ದರ್ಶನದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಜನರು ಅಹವಾಲುಗಳನ್ನು ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಜನತಾ ದರ್ಶನದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಜನರು ಅಹವಾಲುಗಳನ್ನು ಸಲ್ಲಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಬಂದಿದ್ದ ನಾಗರಿಕರು ಸರತಿ ಸಾಲಿನಲ್ಲಿ ನಿಂತು ತಮ್ಮ ಅಹವಾಲು, ಕುಂದು ಕೊರತೆ, ದೂರುಗಳನ್ನು ಸಲ್ಲಿಸಿದರು. ಇ-ಸ್ವತ್ತು ನೀಡುವಲ್ಲಿ ವಿಳಂಬ, ಅಕ್ರಮವಾಗಿ ಖಾತೆ, ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿರುವುದು, ಬದನಗುಪ್ಪೆ-ಕೆಲ್ಲಂಬಳ್ಳಿ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವುದು, ಮದ್ಯ ಮಾರಾಟ ಅಂಗಡಿಗಳಲ್ಲಿ ಅಬಕಾರಿ ನಿಯಮಗಳ ಉಲ್ಲಂಘನೆ, ಕೆರೆಗಳ ಶುದ್ಧೀಕರಣ, ಹೂಳು ತೆಗೆಯುವುದು, ಒತ್ತುವರಿ ತೆರವು, ಸಾಗುವಳಿದಾರರಿಗೆ ಅನುಕೂಲ ಕಲ್ಪಿಸುವುದು ಸೇರಿದಂತೆ ಇನ್ನಿತರ ಮನವಿಗಳು ಜನತಾ ದರ್ಶನದಲ್ಲಿ ಸಲ್ಲಿಕೆಯಾದವು. ಆಮ್ಲಜನಕ ದುರಂತದಲ್ಲಿ ಸಂತ್ರಸ್ತರಾದ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವ ಬಗ್ಗೆ ಸಂತ್ರಸ್ತರು ಮಾಡಿದ ಮನವಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಕ್ರಮವಹಿಸಲಾಗಿದೆ. ಖಾಯಂ ಉದ್ಯೋಗ ದೊರಕುವವರೆಗೆ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಲು ಕೂಡಲೇ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನೇಮಕದ ಸಂದರ್ಭದಲ್ಲಿ ಸಲ್ಲಿಕೆಯಾಗಿರುವ ಅಂಕಪಟ್ಟಿಗಳ ನೈಜತೆಯನ್ನು ಪರಿಶೀಲಿಸಬೇಕು ಎಂಬುದು ಸೇರಿದಂತೆ ಇತರೆ ದೂರುಗಳು, ಸಮಸ್ಯೆಗಳು ಹಾಗೂ ವೈಯಕ್ತಿಕ ಕುಂದು ಕೊರತೆಗಳನ್ನು ಜನರು ಜನತಾ ದರ್ಶನದಲ್ಲಿ ಸಚಿವರ ಗಮನಕ್ಕೆ ತಂದರು. ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅಹವಾಲು ಸ್ವೀಕರಿಸುತ್ತಿದ್ದಂತೆಯೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಾರ್ವಜನಿಕರ, ದೂರುದಾರರ ಸಮ್ಮುಖದಲ್ಲಿಯೇ ಕರೆಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಸಾರ್ವಜನಿಕರ ಅಹವಾಲು ಸಮಸ್ಯೆಗಳನ್ನು ಕೇಳಿ ಅರ್ಜಿಗಳನ್ನು ವಿಲೇವಾರಿಗೊಳಿಸಿ ಸೂಕ್ತ ಪರಿಹಾರ ನೀಡಬೇಕೆಂಬ ಸದುದ್ದೇಶದಿಂದ ಜನತಾ ದರ್ಶನ ಕಾರ್ಯಕ್ರಮ ನಡೆಸಲಾಗುತ್ತಿದೆ. ಇಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ವಿಳಂಬ ಮಾಡದೇ ಇತ್ಯರ್ಥಗೊಳಿಸಬೇಕು. ಸಮಂಜಸವಾದ ಉತ್ತರ ಪರಿಹಾರವನ್ನು ನೀಡಬೇಕು. ಇದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.ಇ-ಸ್ವತ್ತು ಸಂಬಂಧ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಜಿಲ್ಲೆಯಲ್ಲಿ ಯಾವ ಯಾವ ಭಾಗದಲ್ಲಿ ಎಷ್ಟೆಷ್ಟು ಇ-ಸ್ವತ್ತು ಕುರಿತ ಅರ್ಜಿಗಳು ಬಾಕಿ ಇವೆ ಎಂಬ ಬಗ್ಗೆ ಪರಿಶೀಲಿಸಬೇಕು. ಈ ಅರ್ಜಿಗಳು ವಿಲೇವಾರಿಯಾಗದಿರಲು ಕಾರಣ ಏನೆಂಬ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು. ಸಾರ್ವಜನಿಕರಿಗೆ ಸಕಾಲದಲ್ಲಿ ಇ-ಸ್ವತ್ತು ಅರ್ಜಿಗಳು ಇತ್ಯರ್ಥಗೊಂಡು ನಿಯಮಾನುಸಾರ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ತಿಳಿಸಿದರು. ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಹೆಚ್.ಎಂ. ಗಣೇಶ್ ಪ್ರಸಾದ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಜನತಾ ದರ್ಶನದಲ್ಲಿ ಭ್ರಷ್ಟಾಚಾರ ಅನಾವರಣ, ಸಾಲು ಸಾಲು ಆರೋಪ

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಜನತಾ ದರ್ಶನ ನಡೆಯಿತು. ಜನತಾ ದರ್ಶನದಲ್ಲಿ ಸಾಲು ಸಾಲು ಭ್ರಷ್ಟಾಚಾರ ಆರೋಪಗಳನ್ನು ಹೊತ್ತು ತಂದ ಜನರು ಜನಪ್ರತಿನಿಧಿಗಳ ಮುಂದೆ ಬಿಚ್ಚಿಟ್ಟು ಆಕ್ರೋಶ ಹೊರಹಾಕಿದರು.ಇ-ಸ್ವತ್ತಿಗೆ ಲಕ್ಷ ಲಂಚ: ಚಾಮರಾಜನಗರ ನಗರಸಭೆಯಲ್ಲಿ ಇ-ಸ್ವತ್ತು ಮಾಡಿಸಬೇಕೆಂದರೆ 75 ಸಾವಿರದಿಂದ ಲಕ್ಷ ರೂ. ಲಂಚ ಕೊಡಬೇಕು, 9 ಬಾರಿ ಮಾಹಿತಿ ಹಕ್ಕಿ‌ನಡಿ ಅರ್ಜಿ ಹಾಕಿದರೂ ಮಾಹಿತಿ ಕೊಡುತ್ತಿಲ್ಲ ಎಂದು ಚಾಮರಾಜನಗರದ ಪ್ರಶಾಂತ್ ಎಂಬವರು ದೂರಿದರು. ಇದಕ್ಕೆ, ಉಸ್ತುವಾರಿ ಸಚಿವರು ಮಾತನಾಡಿ, ಮಾಹಿತಿ ಹಕ್ಕಿನಡಿ ಕೇಳಿರುವ ಪ್ರಶ್ನೆಗೆ ಉತ್ತರ ಕೊಡಿ, ಇ-ಸ್ವತ್ತು ವಿಚಾರದಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕೊಳ್ಳೇಗಾಲದ ಲಿಂಗರಾಜು ಎಂಬವರು ತಮ್ಮ ಅರ್ಜಿ ಸಲ್ಲಿಸಿ ಮಾತನಾಡಿ,‌ ಕೊಳ್ಳೇಗಾಲದಲ್ಲಿ ಲೋಕಪಯೋಗಿ ಇಲಾಖೆಯು ರಸ್ತೆಯಲ್ಲಿ ಗೋಲ್‌ಮಾಲ್ ಮಾಡಿದೆ, ಸ್ಥಳ ಪರಿಶೀಲನೆ ನಡೆಸದೇ ವರದಿ ಕೊಟ್ಟಿದ್ದಾರೆ, 4 ಬಾರಿ ದೂರು ಕೊಟ್ಟರು ಕ್ರಮ‌ ಇಲ್ಲಾ ಎಂದರು. ಸಮಾಜ ಕಲ್ಯಾಣ ಇಲಾಖೆಯು ಹಾಸ್ಟೆಲ್ ಗಳಿಗೆ ಪ್ರಿಡ್ಜ್ ಕೊಟ್ಟಿದ್ದು 1 ಸ್ಟಾರ್ ಇರುವ ಪ್ರಿಡ್ಜ್ ಗೆ 90-95 ಸಾವಿರ ಬಿಲ್ ಮಾಡಿದ್ದಾರೆ, 30 ಸಾವಿರ ರೂ. ಸ್ಟಡಿ ಟೇಬಲ್ ಮಾಡಿದ್ದು ಅದನ್ನು ದೂರದ ತುಮಕೂರಿನಿಂದ ತಂದಿದ್ದಾರೆ ಎಂದು ಕಿಡಿಕಾರಿದರು. ಸಿಮ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದರೇ ಫಿಲಂ ಕೊಡುತ್ತಿಲ್ಲ, ವಾರ್ಡ್ ಗಳಲ್ಲಿರುವ ಶೌಚಾಲಯಗಳಿಗೆ ಬೀಗ ಹಾಕಿದ್ದು ಒಳರೋಗಿಗಳು ಶೌಚಕ್ಕೆ ಹೊರಗಡೆ ಹೋಗಬೇಕಿದೆ ಎಂದರು. ‌ಇದಕ್ಕೆ ಗರಂ ಆದ ಸಚಿವರು, ಸೂಕ್ತ ಚಿಕಿತ್ಸೆ ಕೊಡಿ, ಮೂಲಸೌಕರ್ಯ ಕಲ್ಲಿಸಿ ಎಂದರು.‌ ಭ್ರಷ್ಟಾಚಾರ ಆರೋಪಕ್ಕೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಕ್ರಮ ಜರುಗಿಸುವುದಾಗಿ ಹೇಳಿದರು.

ಯಳಂದೂರಿನ ವ್ಯಕ್ತಿಯೊಬ್ಬರು ಜನತಾ ದರ್ಶನದಲ್ಲಿ ಮಾತನಾಡಿ, ಗ್ರಾಪಂನಲ್ಲಿ ಬದುಕಿರುವ ವ್ಯಕ್ತಿಯನ್ನು ಎರಡು ಸಾರಿ ಸಾಯಿಸಿದ್ದಾರೆ, ಮತ್ತೇ ಎರಡು ಸಾರಿ ಬದುಕಿಸಿದ್ದಾರೆ, ದುಡ್ಡು ಕೊಟ್ಟರೇ ಏನು ಬೇಕಾದರೀ ಮಾಡುತ್ತಾರೆ ಎಂದು ಅಳಲು ತೋಡಿಕೊಂಡಿದ್ದಕ್ಕೆ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಡಿಸಿಗೆ ಸೂಚಿಸಿದರು.

ಅಬಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿರುದ್ಧವೂ ಜನರು ದೂರುಗಳ ಸುರಿಮಳೆಗೈಯ್ದರು. ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಸಾಲು ಸಾಲು ಆರೋಪ ಮಾಡಿದರು. ಇನ್ಮು, ಜನತಾ ದರ್ಶನದಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದು ಕಂಡುಬಂದರೇ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ಕೊಟ್ಟರು.

ಜನತಾ ದರ್ಶನದಲ್ಲಿ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಇದ್ದರು.