ಗದಗ ಜಿಲ್ಲೆಯ ಜನತಾ ದರ್ಶನ ರಾಜ್ಯಕ್ಕೆ ಮಾದರಿಯಾಗಲಿ-ಸಚಿವ ಎಚ್‌.ಕೆ. ಪಾಟೀಲ್

| Published : Jan 31 2024, 02:20 AM IST

ಗದಗ ಜಿಲ್ಲೆಯ ಜನತಾ ದರ್ಶನ ರಾಜ್ಯಕ್ಕೆ ಮಾದರಿಯಾಗಲಿ-ಸಚಿವ ಎಚ್‌.ಕೆ. ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆದೇಶದಂತೆ ರಾಜ್ಯಮಟ್ಟ, ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟಗಳಲ್ಲಿ ಜರುಗುತ್ತಿರುವ ಜನತಾ ದರ್ಶನ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಜನತಾ ದರ್ಶನ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗುವಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಮುಂಡರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆದೇಶದಂತೆ ರಾಜ್ಯಮಟ್ಟ, ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟಗಳಲ್ಲಿ ಜರುಗುತ್ತಿರುವ ಜನತಾ ದರ್ಶನ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಜನತಾ ದರ್ಶನ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗುವಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಅವರು ಮಂಗಳವಾರ ಮುಂಡರಗಿ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಮುಂಡರಗಿ ತಾಲೂಕು ಜನತಾ ದರ್ಶನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಇಂದಿನ ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿನ ಸಾರ್ವಜನಿಕರ ಸಮಸ್ಯೆಗಳ ಕುರಿತಾದ ಒಟ್ಟು338 ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಸುಮಾರು 50 ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಪರಿಹಾರ ನೀಡಲಾಯಿತು. 4-5 ಅರ್ಜಿಗಳಿಗೆ ಸ್ಥಳದಲ್ಲಿಯೇ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಆದೇಶ ಪ್ರತಿಯನ್ನು ವಿತರಿಸಿದ್ದಾರೆ. ಮುಂದಿನ ಜಿಲ್ಲಾ ಹಾಗೂ ತಾಲೂಕು ಮಟ್ಟದ ಜನತಾ ದರ್ಶನವನ್ನು 15 ದಿನಗಳ ಮೊದಲೇ ದಿನಾಂಕ ಘೋಷಿಸಲಾಗುವುದು. ಒಂದು ವಾರದ ಮೊದಲೇ ಸಾರ್ವಜನಿಕರ ಸಮಸ್ಯಗಳ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. ನಂತರ ಎಲ್ಲ ಇಲಾಖೆಗಳ ಅರ್ಜಿಗಳನ್ನು ಆಯಾ ಇಲಾಖೆ ಅಧಿಕಾರಿಗಳಿಗೆ ಕಳಿಸುತ್ತೇವೆ. ಅವರು 1 ವಾರ ಕಾಲ ಅವುಗಳನ್ನು ಪರಿಶೀಲನೆ ನಡೆಸಿ ಜನತಾ ದರ್ಶನಕ್ಕೆ ಬರುವಾಗ ಆಯಾ ಸಮಸ್ಯೆಗಳಿಗೆ ಪರಿಹಾರ ಅಥವಾ ಆದೇಶ ಪ್ರತಿಗಳನ್ನು ತರುವಂತೆ ಸೂಚಿಸಲಾಗುವುದು. ಜಿಲ್ಲಾಧಿಕಾರಿಗಳು ಒಂದು ತಿಂಗಳಿನಲ್ಲಿ ಇಲ್ಲಿನ ಎಲ್ಲ ಅರ್ಜಿಗಳಿಗೂ ಪರಿಹಾರ ನೀಡಿ, ಫೆ. 25ಕ್ಕೆ ಎಲ್ಲ ಅರ್ಜಿಗಳ ಸಮಸ್ಯೆ ಮತ್ತು ಪರಿಹಾರದ ಕುರಿತು ಪುಸ್ತಕ ಮಾಡಿ ಬಿಡುಗಡೆ ಮಾಡಬೇಕು. ಇದರಲ್ಲಿ ನಾವು ಯಶಸ್ವಿಯಾಗಿ ರಾಜ್ಯದಲ್ಲಿ ನಮ್ಮ ಜನತಾ ದರ್ಶನ ಮಾದರಿಯಾಗಬೇಕು. ಇದಕ್ಕೆ ಎಲ್ಲ ಅಧಿಕಾರಿಗಳ ಸ್ಪಂದನೆ ಅವಶ್ಯವಾಗಿದೆ ಎಂದರು. ರೋಣ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ಗದಗನಲ್ಲಿ ಜರುಗಿದ ಜನತಾ ದರ್ಶನದಲ್ಲಿ 921 ಅರ್ಜಿಗಳು ಬಂದಿದ್ದರೆ, ಮುಂಡರಗಿ ತಾಲೂಕಿನ ಜನತಾ ದರ್ಶನದಲ್ಲಿ 338 ಅರ್ಜಿಗಳು ಬಂದಿವೆ. ಇದನ್ನು ನೋಡಿದರೆ ಇಲ್ಲಿನ ತಾಲೂಕು ಮಟ್ಟದ ಅಧಿಕಾರಿಗಳು ಸರಿಯಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸದಿರುವುದು ಕಂಡು ಬರುತ್ತದೆ. ಆದ್ದರಿಂದ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಜಿಲ್ಲಾಧಿಕಾರಿಯವರು ಗದಗ ಜನತಾ ದರ್ಶನದ ಅರ್ಜಿಗಳನ್ನು 100ಕ್ಕೆ 100ರಷ್ಟು ಪರಿಹರಿಸಿದ್ದು, ಮುಂಡರಗಿ ತಾಲೂಕಿನ 338ನ್ನೂ ಸಹ ಸಂಪೂರ್ಣವಾಗಿ ಪರಿಹರಿಸಬೇಕು ಎಂದು ತಿಳಿಸಿ, ಬೆಳಗ್ಗೆಯಿಂದ ಕ್ಷೇತ್ರದ ಸಮಸ್ಯಗಳನ್ನು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಭಿನಂದಿಸಿದರು. ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಒಂದು ಆಧಾರ್ ಕಾರ್ಡಿನಲ್ಲಿ ವಿದ್ಯಾರ್ಥಿನಿಯೊಬ್ಬರ ಹೆಸರು ಬದಲಾವಣೆ ಮಾಡಲು 2-3 ವರ್ಷ ಬೇಕಾದರೆ ಅಧಿಕಾರಿಗಳು ಯಾವು ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ಸರ್ಕಾರಿ ಕಚೇರಿಗಳಿಗೆ ಸಮಸ್ಯೆ ಹೇಳಿಕೊಂಡು ಬರುವ ಸಾರ್ವಜನಿಕರಿಗೆ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿದರೆ ಅವರಿಗೂ ಖುಷಿಯಾಗುತ್ತದೆ. ಯಾವುದೇ ಕಾರಣಕ್ಕೂ ಅಲೆದಾಡಿಸಬೇಡಿ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ತಹಸೀಲ್ದಾರ್‌ ಧನಂಜಯ ಮಾಲಗತ್ತಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಬೆಳಗ್ಗೆ 12 ಗಂಟೆಗೆ ಪ್ರಾರಂಭವಾದ ಜನತಾ ದರ್ಶನ ಮಧ್ಯಾಹ್ನ 20 ನಿಮಿಷಗಳ ಬಿಡುವಿನ ನಂತರ ಮತ್ತೆ ಪ್ರಾರಂಭವಾಗಿ ಸಂಜೆ 7.15ರವರೆಗೂ ನಿರಂತರವಾಗಿ ಜರುಗಿತು.