ಸಾರಾಂಶ
ಹುಬ್ಬಳ್ಳಿ: ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ ಬ್ರಾಹ್ಮಣರು ಹಾಗೂ ಇತರ ಎಲ್ಲ ಸಮಾಜದ ಜನಿವಾರಧಾರಿಗಳ ಮುಖಂಡರ ನೇತೃತ್ವದಲ್ಲಿ ಏ. 25ರಂದು ಪಂಚೆ, ಶಲ್ಯ ಹಾಗೂ ಜನಿವಾರ ಧರಿಸಿಕೊಂಡು ಸರ್ಕಾರದ ವಿರುದ್ಧ ನಗರದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಲು ನಿರ್ಧಾರ ಕೈಗೊಳ್ಳಲಾಯಿತು.
ಇಲ್ಲಿನ ದೇಶಪಾಂಡೆ ನಗರದ ಶ್ರೀ ರಾಘವೇಂದ್ರ ಸಭಾ ಭವನದಲ್ಲಿ ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಧಾರವಾಡ ಜಿಲ್ಲೆ ಹಾಗೂ ವಿವಿಧ ಸಮಾಜದ ಮುಖಂಡರ ನೇತೃತ್ವದಲ್ಲಿ ಸೋಮವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.ಅಂದಾಜು 10 ಸಾವಿರಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ. ಜನಿವಾರ ಧರಿಸಿ ರ್ಯಾಲಿಯಲ್ಲಿ ಭಾಗವಹಿಸುವಂತೆ ಸೂಚಿಸಲಾಯಿತು. ಅಂದು 10 ಗಂಟೆಯೊಳಗೆ ನಗರದ ಈಶ್ವರ ದೇವಸ್ಥಾನದಲ್ಲಿ ಸಮಾವೇಶಗೊಳ್ಳಬೇಕು. ಅಲ್ಲಿಂದ ರ್‍ಯಾಲಿಯ ಮೂಲಕ ಡಾ.ಅಂಬೇಡ್ಕರ್ ಸರ್ಕಲ್ಗೆ ಆಗಮಿಸಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸುವುದು. ತದನಂತರ ಸಂಗೊಳ್ಳಿ ರಾಯಣ್ಣ ಸರ್ಕಲ್ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿ, ಪ್ರತಿಭಟನಾ ಸಮಾವೇಶ ಕೈಗೊಳ್ಳುವುದರ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ಧಾರವಾಡ ಜಿಲ್ಲಾ ಪ್ರತಿನಿಧಿ ಲಕ್ಷ್ಮಣ ಕುಲಕರ್ಣಿ ಮಾತನಾಡಿ, ಅನೇಕ ಕಡೆಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸುವ ಮೂಲಕ ನೀಚ ಕೃತ್ಯ ಮಾಡಲಾಗಿದೆ. ಇದರಿಂದ ಬ್ರಾಹ್ಮಣ ಸಮಾಜಕ್ಕೆ ಅಪಮಾನವಾಗಿದ್ದು, ಇದರ ವಿರುದ್ಧ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಹಿಂದೂ ಸಮಾಜಕ್ಕೆ ಏನಾದರೂ ಅನ್ಯಾಯ, ಅಪಮಾನ ಹಾಗೂ ದೌರ್ಜನ್ಯ ಆದಲ್ಲಿ ರಕ್ತಕ್ರಾಂತಿಗೂ ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.ವಿಶ್ವಕರ್ಮ ಸಮಾಜದ ಮುಖಂಡ ರಾಜೇಶ ಬಡಿಗೇರ, ಮರಾಠಾ ಸಮಾಜದ ಮುಖಂಡ ಗಾಯಕವಾಡ ಮಾತನಾಡಿ, ಬ್ರಹ್ಮ-ವಿಷ್ಣು- ಮಹೇಶ್ವರ ಕೂಡಿದಾಗ ಮಾತ್ರ ಜನಿವಾರ ಆಗುತ್ತದೆ. ಜನಿವಾರ ಎಂಬುದನ್ನು ಸಾಕ್ಷಾತ್ ಭಗವಂತನ ಪ್ರತಿ ರೂಪವಾಗಿದೆ. ಅದಕ್ಕೆ ಕತ್ತರಿ ಹಾಕಿಸುವ ಮೂಲಕ ಬ್ರಾಹ್ಮಣ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ. ಉಗ್ರ ಹೋರಾಟದ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸೋಣ ಎಂದರು.
ಸಮಾಜದ ಮುಖಂಡ ಎ.ಸಿ. ಗೋಪಾಲ ಮಾತನಾಡಿ, ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾದ ಸಭೆ ಅಥವಾ ಹೋರಾಟವಲ್ಲ ಎಂಬುದನ್ನು ಮೊದಲು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಂದ ಜನಿವಾರದ ಜತೆಗೆ ಲಿಂಗ, ರುದ್ರಾಕ್ಷಿ ಸಹ ತೆಗೆಸಲಾಗಿದೆ. ಇದನ್ನು ಸ್ಪಷ್ಟಪಡಿಸಿಕೊಂಡು, ಅವರೆಲ್ಲನ್ನೂ ಒಗ್ಗೂಡಿಸಿಕೊಂಡು ಪಕ್ಷಾತೀತವಾಗಿ ತಪ್ಪಿತಸ್ಥರ ವಿರುದ್ಧ ಹೋರಾಟ ಮಾಡೋಣ ಎಂದರು.ಡಾ. ಜಿ.ಬಿ. ಸತ್ತೂರ, ಏ. 25ರಂದು ನಡೆಯುವ ರ್‍ಯಾಲಿಯ ದಿನದಂದು ಒಂದು ಸಾವಿರ ಜನಿವಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.
ಮುಖಂಡ ಜಯತೀರ್ಥ ಕಟ್ಟಿ, ನಾವು ಹಿಂದೂಗಳು ಮುಸ್ಲಿಮರ ಹಿಜಾಬ್ ತೆಗೆಸಿದ ಕಾರಣಕ್ಕೆ ಅವರು ಬ್ರಾಹ್ಮಣರ ಜನಿವಾರ ತೆಗೆಸುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ನಡೆಯನ್ನು ಸಮಸ್ತ ಹಿಂದೂಗಳು ಉಗ್ರವಾಗಿ ಖಂಡಿಸಬೇಕಿದೆ ಎಂದರು.ಸಂಧ್ಯಾ ದಿಕ್ಷೀತ್, ಜನಿವಾರ ಎಂಬುದು ಕೇವಲ ದಾರ ಅಲ್ಲ. ಅದು ನಮ್ಮ ಜೀವನದ ಆಧಾರ. ಅದನ್ನೆ ಕಿತ್ತು ಹಾಕುವ ನೀಚ ಸಂಸ್ಕೃತಿ ಸರಿಯಲ್ಲ. ಹಿಂದೆ ಮಹಿಳೆಯರಿಗೆ ಜನಿವಾರ ಇತ್ತು. ಅದನ್ನು ಮುಂದುವರೆಸೋಣ ಎಂದು ಸಲಹೆ ನೀಡಿದರು.
ಸಭೆಯಲ್ಲಿ ದತ್ತಮೂರ್ತಿ ಕುಲಕರ್ಣಿ, ವೇಣುಗೋಪಾಲ ಆಚಾರ್ಯ, ಬಿಂದುಮಾಧವ ಕುಲಕರ್ಣಿ, ಶಂಕರ ಪಾಟೀಲ ಕುಲಕರ್ಣಿ, ಹನುಮಂತ, ವೇಣುಗೋಪಾಲ ಆಚಾರ್ಯ, ನರೇಂದ್ರ ಕುಲಕರ್ಣಿ, ಜೆ.ಬಿ.ಪಾಟೀಲ ಕುಲಕರ್ಣಿ, ರವಿ ಆಚಾರ್ಯ, ಮನೋಹರ ಪರ್ವತಿ ಹಾಗೂ ಸರ್ವ ಬ್ರಾಹ್ಮಣ ಸಮಾಜ, ಆರ್ಯ ವೈಶ್ಯ ಸಮಾಜ,ಎಸ್.ಎಸ್.ಕೆ. ಸಮಾಜ, ಜೈನ ಸಮಾಜ ಹಾಗೂ ಮರಾಠಾ ಸಮಾಜದ ಮುಖಂಡರು ಇದ್ದರು.