ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯದಲ್ಲಿ ಮುಡಾ ಹಗರಣ ಮುನ್ನೆಲೆಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರ್ಚಿಗೆ ಸಂಚಕಾರ ಬರಬಹುದು ಎಂಬ ವಿಶ್ಲೇಷಣೆಗಳು ಆರಂಭವಾದೊಡನೆ ಇತ್ತ ಬೆಳಗಾವಿಯಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಪ್ರಭಾವಿ ಮುಖಂಡ ಸತೀಶ ಜಾರಕಿಹೊಳಿ ಹೆಸರು ಸಿಎಂ ಹುದ್ದೆಗೆ ಆಗಾಗ ಕೇಳಿಬರುತ್ತಿದೆ.ಮೊದಲು ಸತೀಶ ಜಾರಕಿಹೊಳಿ ಮುಂದಿನ ಸಿಎಂ ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದರು. ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು. ನಂತರವೂ ಹಲವು ಬಾರಿ ಸತೀಶ ಜಾರಕಿಹೊಳಿ ಸಿಎಂ ಆಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಲೇ ಇದೆ. ಈ ಮಧ್ಯೆ ಶುಕ್ರವಾರ ಸಚಿವ ಸತೀಶ ಜಾರಕಿಹೊಳಿ ಅವರು ಸದ್ದಿಲ್ಲದೆ ದೆಹಲಿಗೆ ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಬಂದಿರುವುದು, ಭಾನುವಾರ ಪಕ್ಷದ ದಲಿತ ಮುಖಂಡ ಪರಮೇಶ್ವರ ಜೊತೆಗೆ ಮಾತುಕತೆ ನಡೆಸಿರುವುದು ಈ ವಿಷಯಕ್ಕೆ ರೆಕ್ಕೆಪುಕ್ಕ ಹುಟ್ಟಿಸಿದೆ.
ಇದರ ಮಧ್ಯೆ ಭಾನುವಾರ ಬೆಳಗಾವಿಯಲ್ಲಿ ನಡೆದ ಜಿಲ್ಲಾ ವಾಲ್ಮೀಕಿ ಸಮಾಜದ ಸಮಾವೇಶದಲ್ಲಿ ಮುಂದಿನ ಸಿಎಂ ಜಾರಕಿಹೊಳಿ ಎಂಬ ಕೂಗು ಮೊಳಗಿರುವುದು ಮತ್ತಷ್ಟು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಭಾನುವಾರ ಬೆಳಗಾವಿ ಜಿಲ್ಲೆ ವಾಲ್ಮೀಕಿ ಸಮಾಜ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಾಲ್ಮೀಕಿ ಸಮಾಜದ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ರಾಜಶೇಖರ ತಳವಾರ, ಈ ಭಾಗದ ಪ್ರಭಾವಿ ನಾಯಕ ಸತೀಶ ಜಾರಕಿಹೊಳಿ ಅವರು ಸಿಎಂ ಆಗುವ ಕಾಲ ಕೂಡಿ ಬಂದಿದೆ. ಸದ್ಯದಲ್ಲೇ ನಮಗೆ ಸಿಹಿ ಸುದ್ದಿ ನೀಡಲಿದ್ದಾರೆ ಎಂದು ಹೇಳಿದ್ದು, ಇದಕ್ಕೆ ಸಾಥ್ ನೀಡಿದ ಅಭಿಮಾನಿಗಳು ಜಾರಕಿಹೊಳಿ ಮುಂದಿನ ಸಿಎಂ ಎಂಬ ಘೋಷಣೆಗಳನ್ನು ಮೊಳಗಿಸಿದ್ದು, ರಾಜಕೀಯ ವಲಯದಲ್ಲಿ ಸಂಚಲಕ್ಕೆ ಕಾರಣವಾಗಿದೆ.