ಇಲ್ಲಿನ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೃತಕ ಬುದ್ಧಿಮತ್ತೆ ಮತ್ತು ಡಾಟಾ ಸೈನ್ಸ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕಾವ್ಯ, ಪ್ರಜ್ಞಾ, ಶ್ರೀ ಪ್ರಿಯಾ ಹಾಗೂ ಶ್ರೇಯಾ ಶೆಟ್ಟಿ ಅವರು ವಿಭಾಗದ ಮುಖ್ಯಸ್ಥ ಡಾ. ರಾಜೇಶ್ ನಾಯಕ್ ಮಾರ್ಗದರ್ಶನದಲ್ಲಿ ಮಲ್ಲಿಗೆ ಗಿಡಗಳ ಆರೋಗ್ಯ ಮೇಲ್ವಿಚಾರಣೆ ಮಾಡುವ ನೂತನ ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದಾರೆ.
ಕಾಪು: ಇಲ್ಲಿನ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೃತಕ ಬುದ್ಧಿಮತ್ತೆ ಮತ್ತು ಡಾಟಾ ಸೈನ್ಸ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕಾವ್ಯ, ಪ್ರಜ್ಞಾ, ಶ್ರೀ ಪ್ರಿಯಾ ಹಾಗೂ ಶ್ರೇಯಾ ಶೆಟ್ಟಿ ಅವರು ವಿಭಾಗದ ಮುಖ್ಯಸ್ಥ ಡಾ. ರಾಜೇಶ್ ನಾಯಕ್ ಮಾರ್ಗದರ್ಶನದಲ್ಲಿ ಮಲ್ಲಿಗೆ ಗಿಡಗಳ ಆರೋಗ್ಯ ಮೇಲ್ವಿಚಾರಣೆ ಮಾಡುವ ನೂತನ ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದಾರೆ.
ಮಲ್ಲಿಗೆ ಗಿಡದ ಪೋಷಕಾಂಶಗಳನ್ನು ವಿಶ್ಲೇಷಿಸಿ ಹಾಗೂ ಎಲೆಗಳ ಚಿತ್ರ ಸಂಸ್ಕರಣಾ ತಂತ್ರಜ್ಞಾನವನ್ನು ಸಂಯೋಜಿಸಿ, ಸಸ್ಯರೋಗಗಳು ಮತ್ತು ಪೋಷಕಾಂಶಗಳ ಕೊರತೆಯನ್ನು ಆರಂಭಿಕ ಹಂತದಲ್ಲಿ ಗುರುತಿಸುವ ಸಾಮರ್ಥ್ಯವನ್ನು ಈ ಸಂಶೋಧನೆ ಹೊಂದಿದೆ. ಕೃತಕ ಬುದ್ಧಿಮತ್ತೆ, ಯಾಂತ್ರಿಕ ಅಧ್ಯಯನ ಮತ್ತು ವಿವರಣಾತ್ಮಕ ತಂತ್ರಜ್ಞಾನವನ್ನು ಬಳಸುವ ಈ ವ್ಯವಸ್ಥೆಯು ರೈತರಿಗೆ ಸಮಯೋಚಿತ ಮಾಹಿತಿಯನ್ನು ಒದಗಿಸಿ, ಬೆಳೆ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಹಕಾರಿಯಾಗುತ್ತದೆ. ಇದರಿಂದ ಮಲ್ಲಿಗೆ ಹೂವಿನ ಉತ್ಪಾದನೆ ಹೆಚ್ಚುವುದರ ಜೊತೆಗೆ ಸುಸ್ಥಿರ ಕೃಷಿ ಪದ್ಧತಿಗಳಿಗೂ ಉತ್ತೇಜನ ದೊರೆಯಲಿದೆ ಎಂದು ಈ ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.