ಗಾಂಧೀಜಿ ವಿಚಾರಧಾರೆ ಎಂದೆಂದಿಗೂ ಪ್ರಸ್ತುತ

| Published : Oct 10 2024, 02:20 AM IST

ಸಾರಾಂಶ

ಪ್ರಸ್ತುತ ಜಾತೀಯತೆ, ಮತೀಯ ಗಲಭೆ ಎಲ್ಲೆಲ್ಲೂ ತಾಂಡವವಾಡುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ರಾಷ್ಟ್ರಪತಿ ಮಹಾತ್ಮಗಾಂಧೀಜಿಯವರ ವಿಚಾರಧಾರೆಗಳು ಸದಾಕಾಲಕ್ಕೂ ಪ್ರಸ್ತುತ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಜಿ.ಟಿ. ದೇವೇಗೌಡ ಹೇಳಿದರು.

ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಟರಾಜ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ 21ನೇ ಶತಮಾನದಲ್ಲಿ ಗಾಂಧೀಜಿ ರಾಜಕೀಯ ನಿಲುವುಗಳ ಪ್ರಸ್ತುತತೆ ಚಿಂತನ-ಮಂಥನ ದುಂಡುಮೇಜಿನ ಸಭೆ ಉದ್ಘಾಟಿಸಿ ಮಾತನಾಡಿದ ಅವುರು, ಗಾಂಧೀಜಿಯವರ ಬದುಕು ಮತ್ತು ಬರಹ ಇಂದಿಗೂ ಪ್ರಸ್ತುತ. ಹೀಗಾಗಿ ಯುವಜನತೆಗೆ ಗಾಂಧೀಜಿ ನಡೆದು ಬಂದ ಹಾದಿಯ ಬಗ್ಗೆ, ಅವರ ಆದರ್ಶ, ಚಿಂತನೆಗಳನ್ನು ತಿಳಿಸಬೇಕು ಎಂದರು.

ಪ್ರಾಂತೀಯ ಭಾಷೆ, ರಾಷ್ಟ್ರಭಾಷೆ, ಗ್ರಾಮೋದ್ಯೋಗ, ಗ್ರಾಮ ನೈರ್ಮಲ್ಯ, ಸ್ತ್ರೀ ಶಿಕ್ಷಣ, ಜಾತಿ ಪದ್ಧತಿ ನಿಮೂರ್ಲನೆ ಮೊದಲಾದವುಗಳ ಬಗ್ಗೆ ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸುವುದು ಗಾಂಧೀಜಿಯವರ ನಿಲುವಾಗಿತ್ತು. ನಮ್ಮ ದೇಶ ಉದ್ಧಾರವಾಗಬೇಕಾದರೆ ಗ್ರಾಮಗಳು ಉದ್ಧಾಾರವಾಗಬೇಕು ಎಂದು ಗಾಂಧೀಜಿ ಕನಸು ಕಂಡಿದ್ದರು. ಗಾಂಧೀಜಿಯವರು ನೀಡಿರುವ ಸಂದೇಶಗಳು ಎಂದೆಂದಿಗೂ ಉಳಿಯಬೇಕು ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಗುಂಡ್ಲುಪೇಟೆ ಶಾಸಕ ಎಚ್‌.ಎಂ. ಗಣೇಶಪ್ರಸಾದ್‌ ಮಾತನಾಡಿ, ಜಾತಿ ಪ್ರೇರಣೆಗೆ ಒಳಗಾಗಿ ಇಂದು ಮಹನೀಯರ ದಿನಾಚರಣೆಗಳೇ ಕಳೆಗುಂದಿದೆ. ಜನಸೇವೆಯೇ ಇಂದಿನ ರಾಜಕಾರಣಿಗಳ ಮುಖ್ಯ

ಕರ್ತವ್ಯವಾಗಬೇಕು. ಕೇವಲ ಅಂರ್ತರ್ಜಾಲದ ಮಾಹಿತಿಗೆ ಒಳಗಾಗದೆ ಪುಸ್ತಕಗಳ ಅಧ್ಯಯನದಿಂದ ಮಾತ್ರ ಮಹನೀಯರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಮತ್ತೊರ್ವ ಮುಖ್ಯ ಅತಿಥಿ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಗಾಂಧೀಜಿಯವರು ಸ್ವಾತಂತ್ರ್ಯ ತಂದುಕೊಡಲು ಅಹಿಂಸಾ ಮಾರ್ಗವನ್ನು ಅನುಸರಿಸಿದರು. ಸ್ವದೇಶಿ ಚಿಂತನೆಗೆ ಹೆಚ್ಚು ಒತ್ತು ಕೊಟ್ಟವರು. ಮಹಿಳೆ ಮಧ್ಯರಾತ್ರಿ ಸ್ವತಂತ್ರವಾಗಿ ಓಡಾಡಬೇಕು ಎಂದು ಆಶಿಸಿದ್ದವರು. ಆದರೆ ಇವತ್ತು ನಾಲ್ಕು ಗೋಡೆಗಳ ನಡುವೆಯೇ ಇರುವ ಮಹಿಳೆಗೆ ಇಂದು ರಕ್ಷಣೆ ಇಲ್ಲದಾಗಿದೆ ಎಂದು ವಿಷಾದಿಸಿದರು.

ಗಾಂಧೀಜಿಯವರ ರಾಜಕೀಯ ನಿಲುವುಗಳು ಪ್ರಸ್ತುತತೆ ಕುರಿತು ಬೆಂಗಳೂರು ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ. ವೂಡೇ ಪಿ. ಕೃಷ್ಣ. ಮಾತನಾಡಿ, ಗಾಂಧೀಜಿಯವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಕೊಟ್ಟಿದ್ದರು. ಪ್ರಪಂಚ ಕಂಡ ಅತ್ಯದ್ಭುತ ಮಾನವತಾವಾದಿ ಗಾಂಧೀಜಿ. ಗಾಂಧೀಜಿಯವರು ಈ ದೇಶಕ್ಕೆ ಕೊಟ್ಟ ಕೊಡುಗೆ ಅಪಾರವಾದುದು. ಗಾಂಧೀಜಿಯವರ ಸೇವೆ

ಮತ್ತು ತ್ಯಾಗದ ಪ್ರತೀಕವಾಗಿದ್ದರು ಎಂದು ತಿಳಿಸಿದರು.

ಪ್ರಸ್ತುತ ಜಾತೀಯತೆ, ಮತೀಯ ಗಲಭೆ ಎಲ್ಲೆಲ್ಲೂ ತಾಂಡವವಾಡುತ್ತಿದೆ. ತಾಂತ್ರಿಕತೆಯ ಆದ್ಯತೆಯಿಂದ ಸಂಬಂಧಗಳು ಹಾಳಾಗುತ್ತಿವೆ. ಪ್ರಕೃತಿಯೊಂದಿಗಿನ ಸಂಬಂಧ ಕಳೆದು ಹೋಗುತ್ತಿದೆ. ಇಂದು ಶ್ರೀಮಂತಿಕೆ ಹಾಗೂ ಅಧಿಕಾರಕ್ಕೆ ಬೆಲೆಯೇ ಹೊರತು ಮೌಲ್ಯಗಳಿಗಲ್ಲ. ಎಂದರು.

ಗಾಂಧಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದ ಹಿರಿಯ ಸ್ವಾತಂತ್ರ್ಯಯೋಧ ವೈ.ಸಿ. ರೇವಣ್ಣ ಮಾತನಾಡಿ,

ಗಾಂಧೀ ತತ್ವದಂತೆ ನಮ್ಮ ದೇಶ ನಡೆಯುತ್ತಿಲ್ಲ. ಗಾಂಧೀಜಿಯವರು ತಂದುಕೊಟ್ಟ ಸ್ವರಾಜ್ಯವನ್ನು ನಾವು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ದುಂಡು ಮೇಜಿನ ಸಭೆ

ದುಂಡು ಮೇಜಿನ ಸಭೆಯ ಮಹತ್ವವನ್ನು ಕುರಿತು ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಪ್ರಪಂಚದ 182 ರಾಷ್ಟ್ರಗಳಲ್ಲಿ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಅನುಸರಿಸುತ್ತಿದ್ದಾರೆ. ಆದಕಾರಣ ಗಾಂಧೀಜಿಯವರ ಚಿಂತನೆಗಳು ಎಲ್ಲಾ ಕಾಲಕಾಲಕ್ಕೂ ಮೌಲಿಕವಾಗಿದೆ ಎಂಬುದನ್ನು ನಾವು ಮನಗಾಣಬಹುದು ಎಂದು ತಿಳಿಸಿದರು.

ಸರ್ಕಾರಿ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಜೆ.ಜಿ. ವಿಶ್ವನಾಥಯ್ಯ, ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್‌, ಎಂ.ಆರ್‌. ಸತ್ಯನಾರಾಯಣ, ಕೆ. ನರಸಿಂಹಮೂರ್ತಿ ಅವರು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ ಪ್ರಾಸ್ತಾವಿಕ ಭಾಷಣ ಮಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಚ್.ಎ. ಪೂರ್ಣಿಮಾ ಸ್ವಾಗತಿಸಿದರು. ವಿದ್ಯಾರ್ಥಿನಿ ಎಸ್‌. ದಿವ್ಯಾ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಸಿ.ಎಸ್‌. ತಾರಾ ವಂದಿಸಿದರು. ಚೂಡಾಣಿ ಗಾಂಧಿ ಸ್ಮೃತಿ ಪ್ರಸ್ತುತಪಡಿಸಿದರು. ನಟರಾಜ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿ.ಡಿ. ಸಂಧ್ಯಾರಾಣಿ ದೇಶಭಕ್ತಿಗೀತೆ ಹಾಡಿದರು.-- ಬಾಕ್ಸ್‌ 1--

ವಿದ್ಯಾರ್ಥಿನಿಯರ ಪ್ರಶ್ನೆಗಳು*ಇಂದಿನ ರಾಜಕಾರಣಿಗಳು ಮುಖವಾಡ ಧರಿಸಿ ಆಡಳಿತ ನಡೆಸುತ್ತಾರೆಯೇ?

* ಪ್ರಸ್ತುತ 21ನೇ ಶತಮಾನದಲ್ಲಿ ರಾಮರಾಜ್ಯ ಪರಿಕಲ್ಪನೆ ಸಾರ್ಥಕತೆಯನ್ನು ಪಡೆದಿದೆಯೇ?

* ಭಾರತದಲ್ಲಿ ನಿಜವಾದ ಸ್ಥಾನಮಾನ ಮಹಿಳೆಯರಿಗೆ ದೊರಕಿದೆಯೇ?

* ಇಂದಿನ ಪತ್ರಿಕೆಗಳು ಮಹಿಳೆಯರ ಮೇಲಿನ ದೌರ್ಜನ್ಯ ಕೇಸುಗಳನ್ನು ವೈಭವೀಕರಿಸುತ್ತಿವೆಯೇ?

* ಇಂದು ನಮ್ಮ ಭಾರತ ಸರ್ವೋದಯ ಭಾರತವಾಗಿದೆಯೇ?

* ಗಾಂಧೀಜಿಯನ್ನು ಎಡ ಪಂಥೀಯ ಮತ್ತು ಬಲಪಂಥೀಯ ಎಂದು ಹೇಳುವುದು ಎಷ್ಟು ಸಮರ್ಪಕ?

-----

-- ಬಾಕ್ಸ್ 2...

-- ಅರಿವು ಜಾಥಾ--

9 ಎಂವೈಎಸ್‌ 2

ಮೈಸೂರು ನ್ಯಾಯಾಲಯ ಎದುರಿನ ಗಾಂಧಿ ಪುತ್ಥಳಿ ಬಳಿ ಗಾಂಧೀಜಿ ಅರಿವು ಜಾಥಾಗೆ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಜೆ.ಸಿ. ಭಾಗ್ಯಾ ಚಾಲನೆ ನೀಡಿದರು. ಶ್ರೀ ಚಿದಾನಂದ ಸ್ವಾಮೀಜಿ, ಪ್ರೊ.ಎಸ್‌. ಶಿವರಾಜಪ್ಪ, ಡಾ.ಎಂ. ಶಾರದಾ, ಡಾ.ಜಿ. ಪ್ರಸಾದಮೂರ್ತಿ, ಎಚ್.ಎ. ಪೂರ್ಣಿಮಾ ಇದ್ದಾರೆ.

---

21ನೇ ಶತಮಾನದಲ್ಲಿ ಗಾಂಧೀಜಿ ಅರಿವು ಜಾಥಾವನ್ನು ನ್ಯಾಯಾಲಯ ಎದುರಿನ ಗಾಂಧಿ ಪುತ್ಥಳಿ ಬಳಿ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಜೆ.ಸಿ. ಭಾಗ್ಯ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ಗಾಂಧೀಜಿ ಪ್ರಪಂಚ ಕಂಡ ಅತ್ಯಂತ ಮಹಾನ್ ವ್ಯಕ್ತಿ. ಪ್ರತಿಯೊಬ್ಬ ತಂದೆ-ತಾಯಿ ತಮ್ಮ ಮಕ್ಕಳು, ವೈದ್ಯರು, ಎಂಜಿನಿಯರ್, ಐಎಎಸ್ ಅಧಿಕಾರಿಯಾಗಬೇಕೆಂದು ಬಯಸುತ್ತಾರೆ. ಯಾರೊಬ್ಬರು ನಮ್ಮ ಮಕ್ಕಳು ರಾಜಕಾರಣಿಯಾಗಬೇಕು ಎಂದು ಬಯಸುವುದಿಲ್ಲ. ಪ್ರಸ್ತುತ ದಿನಮಾನದಲ್ಲಿ ಉತ್ತಮ ವಿದ್ಯಾವಂತ ಯುವಕ, ಯುವತಿಯರು ರಾಜಕೀಯಕ್ಕೆ ಬಂದು ಗಾಂಧಿ ಮಾರ್ಗದಲ್ಲಿ ನಡೆದರೆ ದೇಶ ಅಹಿಂಸೆ ಮಾರ್ಗವಾಗಿ ಮುಂದುವರಿಯಲು ಸಾಧ್ಯ ಎಂದು ಹೇಳಿದರು.

ಶ್ರೀ ನಟರಾಜ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಚಿದಾನಂದ ಸ್ವಾಮಿಗಳು ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ. ಎಸ್. ಶಿವರಾಜಪ್ಪ, ಬೆಂಗಳೂರು ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ವೂಡೇ ಪಿ. ಕೃಷ್ಣ, ಪ್ರಾಂಶುಪಾಲೆ ಡಾ.ಎಂ.ಶಾರದ ಎಂ.ಶಾರದಾ, ಉಪ ಪ್ರಾಂಸುಪಾಲ ಡಾ. ಜಿ. ಪ್ರಸಾದಮೂರ್ತಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಚ್.ಎ. ಪೂರ್ಣಿಮಾ, ಸಹಾಯಕ ಪ್ರಾಧ್ಯಾಪಕಿ ಸಿ.ಎಸ್. ತಾರಾ, ಕಾಲೇಜಿನ ಅಧ್ಯಾಪಕರು, ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಜಾಥಾದಲ್ಲಿ ಭಾಗವಹಿಸಿದ್ದರು.