ಸಾರಾಂಶ
-ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ ಮಾಹಿತಿ-----ಕನ್ನಡಪ್ರಭ ವಾರ್ತೆ ಲಿಂಗಸುಗೂರು
ತಾಲೂಕಿನ ದೇವರಬುಪೂರ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರ ಜಮೀನಿನಲ್ಲಿನ ಬೆಳೆನಾಶ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮ ಕಂಡಿಸಿ ನಮ್ಮ ಭೂಮಿ ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ಅ.4ರಂದು ತಾಲೂಕಿನ ಗುರುಗುಂಟಾ ಅಮರೇಶ್ವರ ದೇವಸ್ಥಾನದ ವೃತ್ತದಿಂದ ದೇವರಬುಪೂರ ರೈತರ ಜಮೀನಿಗೆ ಜಾಥಾ ನಡೆಸಿ ಬೆಳೆನಾಶ ಮಾಡಿದ ಜಮೀನಿನಲ್ಲಿ ಸಸಿನೆಟ್ಟು ಪ್ರತಿಭಟನೆ ನಡೆಸಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ ತಿಳಿಸಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ಕಾರ ಬಂಡವಾಳಶಾಹಿಗಳಿಗೆ ಭೂಮಿ ನೀಡಲು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸರ್ಕಾರಿ, ಅರಣ್ಯ ಇಲಾಖೆ, ಪಾರಂಪೋಕ, ಕಂದಾಯ ವ್ಯಾಪ್ತಿಯ ಭೂಮಿ ಸಾಗುವಳಿ ಮಾಡುವ ರೈತರ ಜಮೀನುಗಳನ್ನು ವಶಕ್ಕೆ ಪಡೆಯಲು ಅರಣ್ಯ ಇಲಾಖೆ ಮೂಲಕ ಷಡ್ಯಂತ್ರ ರೂಪಿಸಿದೆ. ಅದರ ಭಾಗವಾಗಿ ತಾಲೂಕಿನ ದೇವರಬುಪೂರ ಗ್ರಾಮದ ಯರಡೋಣಾ ಶಿವಾರದ ಸರ್ವೆ ಸಂಖ್ಯೆ 32ರಲ್ಲಿ ಪಪ್ಪಾಯಿ ಬೆಳೆ ನಾಶ ಮಾಡಿ ರೈತರ ಮೇಲೆ ದೌರ್ಜನ್ಯ ಎಸಗಿದ್ದಾರೆ. ದೇವರಬುಪುರದ ಸರ್ವೆ ಸಂಖ್ಯೆ 29, 30, 32ರ ಅರಣ್ಯ ಭೂಮಿಯಲ್ಲಿ ಹಲವು ರೈತರು ಭೂಮಿ ಸಾಗುವಳಿ ಮಾಡುತ್ತಿದ್ದಾರೆ. ಆದರೆ ಅವರ ಭೂಮಿಯ ತಂಟೆಗೆ ಹೋಗದೆ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಷ್ಟ ಪಂಗಡಕ್ಕೆ ಸೇರಿದ ಬಡ ರೈತರ ಜಮೀನಲ್ಲಿನ ಬೆಳೆಹಾನಿ ಮಾಡಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮ ಖಂಡಿಸಿ ಅ.4ರಂದು ಅಮರೇಶ್ವರ ಕ್ರಾಸ್ನಿಂದ ಅರಣ್ಯ ಇಲಾಖೆ ಅಧಿಕಾರಿಗಳ ಬೆಳೆ ಕಿತ್ತು ಹಾಕಿದ ಜಮೀನಿನ ವರೆಗೆ ರೈತರೊಂದಿಗೆ ಜಾಥಾ ನಡೆಸಿ ಅದೇ ಜಮೀನಿನಲ್ಲಿ ಮರು ಸಸಿಗಳ ನೆಟ್ಟು ಭೂಮಿ ಸಾಗುವಳಿ ಮಾಡುತ್ತೇವೆ. ಅಂದಿನ ಜಾಥಾ ಹೋರಾಟದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ನೇಗಿಲು, ಟ್ಯಾಕ್ಟರ್, ಎತ್ತಿನ ಬಂಡಿಗಳೊಂದಿಗೆ ಜಾಥಾ ನಡೆಸಲಾಗುತ್ತದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ದುರ್ಗಾ ಪ್ರಸಾದ, ಕಾನೂನು ಸಲಹೆಗಾರ, ನ್ಯಾಯವಾದಿ ಕುಪ್ಪಣ್ಣ ಮಾಣಿಕ್, ದಸಸಂ ಮುಖಂಡ ಮಹಾದೇವಪ್ಪ ಪರಾಂಪುರ, ಆನಂದ ಕುಂಬಾರ, ಆದಪ್ಪ ದೇವರಬೂಪುರ ಇದ್ದರು. ------------------
29ಕೆಪಿಎಲ್ಎನ್ಜಿ01 ಶೀವಪುತ್ರಗೌಡ ನಂದಿಹಾಳ