ಸಾರಾಂಶ
ಮುಳಗುಂದ: ಶರಣ ಸಂಸ್ಕೃತಿಯ ಪಾವನ ತಾಣ ಮುಳಗುಂದದ ಕಾರಣಿಕ ಶಿಶು ಬಾಲಲೀಲಾ ಮಹಾಂತ ಶಿವಯೋಗಿಗಳ ೧೬೫ನೇ ಸ್ಮರಣೋತ್ಸವದಂಗವಾಗಿ ಜಾತ್ರಾ ಮಹೋತ್ಸವ ಫೆ. ೨೧ರಿಂದ ೨೩ರ ವರೆಗೆ ಗವಿಮಠಾಧ್ಯಕ್ಷರಾದ ಮಲ್ಲಿಕಾರ್ಜುನ ಶ್ರೀಗಳ ನೇತೃತ್ವದಲ್ಲಿ ಜರುಗುವುದು.
ಫೆ. ೨೧ರಂದು ಬೆಳಗ್ಗೆ ೯ಕ್ಕೆ ಷಟ್‌ಸ್ಥಲ ಧ್ವಜಾರೋಹಣವನ್ನು ಅಗಡಿ ಹಾಗೂ ಗುತ್ತಲದ ಪ್ರಭುಸ್ವಾಮಿ ಮಠದ ಗುರುಸಿದ್ಧ ಸ್ವಾಮೀಜಿಗಳು ನೆರವೇರಿಸುವರು. ಸಾನಿಧ್ಯವನ್ನು ಕಂಪ್ಲಿಯ ಕಲ್ಮಠದ ಅಭಿನವ ಪ್ರಭು ಸ್ವಾಮೀಜಿ ವಹಿಸುವರು. ಷಟ್‌ಸ್ಥಲ ನುಡಿ ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ಶ್ರೀಗಳು ನಡೆಸಿ ಕೊಡುವರು.ಸಂಜೆ ೭.೩೦ಕ್ಕೆ ಜಾತ್ರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಾನಿಧ್ಯವನ್ನು ಮರಗೋಡದ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ, ಸಮ್ಮುಖ ಗೋಕಾಕದ ಶೂನ್ಯಸಂಪಾದನಾ ಮಠದ ಮುರುಘೇಂದ್ರ ಸ್ವಾಮೀಜಿಗಳು ವಹಿಸುವರು. ಹಂಪಿ ವಿವಿಯ ಕುಲಪತಿ ಪರಮಶಿವಮೂರ್ತಿ ಕಾರ್ಯಕ್ರಮದ ಉದ್ಘಾಟಿಸುವರು. ಅರ್ಬನ್ ಬ್ಯಾಂಕ್ ಅಧ್ಯಕ್ಷ ಎಸ್.ಎಂ. ನೀಲಗುಂದ ಅಧ್ಯಕ್ಷತೆ ವಹಿಸುವರು. ಮುಖ್ಯ ಅಥಿತಿಗಳಾಗಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಗೌರಮ್ಮ ಬಡ್ನಿ ಆಗಮಿಸಿವರು. ನದಿ ಇಂಗಳಗಿಯ ಗುರುಲಿಂಗ ದೇವರಮಠದ ಸಿದ್ದಲಿಂಗ ಸ್ವಾಮೀಜಿ ಅವರು ಬೆಳೆಯುವ ಭೂಮಿಯಲ್ಲೊಂದು ಪ್ರಳಯದ ಕಸಹುಟ್ಟಿ ಎಂಬ ವಿಷಯ ಕುರಿತು ಉಪನ್ಯಾಸ ನೀಡುವರು.ಆನಂತರ ಧಾತ್ರೀ ರಂಗ ಸಂಸ್ಥೆ ಕಲಾವಿದರು ಅಭಿನಯಿಸುವ ಪೌರಾಣಿಕ ಹಾಸ್ಯ ನಾಟಕ ಶ್ರೀ ಕೃಷ್ಣ ಸಂಧಾನ ಹಾಗೂ ಅಕ್ಕನಾಗಲಾಂಬಿಕೆ ಧಾರ್ಮಿಕ ನಾಟಕ ಪ್ರದರ್ಶನ ನಡೆಯಲಿದೆ.
ಫೆ. ೨೨ರಂದು ಮಧ್ಯಾಹ್ನ ೧ಕ್ಕೆ ಮಹಾದಾಸೋಹ, ಸಂಜೆ ೫ಕ್ಕೆ ಸಕಲ ವಾದ್ಯ ವೈಭವಗಳೊಂದಿಗೆ ಶ್ರೀಬಾಲಲೀಲಾ ಮಹಾಂತ ಶಿವಯೋಗಿಗಳ ರಥೋತ್ಸವವು ಶ್ರೀಗಳ ಸಮ್ಮುಖದಲ್ಲಿ ಜರುಗುವುದು.ಸಂಜೆ ೭ಕ್ಕೆ ಜಾತ್ರಾ ಮಹೋತ್ಸವದ ವಿಶೇಷ ಕಾರ್ಯಕ್ರಮದ ಸಾನಿಧ್ಯವನ್ನು ಹಾಲಕೇರಿಯ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಸಮ್ಮುಖವನ್ನು ಇಳಕಲ್‌ದ ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ವಹಿಸುವರು. ಮುಖ್ಯಅತಿಥಿಗಳಾಗಿ ಮಾಜಿ ಸಚಿವ ಎಸ್.ಎಸ್.ಪಾಟೀಲ, ಅಗ್ನಿಶಾಮಕ ಹಾಗೂ ತುರ್ತುಸ್ಥಿತಿ ವಿಭಾಗದ ಡಿಆಯ್‌ಜಿ ರವಿ ಚನ್ನಣ್ಣವರ, ಮಹಾದೇವಪ್ಪ ಬಟ್ಟೂರ ಆಗಮಿಸುವರು, ಧಾರವಾಡ ಸಿಎಸ್‌ಐ ಕಾಲೇಜಿನ ಡಾ. ಶಂಭು ಹೆಗಡಾಳ ಅವರು ಉಪನ್ಯಾಸ ನೀಡುವರು. ನಿವೃತ್ತ ಸಂಗೀತ ಶಿಕ್ಷಕ ರೇವಣಸಿದ್ದಯ್ಯ ಮರಿದೇವರಮಠ ಅವರಿಂದ ವಚನ ಸಂಗೀತ ನಡೆಯುವುದು. ಆನಂತರ ಬಿಗ್‌ಬಾಸ್, ಕಾಮಿಡಿ ಕಿಲಾಡಿ ಖ್ಯಾತಿಯ ತುಕಾಲಿ ಸಂತು ಹಾಗೂ ತಂಡದವರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ.
ಫೆ. ೨೩ರಂದು ಸಂಜೆ ೫ ಕ್ಕೆ ಶ್ರೀಮಠದ ಮಲ್ಲಿಕಾರ್ಜುನ ಶ್ರೀಗಳಿಂದ ಕಡುಬಿನ ಕಾಳಗ, ಸಂಜೆ.೭ಕ್ಕೆ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಸಾನಿಧ್ಯವನ್ನು ಗಂಗಾವತಿಯ ಕಲ್ಮಠದ ಕೊಟ್ಟೂರೇಶ್ವರ ಸ್ವಾಮಿಗಳು, ಸಮ್ಮುಖ ಸವಣೂರಿನ ದೊಡ್ಡಹುಣಸೆ ಕಲ್ಮಠದ ಚನ್ನಬಸವ ಸ್ವಾಮಿಗಳು ವಹಿಸುವರು. ಕುಂದಗೋಳದ ಕಲ್ಯಾಣಪುರಮಠದ ಬಸವಣ್ಣಜ್ಜನವರಿಗೆ ಗುರುವಂದನೆ ನೆರವೇರಲಿದೆ. ಮುಖ್ಯ ಅತಿಥಿಗಳಾಗಿ ಗದಗ ಜಿಮ್ಸ್ ನಿರ್ದೇಶಕ ಬಸವರಾಜ ಬೊಮ್ಮನಹಳ್ಳಿ, ಬಿಜೆಪಿ ಗದಗ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಪಾಟೀಲ ಆಗಮಿಸುವರು. ಪ್ರಾಧ್ಯಾಪಕಿ ಡಾ. ಶಿವಗಂಗಾ ರಂಜಣಗಿ ಅವರು ಉಪನ್ಯಾಸ ನೀಡುವರು.ಸಂಗಮೇಶ ಪಾಟೀಲ ಅವರಿಂದ ವಚನ ಸಂಗೀತ. ಆನಂತರ ಅಪ್ಪಾಜಿ ಮೆಲೋಡಿಸ್ ಕುಡಗುಂಟಿ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.