ಸಾರಾಂಶ
ಮುಂಡಗೋಡ:ನೆಟ್ಟ ಗಿಡಗಳನ್ನು ನೀರು ಗೊಬ್ಬರ ಹಾಕಿ ಪೋಷಿಸದೆ ಇದ್ದರೆ, ಗಿಡಗಳು ಹೇಗೆ ಬಾಡುವುವೋ ಮಕ್ಕಳು ಕೂಡ ಹಾಗೆಯೇ ಅವರ ಸರ್ವತೋಮುಖ ಪೋಷಣೆ ಅತ್ಯಗತ್ಯವಾಗಿದ್ದು, ಮಕ್ಕಳ ಪೋಷಣೆಯಲ್ಲಿ ಹಿರಿಯರ ತ್ಯಾಗ ಅತ್ಯಮೂಲ್ಯವಾದದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ ಹೇಳಿದರು.
ಪಟ್ಟಣದ ಲೊಯೋಲಾ ವಿಕಾಸ ಕೇಂದ್ರ ಸಭಾಂಗಣದಲ್ಲಿ ಸಮುದಾಯ ಕಲಿಕಾ ಕೇಂದ್ರದ ಮಕ್ಕಳಿಗೆ ಮತ್ತು ಪಾಲಕರಿಗೆ ಶಿಕ್ಷಣ ಮತ್ತು ಸಂವಿಧಾನ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನನಿ ತಾನೇ ಮೊದಲ ಗುರು ಎಂಬಂತೆ ಹೆತ್ತವರ ಪಾತ್ರ ದೊಡ್ಡದು, ಮಕ್ಕಳ ಜೀವನ ಬದಲಾವಣೆಗೆ ಪಾಲಕರಾದವರು ಒಂದಿಷ್ಟು ಶ್ರಮವಹಿಸಬೇಕು, ಪ್ರತಿಯೊಂದು ಮಗುವು ಮೇಧಾವಿ (ಜಿನಿಯಸ್) ನಾವು ಅವರ ಪ್ರತಿಭೆ ಗುರುತಿಸಿ ಪೋಷಿಸಿ ಬೆಳೆಸಿದಾಗ ಮಾತ್ರ ಆ ಮಗು ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ, ಪ್ರತಿಯೊಂದು ಮಗುವಿನಲ್ಲಿ ಆಂತರಿಕ ರಚನಾ ಕೌಶಲ್ಯ ಸಾಮರ್ಥ್ಯವಿರುವುದರಿಂದ ಅವರಿಗೆ ಗುಣಮಟ್ಟದ ಶಿಕ್ಷಣದ ಅವಶ್ಯಕತೆ ಇದೆ, ಹುಟ್ಟಿನಿಂದ ಯಾವುದೇ ಮಗು ದಡ್ಡ ಅಲ್ಲ, ಒಂದು ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ೭ ಭಾಗಿದಾರರು ಅಂದರೆ ಮಗು, ಶಿಕ್ಷಕರು, ಪಾಲಕರು, ಸಮುದಾಯ, ಗ್ರಾಪಂ, ಸರ್ಕಾರಿ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಒಟ್ಟಾಗಿ ಸೇರಿದರೆ ಆಗ ಮಾತ್ರ ಶಾಲೆಯ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕ ಫಾದರ್ ಅನಿಲ್ ಡಿಸೋಜಾ ಮಾತನಾಡಿ, ಮಕ್ಕಳು ಮನೆಯಲ್ಲಿನ ಪೋಷಕರ, ಶಾಲೆಯಲ್ಲಿ ಶಿಕ್ಷಕರ ಮತ್ತು ಹಿರಿಯರ ಮಾತು ಕೇಳಬೇಕು ನಿಮ್ಮೆಲ್ಲರಲ್ಲಿ ದೊಡ್ಡ ವ್ಯಕ್ತಿಗಳಾಗುವ ಅವಕಾಶಗಳಿವೆ, ಮಾಜಿ ಜನಪ್ರಿಯ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಹೇಳಿದಂತೆ ಮೊದಲು ಕನಸು ಕಾಣಬೇಕು ಆ ಕನಸುಗಳು ಹೇಗಿರಬೇಕೆಂದರೆ, ಅವು ನನಸಾಗಲು ನಮಗೆ ನಿದ್ದೆ ಮಾಡಲು ಬಿಡಬಾರದು ಹಾಗೀರಬೇಕು, ಪಾಲಕರಾದವರು ಆ ಕನಸುಗಳು ನನಸಾಗಲು ಪ್ರೋತ್ಸಾಹ ನೀಡಬೇಕು, ನಾವು ಅವರಲ್ಲಿ ಜ್ಞಾನ ತುಂಬುವುದಲ್ಲ, ಅವರಲ್ಲಿನ ಜ್ಞಾನ ಹೊರ ತರಬೇಕೆಂದು ಕಿವಿಮಾತನ್ನು ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಲೊಕೇಶಗೌಡ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಂವಿಧಾನ ಕುರಿತು ಕ್ವಿಜ್ ರಸ ಪ್ರಶ್ನೆ, ಚಿತ್ರಕಲೆ ಸ್ಪರ್ಧೆ,ಫಜಲ್ ಆಟಗಳನ್ನು ನಡೆಸಲಾಯಿತು,ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು,ಅತಿವೇರಿಯ ಸೋನುಬಾಯಿ ಸಿದ್ದು ಸೆಳಕೆ,ಸುಳ್ಳಳ್ಳಿಯ ಎಸ್ ಡಿಎಂಸಿ ಅಧ್ಯಕ್ಷ ವಿನಯ ಶೇಖಪ್ಪ ಹುಡೆಲಕೊಪ್ಪ,ವಸತಿ ನಿಲಯಗಳ ಮೇಲ್ವಿಚಾರಕ ಬ್ರದರ್ ನೊಯಲ್ ಪ್ರಭು ಹಾಜರಿದ್ದರು, ಕಾರ್ಯಕ್ರಮದ ಕೊನೆಗೆ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ಮತ್ತು ಭಾಗವಹಿಸಿದ ಎಲ್ಲ ೪೫೦ ಮಕ್ಕಳಿಗೆ ಸ್ಕೂಲ್ ಬ್ಯಾಗ ಸಮೇತ ಕಲಿಕೋಪಕರಣಗಳನ್ನು ವಿತರಿಸಲಾಯಿತು. ಶಿವಪ್ಪ ಹುಡೆಲಕೊಪ್ಪ ನಿರೂಪಿಸಿದರು. ಭರಮಣ್ಣ ಚಕ್ರಸಾಲಿ ಸ್ವಾಗತಿಸಿದರು. ನಾಗರಾಜ ಕಟ್ಟಿಮನಿ ಸಂವಿಧಾನ ಪ್ರಸ್ತಾವನೆ ವಾಚಿಸಿದರು, ಮಂಗಳಾ ಮೋರೆ ವಂದಿಸಿದರು.