ಬಾಕಿ ಬಿಲ್ ಪಾವತಿಗಾಗಿ ಗ್ರಾಪಂ ಸದಸ್ಯೆ ಪ್ರತಿಭಟನೆ

| Published : Feb 19 2024, 01:36 AM IST

ಸಾರಾಂಶ

ಚನ್ನಪಟ್ಟಣ: ಎರಡು ವರ್ಷದಿಂದ ಗ್ರಾಮ ಪಂಚಾಯಿತಿಯಿಂದ ಬರಬೇಕಿರುವ ನರೇಗಾ ಹಾಗೂ ೧೫ನೇ ಹಣಕಾಸು ಯೋಜನೆಯ ೧೦ ಲಕ್ಷ ರು.ಗಳ ಬಿಲ್ ಅನ್ನು ಬಿಡುಗಡೆ ಮಾಡದೆ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಬೇವೂರು ಗ್ರಾಪಂ ಸದಸ್ಯೆ ಲತಾಮಣಿ ಹಾಗೂ ಅವರ ಬೆಂಬಲಿಗರು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಚನ್ನಪಟ್ಟಣ: ಎರಡು ವರ್ಷದಿಂದ ಗ್ರಾಮ ಪಂಚಾಯಿತಿಯಿಂದ ಬರಬೇಕಿರುವ ನರೇಗಾ ಹಾಗೂ ೧೫ನೇ ಹಣಕಾಸು ಯೋಜನೆಯ ೧೦ ಲಕ್ಷ ರು.ಗಳ ಬಿಲ್ ಅನ್ನು ಬಿಡುಗಡೆ ಮಾಡದೆ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಬೇವೂರು ಗ್ರಾಪಂ ಸದಸ್ಯೆ ಲತಾಮಣಿ ಹಾಗೂ ಅವರ ಬೆಂಬಲಿಗರು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರದೊಂದಿಗೆ ಪ್ರತಿಭಟನೆ ನಡೆಸಿದ ಲತಾಮಣಿ ಅವರು, ಗ್ರಾಪಂನಿಂದ ನನಗೆ ಬರಬೇಕಿರುವ ಬಾಕಿ ಬಿಲ್ ಹಣವನ್ನು ಕಳೆದ ಎರಡು ವರ್ಷಗಳಿಂದ ನೀಡದೇ ಸತಾಯಿಸಲಾಗುತ್ತಿದೆ. ಬಿಲ್ ಹಣ ಬಿಡುಗಡೆಗೆ ಗ್ರಾಪಂ ಅಧ್ಯಕ್ಷರು, ಪಿಡಿಒ ಹಾಗೂ ನರೇಗಾ ಇಂಜಿಯರ್ ಬಳಿ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನ್ಯಾಯಯುತವಾಗಿ ನನಗೆ ಬರಬೇಕಿರುವ ಬಿಲ್ ಹಣ ನೀಡಿಲ್ಲವಾದ್ದರಿಮದ ಪ್ರತಿಭಟನೆ ಅನಿವಾರ್ಯವಾಯಿತು ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಈಚೆಗೆ ನಡೆದ ಚುನಾವಣೆಯಲ್ಲಿ ನಾನು ಹಾಲಿ ಅಧ್ಯಕ್ಷರ ವಿರುದ್ಧ ಸ್ಪರ್ಧಿಸಿದ್ದೆ. ಈ ಕಾರಣದಿಂದಲೇ ನನ್ನ ಬಿಲ್ ಅನ್ನು ತಡೆ ಹಿಡಿದಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಪಿಡಿಒ ಸೂಕ್ತ ಉತ್ತರ ನೀಡುತ್ತಿಲ್ಲ. ಈ ಸಂಬಂಧ ಸಾಕಷ್ಟು ಮನವಿ ಮಾಡಿಕೊಂಡರು ನನಗೆ ನ್ಯಾಯ ಸಿಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ಪ್ರತಿಭಟನೆಯ ವಿಚಾರ ತಿಳಿದು ಕಚೇರಿಗೆ ಬಂದ ಅಧ್ಯಕ್ಷೆ ಮಂಗಳಗೌರಮ್ಮ ಹಾಗೂ ಪಿಡಿಒ ಹರ್ಷಗೌಡ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದರು. ಕೆಲವು ಸಣ್ಣಪುಟ್ಟ ಲೋಪಗಳಿಂದ ಬಿಲ್ ಮಾಡಲು ಆಗಿರಲಿಲ್ಲ. ಒಂದು ವಾರದೊಳಗೆ ನಿಮ್ಮ ಬಿಲ್ ಅನ್ನು ಬಿಡುಗಡೆ ಮಾಡಿಸುತ್ತೇವೆ ಎಂದು ಭರವಸೆ ನೀಡಿದ ಬಳಿಕ ಲತಾಮಣಿ ಮತ್ತು ಬೆಂಬಲಿಗರು ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ಗ್ರಾಮ ಮುಖಂಡರಾದ ಬಿ.ಪಿ.ಕೆಂಚೇಗೌಡ, ಶಿವರಂಜನ್, ಯೋಗೇಶ್, ತ್ಯಾಗರಾಜು, ಕನ್ನಸಂದ್ರ ಗುರು, ಸುರೇಂದ್ರ, ಅರುಣಾಚಲ ಇತರರು ಭಾಗವಹಿಸಿದ್ದರು.

ಪೊಟೋ೧೮ಸಿಪಿಟ೨:

ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಪಂ ಸದಸ್ಯೆ ಲತಾಮಣಿ ಹಾಗೂ ಅವರ ಬೆಂಬಲಿಗರು ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.