ಲೋಕಸಭೆ ಚುನಾವಣೆ, ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಸಿದ್ಧ : ಎಚ್‌.ಕೆ. ಪಾಟೀಲ

| Published : Feb 19 2024, 01:36 AM IST

ಲೋಕಸಭೆ ಚುನಾವಣೆ, ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಸಿದ್ಧ : ಎಚ್‌.ಕೆ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

೨೫ ಸಾವಿರ ಸ್ಮಾರಕಗಳು ಕರ್ನಾಟಕದಲ್ಲಿವೆ. ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ೨೦೨೪-೨೫ ಅಂತ್ಯದೊಳಗಡೆ ನಡೆಯಲಿದೆ

ಶಿರಸಿ:ಲೋಕ ಸಮರಕ್ಕೆ ಮೊದಲ ಹಂತವಾಗಿ ಗೆಲ್ಲುವ ಅಭ್ಯರ್ಥಿ ಪಟ್ಟಿ ಮಾಡಲಾಗಿದೆ. ಅದನ್ನು ರಾಷ್ಟ್ರ ಮತ್ತು ರಾಜ್ಯದ ಅಧ್ಯಕ್ಷರಿಗೆ ನೀಡಿದ್ದೇವೆ.‌ ಸರ್ವೇಯೂ ನಡೆದಿದೆ. ಸಚಿವರು, ಸ್ಥಳೀಯ ಶಾಸಕರ ಜತೆ ಮಾತನಾಡಿದ್ದೇನೆ. ಪಕ್ಷಕ್ಕೆ ಒಳ್ಳೆಯ ವಾತಾವರಣವಿದೆ. ಈ ಬಾರಿಯ ಉತ್ತರ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಭಾನುವಾರ ನಗರದಲ್ಲಿ ಮಾಧ್ಯಮದವರ ಜತೆ ಮಾತಮಾಡಿದರು.

ಕಾಸರಗೋಡಿನಿಂದ ಕಾರವಾರದ ವರೆಗೆ ೩೨೦ ಕಿಮೀ ಕಡಲತೀರವನ್ನು ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್‌ಶಿಪ್‌ನಲ್ಲಿ ಸಮಗ್ರ ಅಭಿವೃದ್ಧಿ ಚಿಂತನೆ ಮಾಡಿ ನಿರ್ಣಯ ಕೈಗೊಳ್ಳಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಮೂಲಕ ಮುಂದಿನ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದರು.

ಸಾಹಸಿ ಪ್ರವಾಸಿ ತಾಣಗಳ ಅಭಿವೃದ್ಧಿ ರೂಪಿಸಿ, ಕಾರ್ಯರೂಪಕ್ಕೆ ತರಲಾಗುತ್ತದೆ. ೨೦೨೪-೨೯ರ ಹೊಸ ಪ್ರವಾಸೋದ್ಯಮ ನೀತಿ ರೂಪಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಅಧ್ಯಯನಕ್ಕೆ ಶಿಫಾರಸು ಮಾಡಲು ಪ್ರೊ. ಬೀರಣ್ಣ ನಾಯಕ ಮೊಗಟಾ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಲಾಗಿದ್ದು, ೩ ತಿಂಗಳ ಒಳಗಡೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ೨೫ ಸಾವಿರ ಸ್ಮಾರಕಗಳು ಕರ್ನಾಟಕದಲ್ಲಿವೆ. ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ೨೦೨೪-೨೫ ಅಂತ್ಯದೊಳಗಡೆ ನಡೆಯಲಿದೆ. ೨೦೦ ಸ್ಮಾರಕಗಳನ್ನು ದತ್ತು ನೀಡಿ, ಖಾಸಗಿ ಕ್ಷೇತ್ರದ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ. ಐಹೊಳೆ ದುರಸ್ತಿ ಮಾಡಿ, ಆಕರ್ಷಣೆಯ ಮತ್ತು ಅಧ್ಯಯನ ವಸ್ತುಗಳನ್ನಾಗಿ ಮಾಡಲು ಡಾ. ಡಿ. ವೀರೇಂದ್ರ ಹೆಗ್ಗಡೆ ಜತೆ ಮಾತುಕತೆ ಮಾಡುತ್ತಿದ್ದೇನೆ. ೧೦೦ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡಲಾಗುತ್ತದೆ ಎಂದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತಮ, ಪ್ರಯೋಜನಕಾರಿ, ಬಡವರ ಪರವಾಗಿ ಬಜೆಟ್ ಮಂಡಿಸಿದೆ. ಸಹಜವಾಗಿ ವರ್ಷದಿಂದ ವರ್ಷಕ್ಕೆ ಬಜೆಟ್‌ ಗಾತ್ರ ಹೆಚ್ಚಾಗುತ್ತದೆ. ಈ ವರ್ಷದ ಬಜೆಟ್ ₹೩.೭೦ ಲಕ್ಷ ಕೋಟಿ ಗಾತ್ರ ಹೊಂದಿದ್ದು, ರಾಷ್ಟ್ರದಲ್ಲಿ ಬಡವರಿಗೆ ದೊಡ್ಡ ಕೆಲಸ ಮಾಡಿದರೆ ರಾಜ್ಯ ಸರ್ಕಾರ ದಿವಾಳಿಯಾಗುತ್ತದೆ ಎಂಬ ಟೀಕೆ ಪ್ರಧಾನಿ ಬಾಯಿಂದ ಬರಲು ಪ್ರಾರಂಭವಾಗಿತ್ತು. ಉಚಿತ ಯೋಜನೆಯಿಂದ ರಾಜ್ಯ ಸರ್ಕಾರ ಹೇಗೆ ನಡೆಯುತ್ತದೆ ಎಂಬ ಚರ್ಚೆ ನಡೆದಿತ್ತು. ಈ ನಡುವೆ ಚುನಾವಣಾ ಪೂರ್ವದಲ್ಲಿ ೫ ಗ್ಯಾರಂಟಿ ಘೋಷಣೆ ಮಾಡಿ, ಈಡೇರಿಸಲಾಗಿದೆ ಎಂದರು.

ರಾಜ್ಯದಲ್ಲಿ ೧.೧೦ ಕೋಟಿ ಕುಟುಂಬವನ್ನು ಬಡತನದಲ್ಲಿದ್ದ ಕುಟುಂಬಗಳಿಗೆ ಬಡತನ ರೇಖೆಗಿಂತ ಮೇಲೆತ್ತುವ ಕಾರ್ಯಕ್ರಮ ಕರ್ನಾಟಕದಲ್ಲಿ ಮೊಟ್ಟಮೊದಲು ಜಾರಿಗೊಂಡಿದೆ. ಸೂಕ್ಷ್ಮವಾಗಿ ಗಮನಿಸದೇ ರಾಜಕೀಯ ಬೆರೆಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಫಲಾನುಭವಿಗಳು ಬಹಳ ಪ್ರಯೋಜನ ಪಡೆದುಕೊಳ್ಳುತ್ತಾರೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಶೇ. ೯೯.೬೪, ಗೃಹಜ್ಯೋತಿ ಯೋಜನೆಯಲ್ಲಿ ಶೇ. ೯೭ ಪ್ರಯೋಜನ ಪಡೆದುಕೊಂಡಿದ್ದಾರೆ. ಅಕ್ಕಿ ಜತೆ ಇತರ ಪದಾರ್ಥ ಪಡೆದುಕೊಳ್ಳಲು ಅವಕಾಶ ಸಿಕ್ಕಿದೆ. ಚುನಾವಣಾ ಪೂರ್ವದಲ್ಲಿ ನೀಡಿದ ಆಶ್ವಾಸನೆಯು ಅನುಷ್ಠಾನವಾಗಿದೆ ಎಂದರು.

ಈ ಬಾರಿ ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರ, ಬಡವರು, ಸಾಮಾನ್ಯ ಪ್ರವಾಸಿಗರು ಭೇಟಿ ನೀಡುವ ಪ್ರವಾಸಿ ತಾಣಗಳನ್ನು ಹೆಚ್ಚು ಅಭಿವೃದ್ಧಿ ಮಾಡುವುದು ನಮ್ಮ ಮುಖ್ಯ ಗುರಿಯಾಗಿದೆ. ರೇಣುಕಾ ಯಲ್ಲಮ್ಮ, ಹುಬ್ಬಳ್ಳಿಯ ನೃಪತುಂಗ ಬೆಟ್ಟ, ಅಂಜನಾದ್ರಿ, ಯಾದಗಿರಿ, ಗಜೇಂದ್ರಗಡ ಸೇರಿದಂತೆ ಒಟ್ಟೂ ೧೦ ಸ್ಥಳಗಳಲ್ಲಿ ಕೇಬರ್ ಕಾರ್ (ರೋಪ್ ವೇ) ಮಾಡಲಾಗುತ್ತದೆ ಎಂದರು. ಟಿಆರ್‌ಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ, ಪ್ರಮುಖರಾದ ಎಸ್.ಕೆ. ಭಾಗ್ವತ್ ಮತ್ತಿತರರು ಇದ್ದರು.