ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ತಾಲೂಕಿನ ಜಡೆ ಮಠದ ಶ್ರೀ ಸಿದ್ಧವೃಷಭೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ ಮತ್ತು ಶಿಲಾಮಠದ ಲೋಕಾರ್ಪಣೆ, ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ಮತ್ತು ಡಾ. ಮಹಾಂತ ಮಹಾಸ್ವಾಮಿಗಳ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮ ಫೆ.21ರಿಂದ 24ರವರೆಗೆ ಮಠದ ಆವರಣದಲ್ಲಿ ಜರುಗಲಿದೆ.21ರ ಮುಂಜಾನೆ ಕತೃಗದ್ದುಗೆಗೆ ಮಹಾರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ಜಂಗಮ ಪೂಜೆ. ಬೆಳಗ್ಗೆ 8.23ಕ್ಕೆ ಹಾರನಹಳ್ಳಿ ಕೋಡಿ ಮಠದ ಶಿವಾನಂದ ರಾಜಯೋಗೇಂದ್ರ ಶ್ರೀಗಳ ಲಿಂಗಹಸ್ತದಿಂದ ಮಠದ ಉತ್ತರಾಧಿಕಾರಿ ರುದ್ರದೇವರು ಹಾಗೂ ಅರಕೇರಿ ವಿರಕ್ತಾಶ್ರಮದ ಉತ್ತಾಧಿಕಾರಿ ಸಿದ್ಧಲಿಂಗ ದೇವರಿಗೆ ಚಿನ್ಮಯಾನುಗ್ರಹ ನೀಡಿ, ರುದ್ರದೇಶಿಕರು ಹಾಗೂ ಸಿದ್ದಲಿಂಗ ದೇಶಿಕರು ಎಂದು ನಾಮಕರಣ ಮಾಡುವರು. 10.30ಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅವರಿಂದ ಜಗದ್ಗುರು ಕುಮಾರ ಕೆಂಪಿನ ಸಿದ್ದವೃಷಭೇಂದ್ರ ಶಿವಯೋಗಿಗಳ ಕರ್ತೃ ಗದ್ದುಗೆಯ ಶಿಲಾಮಠ ಲೋಕಾರ್ಪಣೆ ಮಾಡುವರು.
ಫೆ.22ರಂದು ನೂತನ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವವು ಕುಂಭೋತ್ಸವದೊಂದಿಗೆ ಸಕಲ ವಾದ್ಯ ವೈಭವಗಳೊಂದಿಗೆ ಜಡೆ ಪಟ್ಟಣದ ರಾಜಬೀದಿಯಲ್ಲಿ ಸಂಚರಿಸಿ, ಶ್ರೀ ಮಠಕ್ಕೆ ತಲುಪಲಿದೆ. ಸಂಜೆ ಧರ್ಮಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಶಾಸಕ ಅರಗ ಜ್ಞಾನೇಂದ್ರ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಕುಮಾರ ಬಂಗಾರಪ್ಪ ಭಾಗವಹಿಸುವರು.23ರಂದು ಮೈಸೂರು ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಶ್ರೀ ಸಾನ್ನಿಧ್ಯದಲ್ಲಿ ಡಾ. ಮಹಾಂತಸ್ವಾಮಿಗಳ ಪಟ್ಟಾಧಿಕಾರದ ರಜತ ಮಹೋತ್ಸವ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ, ಶಾಸಕ ಭೀಮಣ್ಣ ನಾಯ್ಕ, ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ, ಕೆ.ಎಂ.ಎಫ್. ಅಧ್ಯಕ್ಷ ಶ್ರೀಪಾದ ಹೆಗಡೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗಹಿಸುವರು.
ಫೆ.24ರಂದು ತೊಗರ್ಸಿ ಮಳೆ ಹಿರೇಮಠದ ಮಹಾಂತ ದೇಶಿಕೇಂದ್ರ ಶಿವಾಚಾರ್ಯರು ಮತ್ತು ಗುರುಬಸವ ಪಂಡಿತಾರಾದ್ಯ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಶಿವದೀಕ್ಷಾ ಕಾರ್ಯಕ್ರಮ. ಶ್ರೀ ಸಿದ್ಧವೃಷಭೇಂದ್ರ ಮಹಾಶಿವಯೋಗಿಗಳ ಮಹಾರಥೋತ್ಸವ ಜರುಗುವುದು. ಹರಕೆ ಸಮರ್ಪಣೆ ಮತ್ತು ತುಲಾಭಾರ ನಡೆಯಲಿದೆ. ಬಸವ ತತ್ವದ ಪ್ರತಿಬಿಂಬ ಜಡೆ ಮಠ: ಸೊರಬ ತಾಲೂಕಿನ ಜಡೆ ಗ್ರಾಮದ ಶರಣ ಶ್ರೀ ಸಿದ್ಧವೃಷಭೇಂದ್ರ ಬಸವಯೋಗಿಯವರ ವಿರಕ್ತ ಮಠವು ಲಿಂಗಾಯತ ಧರ್ಮದ ವಿರಕ್ತ ಪರಂಪರೆಯ ಮಠವಾಗಿದೆ. ಶರಣ ಸಿದ್ಧವೃಷಭೇಂದ್ರ ಬಸವಯೋಗಿ ಅವರು ಜಡೆ ಗ್ರಾಮದಲ್ಲಿದ್ದ ವೈದಿಕ ಮತ್ತು ಮೌಢ್ಯಾಚರಣೆಗಳಿಗೆ ಕಡಿವಾಣ ಹಾಕಿ, ಬಸವ ತತ್ವಗಳನ್ನು ಜನರಿಗೆ ಬೋಧಿಸುತ್ತ ಲಿಂಗೈಕ್ಯರಾಗಿದ್ದಾರೆ. ಅವರ ಗದ್ದುಗೆಯು ಕರ್ನಾಟಕದ ಅತಿದೊಡ್ಡ ನಿರ್ವಿಕಲ್ಪ ಸಮಾಧಿಯಾಗಿದೆ.ಮಠವು ಕೆಳದಿ ಅರಸರಿಂದ ರಾಜಮನ್ನಣೆ ಪಡೆದು, ಅರಸರಿಗೆ ಆಶೀರ್ವಾದ ಮಾಡಿದ ರಾಜಗುರು ಪೀಠ. ಬಸವಾದಿ ಶರಣರ ತತ್ವಗಳೊಂದಿಗೆ ಮಲೆನಾಡಿನ ಜಾಗೃತ ಪೀಠವಾಗಿದೆ. ಶ್ರೀಮಠದ 11 ಜನ ಪೀಠಾಧಿಪತಿಗಳು ಧರ್ಮ ಸಂಸ್ಕೃತಿಯನ್ನು ಹಾಗೂ ಧಾರ್ಮಿಕ ನೆಲೆಗಟ್ಟನ್ನು ಗಟ್ಟಿಗೊಳಿಸಿದ್ದಾರೆ.
ಮಠದ ಕೀರ್ತಿ ಹೆಚ್ಚಿಸಿದ ಡಾ. ಮಹಾಂತ ಶ್ರೀ:ಶ್ರೀ ಕುಮಾರಪ್ರಭು ಮಹಾಸ್ವಾಮಿಗಳಿಂದ ಅಧಿಕಾರ ಪಡೆದ 12ನೇ ಪೀಠಾಧಿಪತಿಗಳಾದ ಡಾ. ಮಹಾಂತ ಸ್ವಾಮಿಗಳು ಸಾಮಾಜಿಕ, ಶೈಕ್ಷಣಿಕ ಧಾರ್ಮಿಕ, ಸಾಂಸ್ಕೃತಿಕವಾಗಿ ಮಠದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಖ್ಯಾತ ಯೋಗ ಪಟು, ಶಿವಯೋಗ ಸಾಧಕರು, ಶಿವಾನುಭವ ಚರಮೂರ್ತಿಗಳು. ಸರಳ, ಸಾತ್ವಿಕ ನಡೆ-ನುಡಿಯೊಂದಿಗೆ ಭಕ್ತವತ್ಸಲರು. ಸುಸಜ್ಜಿತ ಶ್ರೀ ಮಠ ಕಟ್ಟುವುದರೊಂದಿಗೆ ಭಕ್ತರ ಮನಸ್ಸನ್ನೂ ಕಟ್ಟಿದ್ದಾರೆ. ಆಚಾರ, ವಿಚಾರಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಿದ್ದಾರೆ. ಅವರ ಅವಧಿ ಶ್ರೀಮಠದ ಸುವರ್ಣಯುಗವೇ ಸರಿ.
ರುದ್ರದೇವರು ಭರವಸೆಯ ಯುವ ಯತಿಗಳು:ನಿಯೋಜಿತ ಪೀಠಾಧಿಪತಿ ಶ್ರೀ ರುದ್ರದೇವರು ನಯ, ವಿನಯ, ಸಂಪನ್ನರು. ಶಿಸ್ತು, ಸೌಜನ್ಯ, ಪ್ರತಿಭೆ, ಪಾಂಡಿತ್ಯದ ಸಾಕಾರ ಮೂರ್ತಿಗಳು. ಜಡೆಯ ಶ್ರೀಮಠ, ಶ್ರೀ ಶಿವಯೋಗ ಮಂದಿರ, ಮೈಸೂರು ಶ್ರೀ ಸುತ್ತೂರು ಮಠ ಮುಂತಾದ ಕಡೆ ಅಧ್ಯಯನಗೈದ ಸಾತ್ವಿಕ ಸಾಧಕರು. ಗುರು ಸೇವಾ ಸಂಪನ್ನರು. ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶ್ರೀ ಮಠದ ಅಧಿಕಾರ ವಹಿಸಿಕೊಳ್ಳಲಿರುವ ರುದ್ರದೇವರು ಜನಜಾಗೃತಿ, ಲಿಂಗದೀಕ್ಷೆ ಅಭಿಯಾನ, ವ್ಯಸನಮುಕ್ತ ಸಮಾಜ ನಿರ್ಮಾಣ, ಶರಣ ತತ್ವಪ್ರಸಾರ, ಹಳ್ಳಿಗೆ ಏಕರಾತ್ರಿ, ಪಟ್ಟಣಕ್ಕೆ ಪಂಚ ರಾತ್ರಿ ಸಂಚರಿಸಿ ನಾಡ ನಾಡಿಗರಿಗೆ ಸಂಸ್ಕಾರ ಬಿತ್ತುವ ಕಾಯಕ ಹಾಗೂ ಧರ್ಮ ಪ್ರಸಾರ ಕೈಗೊಳ್ಳುವ ಭರವಸೆಯ ಯುವ ಯತಿಗಳಾಗಲಿ ಎಂಬುದು ಭಕ್ತರು, ಸಮಾಜದ ಆಶಯ.
- - - -20ಕೆಪಿಸೊರಬ01: ಸೊರಬ ತಾಲೂಕಿನ ಸಂಸ್ಥಾನ ಮಠ ಜಡೆ.