ರಾಯಣ್ಣನ ಕ್ರಾಂತಿಯ ನೆಲದಲ್ಲಿ ಜಟ್ಟಿಗಳ ಸೆಣಸಾಟ

| Published : Jan 14 2025, 01:02 AM IST

ಸಾರಾಂಶ

ಕ್ರಾಂತಿವೀರ ಶೂರ ಸಂಗೊಳ್ಳಿ ರಾಯಣ್ಣ ಉತ್ಸವ ನಿಮಿತ್ತ ಸಂಗೊಳ್ಳಿ ಗ್ರಾಪಂ ಆವರಣದಲ್ಲಿ ನಡೆದ ಸೋಮವಾರ ನಡೆದ ಪುರುಷರ ಹಾಗೂ ಮಹಿಳೆಯರ ಹೊನಲು ಬೆಳಕಿನ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಜಂಗೀ ನಿಖಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಜಟ್ಟಿಗಳ ಹೋರಾಟ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಕ್ರಾಂತಿವೀರ ಶೂರ ಸಂಗೊಳ್ಳಿ ರಾಯಣ್ಣ ಉತ್ಸವ ನಿಮಿತ್ತ ಸಂಗೊಳ್ಳಿ ಗ್ರಾಪಂ ಆವರಣದಲ್ಲಿ ನಡೆದ ಸೋಮವಾರ ನಡೆದ ಪುರುಷರ ಹಾಗೂ ಮಹಿಳೆಯರ ಹೊನಲು ಬೆಳಕಿನ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಜಂಗೀ ನಿಖಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಜಟ್ಟಿಗಳ ಹೋರಾಟ ಗಮನ ಸೆಳೆಯಿತು.

ಕಣದಲ್ಲಿ ಪೈಲ್ವಾನರು ಮದಗಜಗಳಂತೆ ಕಾದಾಡಿದರು. ಸಹಸ್ರಾರು ಪ್ರೇಕ್ಷಕರು ಅಪಾರ ಸಂಖ್ಯೆಯ ಕುಸ್ತಿಪಟುಗಳು ಸಿಳ್ಳೆ, ಕೇಕೆ ಹಾಕಿ, ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

ಪುರುಷರ ವಿಭಾಗ: ಮೊದಲ ಜೋಡಿ ಕುಸ್ತಿಯಲ್ಲಿ ಮಹಾರಾಷ್ಟ್ರ ಪೈಲ್ವಾನ್‌ ಬಾಲಾಜಿ ಮೆಟಕರ ಹಾಗೂ ಹರಿಯಾಣ ಪೈಲ್ವಾನ್‌ ವಿಪಿನ್ ದಹಿಯಾ ನಡುವೆ ತುರಿಸಿನ ಕಾದಾಟ ನಡೆದು ದಹಿಯಾ ವಿಜಯದ ನಗೆ ಬೀರಿದರು. ಎರಡನೇ ಜೋಡಿ ಕುಸ್ತಿಯಲ್ಲಿ ಪಂಜಾಬನ ಪೈಲ್ವಾನ್‌ ಸತ್ವಲ್ ಸಿಂಗ್ ಜೊತೆ ಸೆಣಸಿದ ಹಾವೇರಿಯ ಕರ್ನಾಟಕ ಕೇಸರಿ ಪೈಲ್ವಾನ್‌ ಕಾರ್ತಿಕ ಕಾಟೆ ವಿಜಯದ ನಗೆ ಬೀರಿದರು. ಮೂರನೇ ಜೋಡಿ ಕುಸ್ತಿಯಲ್ಲಿ ಮಹಾರಾಷ್ಟ್ರದ ಅಭಿಜಿತ ದೇವಕಾಟೆ ಅವರನ್ನು ಧಾರವಾಡ ಪೈಲ್ವಾನ್‌ ನಾಗರಾಜ ಬಸಿಡೋಣಿ ಚಿತ್‌ ಮಾಡಿದರು. ನಾಲ್ಕನೇ ಜೋಡಿ ಕುಸ್ತಿಯಲ್ಲಿ ಉತ್ತರ ಪ್ರದೇಶ ಉದಯಕುಮಾರ ಅವರನ್ನು ಬೆಳಗಾವಿ ದಸರಾ ಕೇಸರಿ ಶಿವಯ್ಯ ಪೂಜೇರಿ ನೆಲಕ್ಕುರುಳಿಸಿದರು. ಐದನೇ ಜೋಡಿಯಲ್ಲಿ ದಾವಣಗೆರೆ ಬಸವರಾಜ ಪಾಟೀಲ ಹಾಗೂ ಕಂಗ್ರಾಳಿಯ ಪರುಶಾಮ ಜಾಧವ ಮಧ್ಯೆ ತೀವ್ರ ಸೆಣಸಾಟ ನಡೆದು ಸಮಬಲವಾಯಿತು. ಆರನೇ ಜೋಡಿಯಲ್ಲಿ ಸಾಂಗ್ಲಿಯ ವಾಸೀಮ್ ಪಠಾಣ ಜೊತೆ ಸೆಣಸಿದ ಕಂಗ್ರಾಳಿಯ ಕಾಮೇಶ ಪಾಟೀಲ ಗೆಲುವಿನ ನಗೆ ಬೀರಿದರು. ಪುರುಷ ವಿಭಾಗದಲ್ಲಿ ಒಟ್ಟು 33 ಜೋಡಿಗಳು ಸೆಣಸಿದವು.

ಮಹಿಳಾ ವಿಭಾಗ: ಮಹಿಳಾ ಕುಸ್ತಿಯಲ್ಲಿ ಮಹಾರಾಷ್ಟ್ರದ ಮಯೂರಿ ಸಾಲೂಂಕೆ ವಿರುದ್ಧ ಹಳಿಯಾಳದ ಪ್ರತೀಕ್ಷಾ ಭೋವಿ ಗೆಲುವು ಸಾಧಿಸಿದರು. ಎರಡನೇ ಜೋಡಿಯಲ್ಲಿ ಬೆಳಗಾವಿಯ ರಾಧಿಕಾ ತೊಂಡಿಹಾಲ, ಮಹಾರಾಷ್ಟ್ರದ ಸ್ಮಿತಾ ಪಾಟೀಲ ಹಾಗೂ ಮೂರನೇ ಜೋಡಿಯ ಧಾರವಾಡದ ಕಾವ್ಯಾ ದಾನನ್ನವರ ಜೊತೆ ಖಾನಾಪುರದ ರುತೂಜಾ ಗುರವ ಸಮಬಲ ಸಾಧಿಸಿದರು. ನಾಲ್ಕನೇ ಜೋಡಿಯಲ್ಲಿ ಹಳ್ಳಿಯಾಳದ ಗಂಗೋತ್ರಿ ವಿರುದ್ಧ ಸೆಣಸಾಡಿದ ಧಾರವಾಡದ ಪುಪ್ಪ ಗೆಲುವು ಸಾಧಿಸಿದರು. ಐದನೇ ಜೋಡಿಯಲ್ಲಿ ಬೆಳಗಾವಿ ಸಿತಾಲ್ ಸುತಾಳನ್ನು ಮುಧೋಳದ ಭಾಗ್ಯಶ್ರೀ ಚಿತ್‌ ಮಾಡಿದರು.

ಶಾಸಕ ಮಹಾಂತೇಶ ಕೌಜಲಗಿ ಪಂದ್ಯಾವಳಿಗೆ ಚಾಲನೆ ನೀಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಶ್ರೀನಿವಾಸ, ತಹಸೀಲ್ದಾರ ಎಚ್.ಎನ್. ಶಿರಹಟ್ಟಿ, ತಾಪಂ ಇಒ ಕಿರಣ ಘೋರ್ಪಡೆ, ಪಿಎಸ್‌ಐ ಎಫ್.ವೈ. ಮಲ್ಲೂರ, ಗ್ರಾಪಂ ಅಧ್ಯಕ್ಷೆ ರೂಪಾ ಚಚಡಿ, ಉಪಾಧ್ಯಕ್ಷ ಫಕ್ಕೀರಪ್ಪ ಕುರಿ ಸೇರಿದಂತೆ ಗಣ್ಯರು, ಗಣ್ಯರು, ಕುಸ್ತಿಪ್ರೇಮಿಗಳು ಉಪಸ್ಥಿತದ್ದರು.