ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರುಜಿಲ್ಲೆ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಹೆಚ್ಚುವರಿ ಭೂಮಿ ಹಂಚಿಕೆ ವಿಚಾರದಲ್ಲಿ ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯವಾಗಿದ್ದು, ಈ ಕುರಿತು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಬಳಿಗೆ ನಿಯೋಗ ತೆಗೆದುಕೊಂಡು ಹೋಗಲು ತೀರ್ಮಾನಿಸಲಾಗಿದೆ ಎಂದು ಸಿಪಿಐ (ಎಂಎಲ್) ರೆಡ್‌ಸ್ಟಾರ್ ಪಾಲಿಟ್ ಬ್ಯುರೋ ಸದಸ್ಯ ಆರ್.ಮಾನಸಯ್ಯ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 45 ವರ್ಷಗಳಿಂದ ಹೆಚ್ಚುವರಿ ಭೂ ಪ್ರಕರಣ ಸಾಗಿದೆ, ರಾಜ್ಯದಲ್ಲಿ ಭೂ ಸುಧಾರಣೆ ಜಾರಿಗೊಳಿಸಿರುವ ಕಾಂಗ್ರೆಸ್ ಸರ್ಕಾರದಿಂದಲೇ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದೀಗ ಸರ್ಕಾರ ರಚಿಸಿರುವ ಭೂ ನ್ಯಾಯಮಂಡಳಿಯಿಂದಲೂ ಸಹ ಏನು ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಹೋರಾಟವನ್ನು ಚುರುಕುಗೊಳಿಸಲಾಗುತ್ತಿದೆ ಎಂದರು. ಜವಳಗೇರಾದ ಸಿದ್ದಲಿಂಗಮ್ಮ ಗಂಡ ವೆಂಕಟರಾವ್ ಸೇರಿದ 1064 ಎಕರೆ ಭೂಮಿ ಹೆಚ್ಚುವರಿಯಂತೆ 1981ರಲ್ಲಿಯೇ ಘೋಷಿಸಲಾಗಿದೆ. ಸಿದ್ದಲಿಂಗಮವರಿಗೆ ಮಕ್ಕಳೇ ಇಲ್ಲ. ವಾರಸುದಾರರೂ ಅಲ್ಲದೇ ಇದ್ದರೂ ರುದ್ರಭೂಪಾಲ ನಾಡಗೌಡ, ವೆಂಕಟರಾವ್ ನಾಡಗೌಡ ಹಾಗೂ ರಾಜಶೇಖರ ನಾಡಗೌಡ ಅವರು ಅಕ್ರಮವಾಗಿ ತಮ್ಮ ಮಕ್ಕಳ ಹೆಸರಿನಲ್ಲಿ ಆಸ್ತಿ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.1981ರಲ್ಲಿಯೇ ಸಿದ್ದಲಿಂಗಮ್ಮನ ವಾರಸುದಾರರೆಂದು ಹೇಳಿಕೊಂಡವರು ಹೈಕೋರ್ಟ್ ಮೋರೆ ಹೋಗಿದ್ದರು. ಇಡಿ ಪ್ರಕರಣವನ್ನು ಮರು ವಿಚಾರಣೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಅದರೆ 1981 ರಿಂದ 2025 ವರೆಗೆ 44 ವರ್ಷಗಳ ಪೂರ್ಣಗೊಂಡರೂ ಭೂ ನ್ಯಾಯ ಮಂಡಳಿ ಪ್ರಕರಣದ ವಿಚಾರಣೆಯನ್ನೂ ನಡೆಸಿಲ್ಲ ಎಂದು ದೂರಿದರು.ಆರು ತಿಂಗಳ ಕಾಲ ಭೂಮಿ ಹಂಚಿಕೆ ಆಗ್ರಹಿಸಿ ಹೋರಾಟ ನಡೆಸಲಾಗಿತ್ತು. ಸಿಎಂ, ಶಾಸಕರಿಗೂ ಮನವಿ ಮಾಡಲಾಗಿದೆ ಅಷ್ಟೇ ಅಲ್ಲದೇ ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೂ ನ್ಯಾಯ ಮಂಡಳಿ ರಚಿಸಿ ಪ್ರಕರಣ ಇತ್ಯರ್ಥಗೊಳಿಸುವುದಾಗಿ ಹುಸಿ ಭರವಸೆ ನೀಡಿದ್ದಾರೆ. ಭೂ ನ್ಯಾಯ ಮಂಡಳಿ ರಚನೆಯಾಗಿದ್ದು ಹೆಚ್ಚುವರಿ ಭೂಮಿ ಸಂಬಂಧವೇ ಇಲ್ಲದವ ಕೈವಶದಲ್ಲಿದ್ದು ತೆರವುಗೊಳಿಸಿ ಭೂ ರಹಿತರಿಗೆ ಹಂಚಿಕೆ ಮಾಡಬೇಕು. ಈ ಬಗ್ಗೆ ನಿರ್ಲಕ್ಷ್ಯವಹಿಸಿದರೆ, ಪುನಃ ಭೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಮುಖಂಡರಾದ ಎಂ.ಗಂಗಾಧರ, ಜಿ.ಅಮರೇಶ, ಆದೇಶ ಕುಮಾರ, ಸಂತೋಷ ಹೀರೆದಿನ್ನಿ ಇದ್ದರು.