ಸಾರಾಂಶ
ಈ ರಸ್ತೆಯಲ್ಲಿ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ಸಾಕಷ್ಟು ನಡೆದಿವೆ. ಈ ರಸ್ತೆ ಅಭಿವೃದ್ಧಿಗೆ ಈಗಾಗಲೇ ಶಾಸಕರು ಅನುದಾನ ತಂದು ಟೆಂಡರ್ ಪ್ರಕ್ರಿಯೆ ಮುಗಿಸಿದ್ದರೂ ಅಧಿಕಾರಿಗಳ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಕೆಲಸವಾಗುತ್ತಿಲ್ಲ. ತಕ್ಷಣವೇ ರಸ್ತೆ ನಿರ್ಮಿಸಲು ಅಧಿಕಾರಿಗಳು, ಗುತ್ತಿಗೆದಾರರು ಮುಂದಾಗಬೇಕು. ಇಲ್ಲದಿದ್ದಲ್ಲಿ ಸಂಘಟನೆಯಿಂದ ಲೋಕೋಪಯೋಗಿ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ .
ಬೇಲೂರು: ತಾಲೂಕಿನ ಗೆಂಡೇಹಳ್ಳಿಗೆ ತೆರಳುವ ಕಳಸಿನ ಕೆರೆ ಏರಿ ರಸ್ತೆ ಗುಂಡಿ ಬಿದ್ದು ವಾಹನಗಳು ಓಡಾಡಲು ಪರದಾಡುವಂತಾಗಿದ್ದು, ತಾಲೂಕು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಎಂ.ಕೆ.ಆರ್.ಸೋಮೇಶ್ ಮಾತನಾಡಿ, ಪ್ರವಾಸಿಗರು ಇಲ್ಲಿನ ಚೆನ್ನಕೇಶವ ಸ್ವಾಮಿ ದೇಗುಲ ವೀಕ್ಷಿಸಿದ ನಂತರ ಕಳಸ, ಹೊರನಾಡು, ಶೃಂಗೇರಿ ಹಾಗೂ ಇತರೆ ಭಾಗಗಳಿಗೆ ಕಳಸಿನ ಕೆರೆ ಏರಿ ರಸ್ತೆಯ ಮೂಲಕವೇ ತೆರಳಬೇಕು. ಆದರೆ ಕೆರೆ ಏರಿ ರಸ್ತೆ ಸಂಪೂರ್ಣ ಗುಂಡಿ ಬಿದ್ದು ಹಾಳಾಗಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಮಳೆ ಬಂದರಂತೂ ಗುಂಡಿ ಯಾವುದು, ರಸ್ತೆ ಯಾವುದು ತಿಳಿಯದಂತಾಗಿ ಅಪಘಾತಗಳು ಸಂಭವಿಸುತ್ತಿವೆ . ಕಲ್ಲುಗಳು ಮೇಲೆದ್ದು ಗುಂಡಿಗಳಿಂದ ಧೂಳು ಏಳುತಿದ್ದು ಓಡಾಡುವವರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ಥಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.ತಾಲೂಕು ಅಧ್ಯಕ್ಷ ಎಸ್.ಎಂ.ರಾಜು ಮಾತನಾಡಿ, ಈ ರಸ್ತೆಯಲ್ಲಿ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ಸಾಕಷ್ಟು ನಡೆದಿವೆ. ಈ ರಸ್ತೆ ಅಭಿವೃದ್ಧಿಗೆ ಈಗಾಗಲೇ ಶಾಸಕರು ಅನುದಾನ ತಂದು ಟೆಂಡರ್ ಪ್ರಕ್ರಿಯೆ ಮುಗಿಸಿದ್ದರೂ ಅಧಿಕಾರಿಗಳ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಕೆಲಸವಾಗುತ್ತಿಲ್ಲ. ತಕ್ಷಣವೇ ರಸ್ತೆ ನಿರ್ಮಿಸಲು ಅಧಿಕಾರಿಗಳು, ಗುತ್ತಿಗೆದಾರರು ಮುಂದಾಗಬೇಕು. ಇಲ್ಲದಿದ್ದಲ್ಲಿ ಸಂಘಟನೆಯಿಂದ ಲೋಕೋಪಯೋಗಿ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟನೆ ತಾಲೂಕು ಕಾರ್ಯಾಧ್ಯಕ್ಷ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಯುವ ಘಟಕದ ಅಧ್ಯಕ್ಷ ಹೇಮಂತ್, ಉಪಾಧ್ಯಕ್ಷ ಕುಮಾರ್, ಮುಖಂಡರಾದ ಮೀಸೆ ವಸಂತಕುಮಾರ್, ಜಯರಾಮ್, ಆಟೋ ಘಟಕದ ಲಕ್ಷ್ಮಣ್, ಉಮೇಶ್, ಮುಖಂಡರಾದ ರಮೇಶ್, ವಿನಯ್, ಚಂದ್ರು ಇತರರಿದ್ದರು.